ಮಂಗಳವಾರ, ಸೆಪ್ಟೆಂಬರ್ 27, 2022
27 °C
ಹಿರೇಹಳ್ಳಿಯಿಂದ ಪಾಲನಾಯಕನಕೋಟೆ- ಗೌರಸಮುದ್ರ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ

ಗೌರಸಮುದ್ರ ಜಾತ್ರೆಯೊಳಗೆ ಸಜ್ಜಾಗುವವೇ ರಸ್ತೆಗಳು?

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಪ್ರಸಿದ್ಧ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ವೇಳೆಗೆ ಜಾತ್ರೆ ನಡೆಯುವ ತುಂಬಲು ಮತ್ತು ಗೌರಸಮುದ್ರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಹೊರತುಪಡಿಸಿದಲ್ಲಿ ಅತಿ ಹೆಚ್ಚು ಜನ ಸೇರುವ ಜಾತ್ರೆಯಾಗಿ ಗೌಸಂದ್ರ ಮಾರಮ್ಮದೇವಿ ಜಾತ್ರೆ ಹೊರಹೊಮ್ಮಿದೆ. ಆ. 28ರಿಂದ ಜಾತ್ರೆ ಆರಂಭವಾಗುತ್ತಿದ್ದು, ಐದು ದಿನಗಳ ಕಾಲ ನಡೆಯಲಿದೆ. ಜಾತ್ರೆಗೆ ಬಯಲುಸೀಮೆ ಜಿಲ್ಲೆಗಳ ಜನ ಮತ್ತು ನೆರೆಯ ಸೀಮಾಂಧ್ರದ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ವೇಳೆಗೆ ರಸ್ತೆಗಳ ದುರಸ್ತಿ ಮಾಡಿಸಬೇಕು ಎಂದು ದೇವಸ್ಥಾನ ಸಮಿತಿ ಈಚೆಗೆ ಭೇಟಿ ನೀಡಿದ್ದ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ
ಸಲ್ಲಿಸಿದೆ.

ಚಿತ್ರನಾಯಕನಹಳ್ಳಿ ಕ್ರಾಸ್- ತುಂಬಲು, ಕೋನಸಾಗರ- ಮಲ್ಲಸಮುದ್ರ ಕ್ರಾಸ್- ತುಂಬಲು, ಕೊಂಡ್ಲಹಳ್ಳಿ- ಗೌರಸಮುದ್ರ ರಸ್ತೆ, ಹನುಮಂತನಹಳ್ಳಿ- ದೊಡ್ಡಕೆರೆ ಮೂಲಕ ಗೌರಸಮುದ್ರ, ಹಿರೇಹಳ್ಳಿ- ಪಾಲನಾಯಕನ ಕೋಟೆ- ಗೌರಸಮುದ್ರ, ಮಲ್ಲಸಮುದ್ರ- ಕೂತ್ಲಾರಹಟ್ಟಿ- ತುಂಬಲು, ಭೋಗನಹಳ್ಳಿ- ತುಂಬಲು ರಸ್ತೆಗಳನ್ನು ದುರಸ್ತಿ ಮಾಡಿಸಬೇಕಿದೆ ಎಂದು ಮನವಿ ಮಾಡಲಾಗಿದೆ.

‘ಈ ಪೈಕಿ ಹಿರೇಹಳ್ಳಿಯಿಂದ ಪಾಲನಾಯಕನಕೋಟೆ- ಗೌರಸಮುದ್ರ ಸಂಪರ್ಕ ರಸ್ತೆ ಪೂರ್ಣ ಮಣ್ಣಿನಿಂದ ಕೂಡಿದ್ದು, ಮಳೆಯಿಂದ ದೊಡ್ಡ ಗುಂಡಿಗಳು ಬಿದ್ದಿದೆ. ರಸ್ತೆಬದಿ ಬೇಕಾಬಿಟ್ಟಿ ಜಾಲಿಗಿಡ ಬೆಳೆದಿವೆ. ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎಂದು ಅನೇಕ ವರ್ಷಗಳಿಂದ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ಹಿರೇಹಳ್ಳಿಯಿಂದ ಗೌರಸಮುದ್ರ 7 ಕಿ.ಮೀ. ಇದೆ. ಈ ರಸ್ತೆಯಾದಲ್ಲಿ ಗೌರಸಮುದ್ರ ಹಾಗೂ ಪುಣ್ಯಕ್ಷೇತ್ರ ನಾಯಕನಹಟ್ಟಿ ಸಂಪರ್ಕ 20 ಕಿ.ಮೀ ಒಳಗೆ ಸಿಗಲಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ 150 ‘ಎ’ ಮೂಲಕ ಬರುವ ಭಕ್ತರು ಜಾತ್ರೆಗೆ ಬರಲು ಇದು ಅತಿ ಸುಲಭ ಮತ್ತು ಹತ್ತಿರದ ರಸ್ತೆಯಾಗಲಿದೆ’ ಎಂದು ಮಲ್ಲೂರಹಳ್ಳಿಯ ಗುರುದತ್ ಹೇಳಿದರು.

‘ಜಾತ್ರೆಯನ್ನು ಸಂಪರ್ಕಿಸುವ ಒಟ್ಟು 19 ರಸ್ತೆಗಳನ್ನು ಗುರುತಿಸಲಾಗಿದ್ದು, ಎಲ್ಲ ರಸ್ತೆಗಳ ಇಕ್ಕೆಲ ಸ್ವಚ್ಛತೆ,
ಗುಂಡಿ ಮುಚ್ಚುವುದು, ತೇಪೆ ಹಾಕುವುದು ಸೇರಿದಂತೆ ವಾಹನ ಓಡಾಟಕ್ಕೆ ಸಿದ್ಧಪಡಿಸುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾತ್ರೆಗೂ ಮುನ್ನ ಎಲ್ಲ ರಸ್ತೆಗಳಿಗೆ ಭೇಟಿ ಮಾಡಿ ಪರಿಶೀಲಿಸಲಾಗುವುದು. ಹಿರೇಹಳ್ಳಿ- ಗೌರಸಮದ್ರ ರಸ್ತೆ ದುರಸ್ತಿ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯಬೇಕಿದೆ’ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಮಾಹಿತಿ
ನೀಡಿದರು.

ಮಧ್ಯಾಹ್ನ ಮಾರಿ ಜಾತ್ರೆ

‘ಈ ಜಾತ್ರೆಯು ಮಧ್ಯಾಹ್ನ ಮಾರಿ ಜಾತ್ರೆ ಎಂಬ ಹೆಸರು ಪಡೆದಿದೆ. ತುಂಬಲು ಜಾತ್ರೆಯಂದು ಹೆಚ್ಚು ಭಕ್ತರು ಬೆಳಿಗ್ಗೆ 9-12ರವರೆಗೆ ಹೆಚ್ಚು ಸೇರುವ ಕಾರಣ ನೂಕು ನುಗ್ಗಲು ಆಗುತ್ತದೆ. ಇದರಿಂದ ಅನೇಕ ಕಡೆ ಟ್ರಾಫಿಕ್ ಜಾಮ್ ಆಗುತ್ತದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವು ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿವೆ. ಪ್ರತಿ ವರ್ಷದಂತೆ ಅಧಿಕಾರಿಗಳು ಭರವಸೆ ನೀಡದೇ ಜಾತ್ರೆ ವೇಳೆಗೆ ಎಲ್ಲ ಸಂಪರ್ಕ ರಸ್ತೆಗಳನ್ನೂ ಸರಿಪಡಿಸಬೇಕು’ ಎಂದು ವಕೀಲ ಚಂದ್ರಣ್ಣ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು