ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಳೈಸಿದ ಸ್ವದೇಶಿ ಪ್ರೇಮ, ರಾಷ್ಟ್ರಭಕ್ತಿ

ಗಣತಂತ್ರ ಹಬ್ಬದಲ್ಲಿ ಕಣ್ಮನಗಳಿಗೆ ಮುದವನ್ನುಂಟು ಮಾಡಿದ ವಿದ್ಯಾರ್ಥಿಗಳ ನೃತ್ಯ ರೂಪಕ
Last Updated 26 ಜನವರಿ 2020, 12:48 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇಶಭಕ್ತಿ, ಸ್ವದೇಶಿ ಪ್ರೇಮ, ಪರಿಸರ ಜಾಗೃತಿ ಮೂಡಿಸುವ ಗೀತೆಗಳೊಂದಿಗೆ ವಿದ್ಯಾರ್ಥಿಗಳಿಂದ ನೃತ್ಯ ಆರಂಭವಾದಾಗ ಸಭಿಕರಿಂದ ಹೆಜ್ಜೆ ಹೆಜ್ಜೆಗೂ ಚಪ್ಪಾಳೆ. ರಾಷ್ಟ್ರದ ಜೀವನಾಡಿ ಅನ್ನದಾತರಿಗೆ ಹಾಗೂ ವೀರ ಯೋಧರಿಗೆ ನಮನ ಸಲ್ಲಿಸಿದ ದೃಶ್ಯ ನೆರೆದಿದ್ದವರ ಕಣ್ಣಾಲಿ ಒದ್ದೆಯಾಗಿಸಿತು.

ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ರೇಕ್ಷಕರ ಮೈಮನಗಳಲ್ಲಿ ದೇಶ ಭಕ್ತಿಯ ಕಿಡಿಹೊತ್ತಿಸಿ ಸಂಚಲನ ಮೂಡಿಸಿದರು.

ಮಕ್ಕಳ ಹುಮ್ಮಸ್ಸು, ವೇಷಭೂಷಣ ಹಾಗೂ ನೃತ್ಯ ರೂಪಕಗಳು ಕಣ್ಮನಗಳಿಗೆ ಹಬ್ಬವನ್ನುಂಟು ಮಾಡಿದವು. ಮಕ್ಕಳ ಅಸಾಧಾರಣ ಪ್ರತಿಭೆ ಹಾಗೂ ದೇಶಪ್ರೇಮಕ್ಕೆ ಗಣ್ಯರು, ಪ್ರೇಕ್ಷಕರು ತಲೆದೂಗಿದರು.

‘ಮಾತಾಡ್‌ ಮಾತಾಡು ಮಲ್ಲಿಗೆ’ ಚಿತ್ರದ ‘ಎಲ್ಲಾ ಮಾಯ ನಾಳೆ ನೀವು ಮಾಯ’ ಹಾಡಿನೊಂದಿಗೆ ಇದೇ ಪ್ರಥಮ ಬಾರಿ ಮೈದಾನ ಪ್ರವೇಶಿಸಿದ ರಾಕ್‌ಫೋರ್ಟ್‌ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಸ್ವದೇಶಿ ಪ್ರೇಮವನ್ನು ಎತ್ತಿಹಿಡಿದರು.

ಗಣಿಕಾರಿಕೆಯಿಂದಾಗಿ ಸಂಪತ್ತು ಬರಿದಾಗುತ್ತಿದೆ. ಪರಿಸರ ಮಾತೆಯ ಮೇಲೆ ನಿತ್ಯ ನಡೆಯುತ್ತಿರುವ ಈ ರೀತಿಯ ದೌರ್ಜನ್ಯ, ಅತ್ಯಾಚಾರದಿಂದ ನಾನಷ್ಟೇ ಅಲ್ಲ, ಮನುಷ್ಯರಾದ ನೀವೆಲ್ಲರೂ ನಾಶವಾಗಲಿದ್ದೀರಿ ಎಂಬ ಸಂದೇಶವನ್ನು ನೃತ್ಯದ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರವಾನಿಸಿದರು.

ವಿದೇಶಿ ವಸ್ತು ತ್ಯಜಿಸಿ, ಸ್ವದೇಶಿ ವಸ್ತು ಬಳಸಿ ದೇಶದ ಪ್ರಗತಿಗೆ ಸಹಕರಿಸಿ ಎಂಬುದಾಗಿ ಜಾಗೃತಿ ಮೂಡಿಸಲು ಮುಂದಾದರು. ರಾಷ್ಟ್ರೀಯ ಭಾವೈಕ್ಯತೆ, ಜಲ ಸಂರಕ್ಷಣೆ ಮಹತ್ವ ಸಾರಿದರು. 15ಕ್ಕೂ ಹೆಚ್ಚು ನಿಮಿಷ ಪ್ರಸ್ತುತಪಡಿಸಿದ ಈ ನೃತ್ಯರೂಪಕಕ್ಕೆ ಸಭಿಕರು ಮನಸೋತರು. ಇಡೀ ಮೈದಾನದಲ್ಲಿ ಮೌನ ಆವರಿಸಿತ್ತು.

ಪುಲ್ವಾಮ, ಸರ್ಜಿಕಲ್ ದಾಳಿ ನೆನಪು: ಶ್ವೇತ ವರ್ಣದ ಉಡುಪು ಧರಿಸಿದ್ದ ಮಕ್ಕಳ ಎದುರು ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ್ದವರು ವಿಧ್ವಂಸಕ ಕೃತ್ಯಕ್ಕೆ ಹೊರಟವರಂತೆ ಕಾಣುತ್ತಿದ್ದರು. ಅವರ ಕೈಯಲ್ಲಿ ಗನ್ನುಗಳಿದ್ದವು. ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ಈ ದಾಳಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ನೆನೆಯುವಂತೆ ಮಾಡಿತು.

ಈ ಘಟನೆ ಮಾಸುವ ಮುನ್ನವೇ ‘ವಂದೇ ಮಾತರಂ...’ ಹಾಡು ಮೊಳಗಿತು. ಶಿಸ್ತಿನ ಸಿಪಾಯಿಗಳು ತೆವಳಿಕೊಂಡು ಸಾಗಿ ಪಾಕ್‌ ಆಕ್ರಮಿತ ಪ್ರದೇಶಕ್ಕೆ ನುಗ್ಗಿದರು. ಅವರ ಮುಖದಲ್ಲಿ ಪ್ರತಿಕಾರದ ಭಾವ ಕಾಣುತ್ತಿತ್ತು. ಕ್ಷಣಾರ್ಧದಲ್ಲಿ ಉಗ್ರರ ನೆಲೆಗಳು ಧ್ವಂಸಗೊಂಡವು. ತ್ರಿವರ್ಣ ಧ್ವಜ ಹಾರಾಡತೊಡಗಿತು. ಸರ್ಜಿಕಲ್‌ ದಾಳಿಯನ್ನು ಚಿನ್ಮೂಲಾದ್ರಿ, ವಿದ್ಯಾಭಾರತಿ ಪ್ರೌಢಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕರ್ಷಕವಾಗಿ ಕಟ್ಟಿಕೊಟ್ಟರು.

ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ನಡೆಸಿ ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಘಟನೆಯ ರೂಪಕ ನೋಡುಗರ ಗಮನ ಸೆಳೆಯಿತು. ವಿದ್ಯಾರ್ಥಿ ಸಮೂಹ ಅಮೋಘ ಪ್ರದರ್ಶನ ನೀಡಿದರು.

ವೀರಪ್ಪನಾಯಕ ಚಿತ್ರದ ‘ಈ ಮಣ್ಣಿನ ಹೆಮ್ಮೆಯ ಮಗನಿವನು’ ಹಾಡಿನೊಂದಿಗೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳು ಮೈದಾನ ಪ್ರವೇಶಿಸಿದಾಗ ಸುತ್ತಲೂ ನೆರೆದಿದ್ದ ಸಭಿಕರಿಂದ ಕರತಾಡನ ವ್ಯಕ್ತವಾಯಿತು.

ಪುಟ್ನಂಜ ಚಿತ್ರದ ‘ನಮ್ಮಮ್ಮಾ ನಮ್ಮಮ್ಮಾ’, ಸಿಪಾಯಿ ಚಿತ್ರದ ‘ಬಂದ ಬಂದ ಮೇಘರಾಜ’ ಸೇರಿ ಇತರೆ ಚಿತ್ರಗೀತೆಗಳಿಗೆ ಮೈನವಿರೇಳಿಸುವಂತೆ ನೃತ್ಯ ಪ್ರದರ್ಶಿಸಿ, ನೋಡುಗರನ್ನು ಆಕರ್ಷಿಸಿದರು. ಮಣ್ಣಿನ ಮಹತ್ವ, ದೇಶದ ಬೆನ್ನೆಲುಬು ರೈತರ, ಮಳೆ ಕುರಿತು ಜಾಗೃತಿ ಮೂಡಿಸಲು ಮುಂದಾದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ‘ಮೇರಾ ಭಾರತ್ ಮಹಾನ್’ ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯೂ ಸರ್ಕಾರಿ, ಅನುದಾನ ರಹಿತ, ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ, ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಕಲ್ಪಿಸಿತು. ನೃತ್ಯ ಪ್ರದರ್ಶಿಸಿದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೋಡುಗರ ಮನಸ್ಸನ್ನು ಹಿಡಿದಿಡುವಲ್ಲಿ ಸಫಲರಾದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ವೆಂಕಟೇಶಯ್ಯ, ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT