ಶುಕ್ರವಾರ, ನವೆಂಬರ್ 15, 2019
26 °C
ಪಥಸಂಚಲನಕ್ಕೆ ಸಿದ್ಧತೆ, ‘ಜಲಸಂರಕ್ಷಣೆ’ ಜಾಗೃತಿ

ಆರ್‌ಎಸ್‌ಎಸ್‌ ಬಹಿರಂಗ ಸಭೆ 17ಕ್ಕೆ

Published:
Updated:
Prajavani

ಚಿತ್ರದುರ್ಗ: ಪ್ರಾಥಮಿಕ ಶಿಕ್ಷಾ ವರ್ಗ ಶಿಬಿರದ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ಅ.17ರಂದು ಮಧ್ಯಾಹ್ನ 3.30ಕ್ಕೆ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದೆ. ಸಭೆಯ ಅಂಗವಾಗಿ ನಗರದಲ್ಲಿ ಪಥಸಂಚಲನ ನಡೆಯಲಿದೆ.

‘ದಸರಾ ರಜೆಯಲ್ಲಿ ಆಯೋಜಿಸಿದ ಈ ಶಿಬಿರ ಅ.10ರಂದು ಆರಂಭವಾಗಿದ್ದು, 18ರಂದು ಮುಕ್ತಾಯವಾಗಲಿದೆ. 9ನೇ ತರಗತಿಯ ವಿದ್ಯಾರ್ಥಿಗಳಿಂದ ಉದ್ಯೋಗಸ್ಥರವರೆಗೆ ವಿವಿಧ ವಯೋಮಾನದವರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ನಿತ್ಯ ನಾಲ್ಕು ಗಂಟೆ ಹೊರಾಂಗಣ ಹಾಗೂ ನಾಲ್ಕು ಗಂಟೆ ಒಳಾಂಗಣ ತರಬೇತಿ ನೀಡಲಾಗುತ್ತಿದೆ’ ಎಂದು ಆರ್‌ಎಸ್‌ಎಸ್‌ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಪ್ರಮುಖ ಪ್ರದೀಪ್‌ ಅವರು ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ನಡೆದ ಸಂವಾದದಲ್ಲಿ ಮಾಹಿತಿ ನೀಡಿದರು.

‘ಸ್ವಯಂ ರಕ್ಷಣೆಗಾಗಿ ಕರಾಟೆ ಹೇಳಿಕೊಡಲಾಗುತ್ತದೆ. ಯೋಗ, ದೇಸಿ ಆಟಗಳನ್ನು ಶಿಬಿರದಲ್ಲಿ ಕಲಿಸಲಾಗುತ್ತದೆ. ಸ್ವದೇಶಿ ಪರಿಕಲ್ಪನೆ, ಜಾತಿ ಸಾಮರಸ್ಯ, ಪರಿಸರದ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆರ್‌ಎಸ್‌ಎಸ್‌ ಹುಟ್ಟು, ಬೆಳವಣಿಗೆ ಹಾಗೂ ಕಾರ್ಯವೈಖರಿಯ ಕುರಿತು ತಿಳಿಸಿಕೊಡಲಾಗುತ್ತದೆ. ಪ್ರತಿ ಏಪ್ರೀಲ್‌ನಲ್ಲಿ 20 ದಿನ ನಡೆಯುವ ಶಿಬಿರವೂ ಹೀಗೆ ನಡೆಯುತ್ತದೆ’ ಎಂದು ವಿವರಿಸಿದರು.

‘ಜಲಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಆರ್‌ಎಸ್‌ಎಸ್‌ ಕೈಗೆತ್ತಿಕೊಂಡಿದೆ. ಬೆಂಗಳೂರಿನಲ್ಲಿ ಇದನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಕೆಲವು ಅಪಾರ್ಟ್‌ಮೆಂಟ್‌ಗಳನ್ನು ಆಯ್ಕೆ ಮಾಡಿಕೊಂಡು ಜಲಸಂರಕ್ಷಣೆ ಅರಿವು ಮೂಡಿಸಲಾಗುತ್ತಿದೆ. ನೀರಿನ ಮಿತ ಬಳಕೆಯ ಬಗ್ಗೆ ತಿಳಿಹೇಳಲಾಗುತ್ತಿದೆ. ಇದನ್ನು ಎಲ್ಲೆಡೆ ವಿಸ್ತರಿಸುವ ಆಲೋಚನೆ ಇದೆ. ಸಂಘದ ಎಲ್ಲ ಸಂಸ್ಥೆಗಳೂ ಕೈಜೋಡಿಸಲಿವೆ’ ಎಂದು ಹೇಳಿದರು.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಎಂಜಿನಿಯರುಗಳಿಗೆ ‘ಐಟಿ ಮಿಲ್‌’ ಶಿಬಿರ ನಡೆಸಲಾಗುತ್ತಿದೆ. 2000ನೇ ಇಸವಿಯಲ್ಲಿ ಆರಂಭವಾದ ಈ ಪ್ರಯೋಗಕ್ಕೆ ನಿರೀಕ್ಷೆ ಮೀರಿ ಫಲ ಸಿಕ್ಕಿದೆ. ಎಂಜಿನಿಯರುಗಳಿಗೆ ಸಂಸ್ಕಾರ ಹೇಳಿಕೊಡಲಾಗುತ್ತಿದ್ದು, ಹೊರ ರಾಜ್ಯದವರಿಗೆ ಕನ್ನಡ ಕಲಿಸಲಾಗುತ್ತಿದೆ. ಬೆಂಗಳೂರಿನ 150 ಸ್ಥಳಗಳಲ್ಲಿ ವಾರ ಹಾಗೂ ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದೇವೆ’ ಎಂದರು.

ಚಿತ್ರದುರ್ಗ ಜಿಲ್ಲಾ ಕಾರ್ಯವಾಹಕ ರಾಜಕುಮಾರ್‌ ಇದ್ದರು.

ಪ್ರತಿಕ್ರಿಯಿಸಿ (+)