ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜಾತಿ ಸಂಘಟಿತವಾದರೆ ಹಿಂದುತ್ವಕ್ಕೆ ಬಲ

ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ವಿಶೇಷ ಕಾರ್ಯಕಾರಿಣಿಯಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ
Last Updated 4 ನವೆಂಬರ್ 2021, 6:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾತಿ ಸಂಘಟಿತವಾದರೆ, ಅಭಿವೃದ್ಧಿ ಹೊಂದಿದರೆ ಹಿಂದುತ್ವ ಬಲಗೊಳ್ಳುತ್ತದೆ. ಹಿಂದುತ್ವದ ಪರಿಕಲ್ಪನೆ ಎಲ್ಲ ಜಾತಿಗಳನ್ನು ಒಳಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ತಿರುಮಲ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ವಿಶೇಷ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

‘ಕುಟುಂಬದಂತೆ ಜಾತಿ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕಾಳಜಿ ತೋರಬೇಕು. ಜೊತೆಗೆ ಹಿಂದುತ್ವಕ್ಕೆ ಒತ್ತು ನೀಡಬೇಕು. ದೇಶದ ವಿಚಾರ ಮುನ್ನೆಲೆಗೆ ಬಂದಾಗ ಧರ್ಮವನ್ನು ಪಕ್ಕಕ್ಕೆ ಇಡಬೇಕು. ಈವರೆಗೆ ದೇಶವನ್ನಾಳಿದ ಕಾಂಗ್ರೆಸ್‌ ಜಾತಿಯನ್ನು ಚುನಾವಣೆಗೆ ಬಳಕೆ ಮಾಡಿಕೊಂಡಿದೆ. ಜಾತಿಯನ್ನು ರಾಜಕೀಯಕ್ಕೆ ಸೀಮಿತಗೊಳಿಸಿ ತಪ್ಪು ಮಾಡಿದೆ’ ಎಂದು ಕಿಡಿಕಾರಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿದೆ. ಈ ಮೂರು ವರ್ಗಗಳನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಅಧಿಕಾರ ನಡೆಸಿದೆ. ಹಿಂದುಳಿದ ಜಾತಿಗಳನ್ನು ಬಡತನದಿಂದ ಮೇಲೆತ್ತುವ ಕಾರ್ಯವನ್ನು ಈವರೆಗೆ ಮಾಡಲಿಲ್ಲ. ಇದು ಯುವಸಮೂಹಕ್ಕೆ ಅರ್ಥವಾಗಿದೆ’ ಎಂದು ಹೇಳಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಏಳಿಗೆ ಕಾಣುತ್ತಿವೆ. ಕೇಂದ್ರದ 77 ಸಚಿವರಲ್ಲಿ 45 ಸಚಿವರು ಈ ಸಮುದಾಯದಕ್ಕೆ ಸೇರಿದವರು. ದೇಶದ ಇತಿಹಾಸದಲ್ಲಿಯೇ ಇಷ್ಟು ಸಚಿವ ಸ್ಥಾನಗಳು ಈ ಮೂರು ಸಮುದಾಯಕ್ಕೆ ಸಿಕ್ಕಿರಲಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು ಮಾತನಾಡಿ, ‘ರಾಜ್ಯದಲ್ಲಿ 205 ಹಿಂದುಳಿದ ಜಾತಿಗಳಿವೆ. 800ಕ್ಕೂ ಹೆಚ್ಚು ಉಪಜಾತಿಗಳಿವೆ. ಬಹುತೇಕ ಜಾತಿಯ ನಾಯಕರು ಈವರೆಗೆ ಗ್ರಾಮ ಪಂಚಾಯಿತಿ ಸದಸ್ಯ ಕೂಡ ಆಗಲು ಸಾಧ್ಯವಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗುತ್ತಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಒಬಿಸಿ ಮೋರ್ಚಾ ಪದಾಧಿಕಾರಿಗಳಾದ ಸುರೇಶ್‍ಬಾಬು, ಹೇಮಂತ್‍ಕುಮಾರ್, ಕೃಷ್ಣ, ಪ್ರವೀಣ್, ನವೀನ್, ಶಂಕ್ರಪ್ಪ ಇದ್ದರು.

*

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮಾಡಿದ ಕೆಲಸವನ್ನು ನೆನಪಿಸಿಕೊಳ್ಳಬೇಕಿದೆ. ಹಿಂದುಳಿದ ವರ್ಗದ ಸಮುದಾಯದ ಏಳಿಗೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ.
-ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

*

ಹಿಂದುಳಿದ ಸಮುದಾಯಕ್ಕೆ ಈವರೆಗೆ ಬೆಣ್ಣೆ–ತುಪ್ಪ ತೋರಿಸಿ ಮೋಸ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಶೇ 45ರಷ್ಟು ಹಿಂದುಳಿದ ಸಮುದಾಯದ ಜನರನ್ನು ಬಿಜೆಪಿಗೆ ಕರೆತರಲಾಗುತ್ತಿದೆ.
-ಸಿದ್ದೇಶ್‌ ಯಾದವ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT