ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಭಕ್ತಿ ಉಕ್ಕಿಸಿದ ಸರ್ಜಿಕಲ್‌ ದಾಳಿ

Last Updated 26 ಜನವರಿ 2019, 13:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನು ಗಣರಾಜ್ಯೋತ್ಸವದ ಶುಭಾಶಯ ಕೋರುತ್ತ ಆಗಸಕ್ಕೆ ಹಾರುತ್ತಿದ್ದರೆ ತ್ರಿವರ್ಣ ಧ್ವಜವೇ ಗಗನಕ್ಕೇರಿದಂತೆ ಭಾಸವಾಗುತ್ತಿತ್ತು. ಬೆಳಗಿನ ಚಳಿಯ ರಕ್ಷಣೆಗೆ ಬೆಚ್ಚನೆಯ ಉಡುಪು ಧರಿಸಿ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಕುಳಿತಿದ್ದವರ ಕಣ್ಣುಗಳಲ್ಲಿ ದೇಶಭಕ್ತಿ ತುಳುಕುತ್ತಿತ್ತು.

70ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಭಾನುವಾರ ಬೆಳಿಗ್ಗೆ ನೆರವೇರುತ್ತಿದ್ದಂತೆ ಎಲ್ಲೆಡೆ ತ್ರಿವರ್ಣ ಧ್ವಜಗಳೇ ರಾಜಾರಾಜಿಸುತ್ತಿದ್ದವು. ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ನೂರಾರು ಮಕ್ಕಳ ಹುಮ್ಮಸ್ಸು, ವೇಷಭೂಷಣ ಹಾಗೂ ನೃತ್ಯ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡಿದವು. ಮಕ್ಕಳ ಅಸಾಧಾರಣ ಪ್ರತಿಭೆ ಹಾಗೂ ದೇಶಪ್ರೇಮಕ್ಕೆ ಗಣ್ಯರು ತಲೆದೂಗಿದರು.

ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಬಾವುಟಕ್ಕೆ ಗೌರವ ಸೂಚಿಸುತ್ತಿದ್ದಂತೆ ಮಕ್ಕಳ ಆಕರ್ಷಕ ಪಥಸಂಚಲನ ನಡೆಯಿತು. ಪೊಲೀಸರ ಶಿಸ್ತುಬದ್ಧ ನಡಿಗೆ, ಹಿನ್ನೆಲೆಯಲ್ಲಿ ಕೇಳಿ ಬರುತ್ತಿದ್ದ ಬ್ಯಾಂಡ್‌ ಸದ್ದಿಗೆ ಎಲ್ಲರ ಎದೆಗಳಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಕೊಂಡಿತು. ಕ್ರೀಡಾಂಗಣದ ಸುತ್ತ ಕುಳಿತು ಪಥಸಂಚಲನ ವೀಕ್ಷಿಸುತ್ತಿದ್ದ ಸಾರ್ವಜನಿಕರು ಚಪ್ಪಾಳೆಯ ಮೂಲಕ ಮಕ್ಕಳನ್ನು ಹುರಿದುಂಬಿಸಿದರು.

ಸರ್ಜಿಕಲ್‌ ದಾಳಿ:

ಶ್ವೇತ ವರ್ಣದ ಉಡುಪು ಧರಿಸಿದ್ದ ಮಕ್ಕಳ ಎದುರು ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ್ದವರು ವಿಧ್ವಂಸಕ ಕೃತ್ಯಕ್ಕೆ ಹೊರಟವರಂತೆ ಕಾಣುತ್ತಿದ್ದರು. ತಲೆಗೆ ಹಸಿರು ಬಣ್ಣದ ವಸ್ತ್ರ ಸುತ್ತಿಕೊಂಡು ಮುಖ ಮುಚ್ಚಿಕೊಂಡಿದ್ದವರ ಕೈಯಲ್ಲಿ ಗನ್ನುಗಳಿದ್ದವು. ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ಈ ದಾಳಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ನೆನೆಯುವಂತೆ ಮಾಡಿತು.

ಈ ಘಟನೆ ಮಾಸುವ ಮುನ್ನವೇ ‘ಚೆಕ್‌ ದೇ ಚಕ್‌ ದೇ ಇಂಡಿಯಾ...’ ಹಾಡು ಮೊಳಗಿತು. ಶಿಸ್ತಿನ ಸಿಪಾಯಿಗಳು ತೆವಳಿಕೊಂಡು ಸಾಗಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದರು. ಅವರ ಮುಖದಲ್ಲಿ ಪ್ರತಿಕಾರದ ಭಾವ ಕಾಣುತ್ತಿತ್ತು. ಕ್ಷಣಾರ್ಧದಲ್ಲಿ ಉಗ್ರರ ನೆಲೆಗಳು ಧ್ವಂಸಗೊಂಡವು. ತ್ರಿವರ್ಣ ಧ್ವಜ ಹಾರಾಡತೊಡಗಿತು. 2016ರ ಸೆಪ್ಟೆಂಬರ್‌ 29ರಂದು ನಡೆದ ಸರ್ಜಿಕಲ್‌ ದಾಳಿಯನ್ನು ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕರ್ಷಕವಾಗಿ ಕಟ್ಟಿಕೊಟ್ಟರು.

ಪ್ರಕೃತಿಗೆ ನಮನ:

ನೋಡು ನೋಡುತ್ತಿದ್ದಂತೆ ಮೈದಾನದಲ್ಲಿ ಚಿಟ್ಟೆ, ಪಕ್ಷಿಗಳು ಹಾರಾಡತೊಡಗಿದವು. ಆನೆ ಘೀಳಿಡುತ್ತ ಓಡಾಡುತ್ತಿತ್ತು. ಮರ, ಗಿಡ, ಹೂ ಬಳ್ಳಿಗಳಲ್ಲಿದ್ದ ಎಲೆಗಳು ನೃತ್ಯ ಮಾಡುತ್ತಿದ್ದವು. ಸುಶ್ರಾವ್ಯವಾಗಿ ಕೇಳಿ ಬರುತ್ತಿದ್ದ ‘ನಮ್ಮ ನಾಡು ಕರುನಾಡು...’ ಗೀತೆ ಕಿವಿಗೆ ಇಂಪು ನೀಡುತ್ತಿತ್ತು. ಮಾನವನನ್ನು ಮೀರಿದ ವಿಸ್ಮಯ ಪ್ರಪಂಚವಾದ ಪ್ರಕೃತಿಯ ಮಹತ್ಪವನ್ನು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್‌ ವಿದ್ಯಾರ್ಥಿನಿಯರು ಸಾರಿದರು.

ಜಗತ್ತಿನ ಕಟ್ಟ ಕಡೆಯ ಮರ ಉರುಳಿದ ಬಳಿಕ, ಮೀನನ್ನು ತಿಂದ ನಂತರ, ನೀರಿನ ಕೊನೆಯ ಬಿಂದು ಆವಿಯಾದ ಬಳಿಕ ಹಣವನ್ನೇ ತಿಂದು ಬದುಕಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿತು.

ಸಂವಿಧಾನದ ಮಹತ್ವ:

ತ್ರಿವರ್ಣ ಧ್ವಜದ ಬಣ್ಣವನ್ನು ಮೈಗೆ ಬಳಿದುಕೊಂಡಿದ್ದ ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆಯ ಮಕ್ಕಳು ನೃತ್ಯ ಮಾಡುತ್ತ ಅಂಗಳಕ್ಕೆ ಅಡಿ ಇಡುತ್ತಿದ್ದರೆ ಪ್ರೇಕ್ಷಕರ ಮನಸ್ಸುಗಳು ಪುಳಕಗೊಂಡವು. ಸ್ವಾತಂತ್ರ್ಯ ಹೋರಾಟದ ಅಗತ್ಯವನ್ನು ಮಹಾತ್ಮ ಗಾಂಧಿ, ಸಂವಿಧಾನದ ಮಹತ್ವವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಬೋಧಿಸಿದರು. ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ವೀರ ಮದಕರಿ ನಾಯಕ ವೇಷಧಾರಿಗಳು ಒಬ್ಬೊಬ್ಬರಾಗಿ ಇತಿಹಾಸದ ನೆನಪುಗಳಿಗೆ ಪ್ರೇಕ್ಷಕರನ್ನು ಕರೆದೊಯ್ದರು. ರಾಷ್ಟ್ರ ಲಾಂಛನ, ರಾಷ್ಟ್ರೀಯ ಪ್ರಾಣಿ ದೇಶದ ಹೆಮ್ಮೆಯನ್ನು ಸಾರಿದವು.

ರೈತ ಪರ ಸರ್ಕಾರ: ಸಚಿವ

ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ವಲಯದಲ್ಲಿನ ಸಾಲವನ್ನು ಮನ್ನಾ ಮಾಡಿದ ಸಮ್ಮಿಶ್ರ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಜಿಲ್ಲೆಯ ಸಹಕಾರಿ ಬ್ಯಾಂಕುಗಳಲ್ಲಿದ್ದ 36 ಸಾವಿರ ರೈತರ ₹ 170 ಕೋಟಿ ಸಾಲವನ್ನು ಈಗಾಗಲೇ ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ₹ 1,123 ಕೋಟಿ ಸಾಲ ಮನ್ನಾಗಿ ಪ್ರಕ್ರಿಯೆ ನಡೆಯುತ್ತಿದ್ದು, ಶೇ 88ರಷ್ಟು ದಾಖಲೆಗಳನ್ನು ಸಂಗ್ರಹಿಸಲಾಗಿದೆ’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ 4,118 ಜನರಿಗೆ ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಕೊಡಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡಗಳಿಗೆ ₹ 14 ಕೋಟಿ ನೀಡಲಾಗಿದೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ಅನುದಾನ ಮಂಜೂರು ಮಾಡಲಾಗಿದ್ದು, ಗುಳೆ ತಪ್ಪಿಸಿ ಉದ್ಯೋಗ ನೀಡಲಾಗುತ್ತಿದೆ’ ಎಂದು ಹೇಳಿದರು.

ವೈದ್ಯ ಡಾ.ಡಿ.ಪ್ರಕಾಶ್‌, ಬಿ.ಎಲ್‌.ಈಶ್ವರಪ್ರಸಾದ್‌, ಎಂ.ಎಂ.ಕೃಷ್ಣಮೂರ್ತಿ, ಎನ್‌.ಗಿರೀಶ್‌, ಎಚ್‌.ಆರ್‌.ಸನಾವುಲ್ಲಾ, ಹನುಮಂತಪ್ಪ ಪೂಜಾರ ಅವರು ಸರ್ವೋತ್ತಮ ಪ್ರಶಸ್ತಿ ಪಡೆದರು. ಎಂ.ಮಹದೇವಯ್ಯ, ಕರಿಯಪ್ಪ ಅವರು ವಿಶೇಷ ಪ್ರಶಸ್ತಿಗೆ ಭಾಜರಾದರು.

ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ ಬಾರ್ಕಿ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ತಹಶೀಲ್ದಾರ್‌ ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT