ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮಠಾಧೀಶರೊಂದಿಗೆ ಭಾಗವತ್ ಸಂವಾದ

Last Updated 13 ಜುಲೈ 2022, 4:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಸ್ಪೃಶ್ಯತೆ ಮತ್ತು ಅಸಮಾನತೆ ಹಿಂದೂ ಸಮಾಜದ ಪ್ರಮುಖ ಸಮಸ್ಯೆ. ಇವು ಪ್ರತಿಯೊಬ್ಬರ ಮನಸ್ಸಿನಲ್ಲಿವೆಯೇ ಹೊರತು ಶಾಸ್ತ್ರದಲ್ಲಿ ಅಲ್ಲ. ಇದರ ಪರಿಹಾರಕ್ಕೆ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಸಹನೆ, ಧೈರ್ಯ ಇರಬೇಕು ಎಂದು ರಾಷ್ಟ್ರೀಯ
ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠದಲ್ಲಿ ದಲಿತ ಮತ್ತು ಹಿಂದುಳಿದ ಜನಾಂಗದ ಮಠಾಧೀಶರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಅಸ್ಪೃಶ್ಯತೆ, ಅಸಮಾನತೆಯಂತಹ ಸಮಸ್ಯೆಗಳು ಶತಮಾನಗಳಿಂದ ಮನಸ್ಸಿನಲ್ಲಿ ಉಳಿದಿವೆ. ಇವನ್ನು ನಿಧಾನವಾಗಿ ಮನಸ್ಸಿನಿಂದ ತೆಗೆಯುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಸಂಘ ಕಾರ್ಯನಿರತವಾಗಿದೆ. ಇದರಲ್ಲಿ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ಹೇಳಿದರು.

‘ಸಾಮಾಜಿಕ ಸಂಪರ್ಕ ಕಡಿತಗೊಂಡ ಪರಿಣಾಮ ಹಿಂದೂ ಸಮಾಜದ ಕೆಲವು ಭಾಗ ಹಿಂದುಳಿಯಿತು. ಸಮಾಜದ ಎಲ್ಲ ಅಂಗಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮೆಲ್ಲರ ಕರ್ತವ್ಯ. ಸಂಘದ ಸ್ವಯಂ ಸೇವಕರು ಮತ್ತು ಮಠಾಧೀಶರು ಆಗಾಗ ಭೇಟಿ ಆಗುತ್ತಿರಬೇಕು. ಪರಸ್ಪರ ಅರಿವು ಹೆಚ್ಚಾಗಿ ಅಪನಂಬಿಕೆ, ಸಂಶಯಗಳು ದೂರವಾಗುತ್ತವೆ’ ಎಂದರು.

‘ಆರ್‌ಎಸ್‌ಎಸ್‌ಗೆ ಒಂದು ಪ್ರಾಕೃತಿಕ ಶೈಲಿ ಇದೆ. ಆ ಶೈಲಿಯಲ್ಲಿಯೇ ನಾವು ಮುನ್ನಡೆಯುತ್ತೇವೆ. ಇದು ನಿಧಾನಗತಿ ಇರಬಹುದು. ನಿಧಾನವಾಗಿ ನಡೆದರೆ ದೂರಸಾಗಲು ಸಾಧ್ಯವಿದೆ. ಮಠಾಧೀಶರು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಸಂಘ ಸದಾಕಾಲ ಮಠಾಧೀಶರೊಂದಿಗೆ ಇರಲಿದೆ’ ಎಂದು ಅವರು ಅಭಯ ನೀಡಿದರು.

ರಾಜ್ಯದ ವಿವಿಧೆಡೆಯ 21 ಮಠಾಧೀಶರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಆರ್‌ಎಸ್‌ಎಸ್‌ ಸಹಸರಕಾರ್ಯವಾಹ ಮುಕುಂದ, ಕ್ಷೇತ್ರೀಯ ಪ್ರಚಾರಕ ಸುಧೀರ, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಪಟ್ಟಾಭಿರಾಮ, ಸಾಮರಸ್ಯ ವೇದಿಕೆಯ ವಾದಿರಾಜ ಇದ್ದರು.

ಮತಾಂತರ ತಡೆಯಲು ಸಲಹೆ
‘ಮತಾಂತರವು ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ. ಮೂಲ ಬೇರಿನಿಂದ ಸಂಪರ್ಕ ಕಡಿದುಕೊಂಡು ದೂರವಾಗುವಂತೆ ಮಾಡುತ್ತದೆ. ನಾವೆಲ್ಲರೂ ಮತಾಂತರವನ್ನು ತಡೆಯಲು ಪ್ರಯತ್ನಿಸಬೇಕಿದೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಲಹೆ ನೀಡಿದರು.

‘ಈ ದೇಶವು ಭಾರತವಾಗಿ ಉಳಿಯಬೇಕಾದರೆ ಮೊದಲು ನಾವು ನಾವಾಗಿರಬೇಕು. ಇಲ್ಲದಿದ್ದರೆ ಭಾರತ ಉಳಿಯುವುದಿಲ್ಲ. ಧರ್ಮ ಎಲ್ಲೆಡೆ ಉಳಿಯುವಂತೆ ನೋಡಿಕೊಳ್ಳಬೇಕಿದೆ. ಸಂಘಕ್ಕೆ ರಾಜಕೀಯಕ್ಕಿಂತ ಧರ್ಮ ಮತ್ತು ಅಧ್ಯಾತ್ಮ ಮುಖ್ಯ. ಹಾಗಾಗಿ ರಾಜಕೀಯ ನಾಯಕರಿಗಿಂತ ಮಠಾಧೀಶರ ಸಾಮೀಪ್ಯವನ್ನು ಸಂಘ ಬಯಸುತ್ತದೆ’ ಎಂದು ಹೇಳಿದರು.

ಭಾಗವಹಿಸಿದ್ದ ಮಠಾಧೀಶರು
ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ವೇಮನಾನಂದ ಸ್ವಾಮೀಜಿ, ಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ, ಬಸವ ಭೃಂಗೀಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ದಯಾನಂದಪುರಿ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಬಸವ ನಾಗಿದೇವ ಸ್ವಾಮೀಜಿ, ಜ್ಞಾನಾನಂದಪುರಿ ಸ್ವಾಮೀಜಿ, ಮಾತಾ ಬಿಷ್ಠದೇವಿ, ಬಸವ ಹರಳಯ್ಯ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಶ್ರೀಧರಾನಂದ ಸ್ವಾಮೀಜಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT