ಗುರುವಾರ , ಡಿಸೆಂಬರ್ 5, 2019
19 °C
ಹಣಕಾಸಿನ ಕೊರತೆ ನೀಗಿಸಲು ಶಾಸಕ ತಿಪ್ಪಾರೆಡ್ಡಿ ಆಶ್ವಾಸನೆ

ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದಾವಣಗೆರೆ – ಹರಿಹರ ರಸ್ತೆ ಅಭಿವೃದ್ಧಿ ಮಾದರಿಯಲ್ಲೇ ಬಿ.ಡಿ.ರಸ್ತೆ ನಿರ್ಮಿಸಿ. ಅಭಿವೃದ್ಧಿ ಕಾಮಗಾರಿಯನ್ನು ಜನರು ಸದಾ ನೆನಪಿನಲ್ಲಿ ಇಟ್ಟುಕೊಳ್ಳುಬೇಕು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಇಲ್ಲಿನ ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರ, ಜೆಎಂಐಟಿ ವೃತ್ತದಿಂದ ಜಗಳೂರು ಮಹಲಿಂಗಪ್ಪ ಟವರ್‌, ಪ್ರವಾಸಿ ಮಂದಿರದಿಂದ ಕನಕ ವೃತ್ತದವರೆಗೂ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಸೋಮವಾರ ನಗರಸಭೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಮೊದಲು ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗೂ ₹ 19 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಅನುದಾನ ನೀಡಲಾಗಿತ್ತು. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಮೊತ್ತ ಕಡಿಮೆಯಾಗಲಿದೆ ಎಂದಿದ್ದಾರೆ. ₹ 7 ಕೋಟಿ ಹೆಚ್ಚುವರಿ ಅನುದಾನದ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರಿಗೆ ನೀಡಿರುವ ವಿಶೇಷ ಅನುದಾನದಲ್ಲಿ ₹ 4 ಕೋಟಿ, ನಗರಸಭೆಯಿಂದ 14ನೇ ಹಣಕಾಸು ಯೋಜನೆಯಡಿ ₹ 1.7 ಕೋಟಿ ಸೇರಿ ಒಟ್ಟು ₹ 5.7 ಕೋಟಿ ನೀಡಲಾಗುವುದು. ಉಳಿದ ಅನುದಾನವನ್ನು ಶಾಸಕರ ಇತರೆ ಅನುದಾನದಡಿ ನೀಡುತ್ತೇನೆ. ಈಗ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇನ್ನೂ ಮುಂದೆ ವೇಗ ಪಡೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜೆಎಂಐಟಿ ವೃತ್ತದಿಂದ ಜಗಳೂರು ಮಹಲಿಂಗಪ್ಪ ಟವರ್‌ವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹ 18 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲಿಯೂ ₹ 9 ಕೋಟಿ ಹೆಚ್ಚುವರಿಯಾಗಲಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಇರುವ ಅನುದಾನದಲ್ಲಿ ಎಲ್ಲಿಯವರೆಗೂ ನಿರ್ಮಿಸಲು ಸಾಧ್ಯವೋ ಅಲ್ಲಿಯವರೆಗೂ ಪೂರೈಸಿ’ ಎಂದು ಭರವಸೆ ನೀಡಿದರು.

‘ಪ್ರವಾಸಿ ಮಂದಿರದಿಂದ ಕನಕ ವೃತ್ತ ಅಥವಾ ಮಾಳಪ್ಪನಹಟ್ಟಿ ಸರ್ಕಲ್‌ವರೆಗೂ ರಸ್ತೆ ಅಭಿವೃದ್ಧಿಗಾಗಿ ₹ 18 ಕೋಟಿ ನೀಡಲಾಗಿದೆ. ಮೂರು ಬಾರಿ ಟೆಂಡರ್‌ ಕರೆಯಲಾಗಿದೆ. ಆದರೆ, ಯಾವ ಗುತ್ತಿಗೆದಾರರು ಆಸಕ್ತಿ ತೋರಿ ಮುಂದೆ ಬರುತ್ತಿಲ್ಲ. ಕಟ್ಟಡಗಳ ತೆರವು ಸೇರಿ ಇತರೆ ಕೆಲ ಕಾರಣಗಳಿಂದಾಗಿ ಹಿಂದೇಟು ಹಾಕುತ್ತಿದ್ದಾರೆ. ಹೊರ ಜಿಲ್ಲೆಯವರಿಗಾದರೂ ಪರವಾಗಿಲ್ಲ, ಆದಷ್ಟೂ ಬೇಗ ಗುತ್ತಿಗೆ ನೀಡಿ ಕಾಮಕಾರಿ ಆರಂಭಿಸಿ’ ಎಂದು ಸೂಚಿಸಿದರು.

‘ಈ ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಮುಖ ರಸ್ತೆ ಮಾರ್ಗಗಳಾದ್ದರಿಂದ ಕಳಪೆ ಆಗಕೂಡದು. ಪಾದಚರಿ ಮಾರ್ಗ, ಸರ್ವೀಸ್ ರಸ್ತೆ, ವಿದ್ಯುತ್ ದೀಪಾಲಂಕಾರ, ನಾಲ್ಕು ರಸ್ತೆಗಳು ಕೂಡುವಂಥ ಸ್ಥಳಗಳಲ್ಲಿ ದೊಡ್ಡದಾದ ವೃತ್ತ ನಿರ್ಮಾಣ ಸೇರಿ ರಾಷ್ಟ್ರೀಯ ಹೆದ್ದಾರಿಗಳಂತೆ ಸುಂದರವಾಗಿ ಕಾಣಬೇಕು. ಆದ್ದರಿಂದ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ’ ಎಂದ ಅವರು, ನನ್ನ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಒಟ್ಟು ₹ 300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ’ ಎಂದರು.

ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಬಾಬು, ನಗರಸಭೆ ಪೌರಾಯುಕ್ತ ಹನುಮಂತರಾಜು ಅವರೂ ಇದ್ದರು.

ಪ್ರತಿಕ್ರಿಯಿಸಿ (+)