ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಪಾಲಿಸಿ; ಜೀವ ರಕ್ಷಿಸಿ

ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಡಿವೈಎಸ್ಪಿ ಸಲಹೆ
Published 19 ಜುಲೈ 2023, 13:29 IST
Last Updated 19 ಜುಲೈ 2023, 13:29 IST
ಅಕ್ಷರ ಗಾತ್ರ

ಹಿರಿಯೂರು: ‘ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವ ಜೊತೆಗೆ ಇತರೆಯವರ ಜೀವ ರಕ್ಷಣೆ ಮಾಡಬೇಕು’ ಎಂದು ಡಿವೈಎಸ್ಪಿ ಚೈತ್ರಾ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಹಿರಿಯೂರು ಪೊಲೀಸ್ ಉಪ ವಿಭಾಗದ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಸ್ತೆಯಲ್ಲಿ ನಿಂತು ತಪ್ಪು ಮಾಡುವ ವಾಹನ ಚಾಲಕರಿಗೆ ಒಮ್ಮೆಲೆ ದಂಡ ಹಾಕುವ ಬದಲು, ಮೊದಲು ರಸ್ತೆ ಸುರಕ್ಷತೆ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ನಂತರವೂ ತಪ್ಪು ಮಾಡುವುದು ಮುಂದುವರಿದಲ್ಲಿ, ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಖಚಿತ’ ಎಂದು ಅವರು ಎಚ್ಚರಿಸಿದರು.

‘ಮನೆಗೆ ಸಮೀಪದಲ್ಲಿರುವ ಅಂಗಡಿಗೆ ಹೋಗಿದ್ದೆ. ಅದಕ್ಕಾಗಿ ಹೆಲ್ಮೆಟ್ ಧರಿಸಿರಲಿಲ್ಲ’. ‘ಕೂಗಳತೆ ದೂರದಲ್ಲಿನ ತೋಟಕ್ಕೆ ಹೋಗಿದ್ದೆ. ಅಷ್ಟು ಹತ್ತಿರಕ್ಕೆಲ್ಲ ಹೆಲ್ಮೆಟ್ ಹಾಕಬೇಕೆ?’ ಎಂಬಿತ್ಯಾದಿ ಸಬೂಬು ಹೇಳಬಾರದು. ವಾಹನ ಏರಿದಾಕ್ಷಣ ನಿಯಮಗಳು ಅನ್ವಯವಾಗುತ್ತವೆ. ಹೆಲ್ಮೆಟ್ ಧರಿಸದೇ ಇರುವುದು ಕಾನೂನು ಉಲ್ಲಂಘನೆಯಾಗುತ್ತದೆ. ಅಜಾಗರೂಕತೆಗೆ ಅವಕಾಶ ನೀಡದೆ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ’ ಎಂದು ತಾಕೀತು ಮಾಡಿದರು.

‘ಜಾಗೃತಿ ಜಾಥಾವನ್ನು ಸಾಂಕೇತಿಕವಾಗಿ ನಡೆಸಲಾಗುತ್ತಿದೆ. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ಸಾರ್ವಜನಿಕರು ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಪೊಲೀಸ್ ಹಾಗೂ ನಗರಸಭೆಯೊಂದಿಗೆ ಸಹಕರಿಸಬೇಕು’ ಎಂದು ನಗರಸಭೆ ಪೌರಾಯುಕ್ತ ಎಚ್. ಮಹಂತೇಶ್ ಮನವಿ ಮಾಡಿದರು.

‘ಬೈಕ್ ಓಡಿಸುವ ಮುನ್ನ ಹೆಲ್ಮೆಟ್ ಧರಿಸಲು ಮರೆಯದಿರಿ’, ‘ಮೊದಲು ಸುರಕ್ಷತೆಯ ಬಗ್ಗೆ ಯೋಚಿಸಿ ನಂತರ ಚಾಲನೆ ಮಾಡಿ’, ‘ಅಪಘಾತಗಳು ಮಾನವನ ತಪ್ಪುಗಳು’, ‘ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಚ್ಚರ ಇರಲಿ’ ಎಂಬ ನಾಮಫಲಕಗಳನ್ನು ಪ್ರದರ್ಶಿಸಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಜಾಥಾದಲ್ಲಿ ಇನ್‌ಸ್ಪೆಕ್ಟರ್ ಕಾಳಿಕೃಷ್ಣ, ನಗರ ಮತ್ತು ಗ್ರಾಮಾಂತರ ಠಾಣೆ ಎಸ್ಐಗಳಾದ ಬಿ.ಎನ್. ಮಂಜುನಾಥ್, ಲಕ್ಷ್ಮೀನಾರಾಯಣ್, ಸಚಿನ್ ಬಿರಾದಾರ್ ಮತ್ತು ಸಿಬ್ಬಂದಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಮೀನಾಕ್ಷಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ನಗರಸಭೆ ಪೌರ ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT