ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಬವಣೆ ನೀಗಿಸಲು ಆಗ್ರಹ

ಸಾಮಾನ್ಯ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ನಗರಸಭೆ ಸದಸ್ಯರು
Last Updated 19 ಮೇ 2022, 2:58 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಹಲವು ಭಾಗಗಳಲ್ಲಿ ವಾರಕ್ಕೊಮ್ಮೆಯೂ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಕೂಡ ನೀಡುತ್ತಿಲ್ಲ. ಎಲ್ಲ ಬಡಾವಣೆಗೂ ನೀರು ನಿಯಮಿತವಾಗಿ ನೀಡಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಅಧ್ಯಕ್ಷೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಬವಣೆಯ ಬಗ್ಗೆ ಚರ್ಚೆಯಾಯಿತು. ವಿ.ವಿ.ಸಾಗರ ಹಾಗೂ ಶಾಂತಿಸಾಗರದ ನೀರು ಹಂಚಿಕೆಯಲ್ಲಿ ತೊಂದರೆಯಾಗದಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಶಾಂತಿಸಾಗರದಿಂದ ನೀರು ಸರಬರಾಜು ಮಾಡುವ ವ್ಯವಸ್ಥೆಗೆ ಸಂಬಂಧಿಸಿದ ವಿಷಯ ಪ್ರಸ್ತಾಪವಾಗುತ್ತಿದ್ದಂತೆ 5ನೇ ವಾರ್ಡ್‌ ಸದಸ್ಯ ಹರೀಶ್‌ ಈ ಬಗ್ಗೆ ಧ್ವನಿಯೆತ್ತಿದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಜೆ.ಜೆ. ಹಟ್ಟಿ, ಚೋಳಗುಡ್ಡ ಸೇರಿ ನಗರ ವ್ಯಾಪ್ತಿಯ ವಿವಿಧ ಬಡಾವಣೆಯ ನೀರಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದರು.

‘ಶಾಂತಿಸಾಗರದ ನೀರು ನಿಯಮಿತವಾಗಿ ಸರಬರಾಜು ಆಗುತ್ತಿಲ್ಲ. ಏಕಾಏಕಿ ನೀರು ಪೂರೈಕೆ ಆಗದಿದ್ದರೆ ಜನರು ಆತಂಕಕ್ಕೆ ಒಳಗಾಗುತ್ತಾರೆ. ವಾರ್ಡ್‌ ಸದಸ್ಯರನ್ನು ಪ್ರಶ್ನಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ’ ಎಂದು ಹರೀಶ್‌ ಪ್ರಶ್ನಿಸಿದರು.

‘ವಿ.ವಿ.ಸಾಗರ ಹಾಗೂ ಶಾಂತಿಸಾಗರದಿಂದ ನೀರು ಪೂರೈಕೆ ಮಾಡುವಲ್ಲಿ ತೊಂದರೆ ಆಗುತ್ತಿರುವುದು ನಿಜ. ಇದರಿಂದ ಕೆಲ ಬಡಾವಣೆಗಳಿಗೆ ನಿರಂತರವಾಗಿ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಮೊದಲೇ ಮಾಹಿತಿ ನೀಡಬೇಕಿತ್ತು. ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್‌ ಸಮಸ್ಯೆ ಕೂಡ ಕಾಡುತ್ತಿದೆ’ ಎಂದು ಎಂಜಿನಿಯರ್‌ ಕಿರಣ್‌ ಸಮರ್ಥನೆ ನೀಡಿದರು.

ಬಿ.ಡಿ. ರಸ್ತೆ ಹಾಗೂ ಹೊಳಲ್ಕೆರೆ ಮಾರ್ಗದ ಮಧ್ಯ ಭಾಗದ ಹಸಿರೀಕರಣಕ್ಕೆ ಸಾಮಾನ್ಯ ಸಭೆ ಅನುಮೋದನೆ ನೀಡಿತು. ಚಳ್ಳಕೆರೆ ಗೇಟ್‌ನಿಂದ ಗಾಂಧಿ ವೃತ್ತದವರೆಗಿನ ಬಿ.ಡಿ.ರಸ್ತೆಗೆ ₹ 94 ಲಕ್ಷ ಹಾಗೂ ಗಾಂಧಿ ವೃತ್ತದಿಂದ ಕನಕ ವೃತ್ತದವರೆಗಿನ ಹೊಳಲ್ಕೆರೆ ಮಾರ್ಗಕ್ಕೆ ₹ 98 ಲಕ್ಷದ ಪ್ರತ್ಯೇಕ ಟೆಂಡರ್‌ ಕರೆಯಲಾಗಿದೆ.

ರಾಜಕಾಲುವೆ ಒತ್ತುವರಿ, ಅನಧಿಕೃತ ಕಟ್ಟಡ ತೆರವುಗೊಳಿಸುವಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ 35ನೇ ವಾರ್ಡ್‌ ಸದಸ್ಯ ಭಾಸ್ಕರ್‌ ಅಸಮಾಧಾನ ಹೊರಹಾಕಿದರು. ನಗರಸಭೆ ವತಿಯಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲವೆಂದು 25ನೇ ವಾರ್ಡ್‌ ಸದಸ್ಯ ಮೊಹಮ್ಮದ್‌ ಜೈಲಾದ್ದೀನ್‌ ಆಕ್ಷೇಪ ವ್ಯಕ್ತಪಡಿಸಿದರು.

ನಗರಸಭೆ ಉಪಾಧ್ಯಕ್ಷೆ ಅನುರಾಧ ಇದ್ದರು.

ಸಾಮಾನ್ಯ ಸಭೆಗೂ ಕುಂದುಕೊರತೆ ಆಲಿಸುವುದಕ್ಕೂ ಸಂಬಂಧವಿಲ್ಲ. ವಾರ್ಡ್‌ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಎಲ್ಲ ಸಮಯದಲ್ಲಿಯೂ ಗಮನ ಸೆಳೆಯಲು ಅವಕಾಶವಿದೆ.

–ಜೆ.ಟಿ.ಹನುಮಂತರಾಜು, ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT