ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಂಪುರ: ಸಮುದಾಯದ ಸಹಭಾಗಿತ್ವ, ಯಶಸ್ಸಿನ ಹಾದಿಯಲ್ಲಿ ಸರ್ಕಾರಿ ಶಾಲೆ

Last Updated 10 ಅಕ್ಟೋಬರ್ 2021, 6:10 IST
ಅಕ್ಷರ ಗಾತ್ರ

ಶ್ರೀರಾಂಪುರ: ಸಮುದಾಯದ ಸಹಭಾಗಿತ್ವದಲ್ಲಿ ಹಲವು ಸರ್ಕಾರಿ ಶಾಲೆಗಳು ಆಕರ್ಷಣೀಯವಾಗುತ್ತಿದ್ದು. ಹೆಚ್ಚು ಹೆಚ್ಚು ಮಕ್ಕಳನ್ನು ತಮ್ಮತ್ತ ಆಕರ್ಷಿಸುವಲ್ಲಿ ಯಶಸ್ವಿಯ ದಾಪುಗಾಲು ಇಡಲಾರಂಭಿಸಿವೆ.

ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿ ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಎಸ್. ನೇರಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳಂತೆ ವರ್ಣ ರಂಜಿತವಾಗಿದ್ದು ದಾರಿಯಲ್ಲಿ ಹೋಗುವವರು ಕೆಲಕಾಲ ನಿಂತು ನೋಡುವಂತೆ ಮಾಡುತ್ತಿದೆ. ಚಿತ್ರ ಕಲಾವಿದ ಶಂಕರ್ ಅವರ ಕೈಚಳಕದಿಂದ ರಾಜ್ಯ, ದೇಶ, ವಿದೇಶಗಳ, ಸಾಂಸ್ಕೃತಿಕ, ಸಾಮಾಜಿಕ ಮಾಹಿತಿಯನ್ನು ಶಾಲೆಯ ಕಾಂಪೌಂಡ್ ಗೋಡೆ ಹಾಗೂ ಕಟ್ಟಡಗಳ ಗೋಡೆಗಳ ಮೇಲೆ ಮೂಡಿಸಿರುವುದು ಮಕ್ಕಳ ಕಲಿಕೆಗೆ ಸಹಾಯಕವಾಗಿದೆ.

600ಕ್ಕೂ ಹೆಚ್ಚು ಕುಟುಂಬಗಳ 1,800 ಜನಸಂಖ್ಯೆ ಇರುವ ಗ್ರಾಮದ ಬಸ್ ನಿಲ್ದಾಣದ ಬಲಭಾಗಕ್ಕೆ ಕಟ್ಟೆ ರಂಗನಾಥಸ್ವಾಮಿ ದೇವಸ್ಥಾನದ ಎದುರು ವಿಶಾಲವಾದ ಮೈದಾನಕ್ಕೆ ಹೊಂದಿಕೊಂಡಂತೆ ವರ್ಣರಂಜಿತ ಚಿತ್ತಾರ ಬಿಡಿಸಿರುವ ಶಾಲಾ ಕಾಂಪೌಂಡ್ ಕಾಣಿಸುತ್ತದೆ. ಒಳಗೆ ಹೋದರೆ ಉತ್ತಮ ಶಾಲಾ ಕೊಠಡಿಗಳು, ಕೊಠಡಿಗಳ ಒಳಗೆ ಮಕ್ಕಳಿಗೆ ಗಣಿತ, ವಿಜ್ಞಾನ ವಿಷಯಗಳ ಕಲಿಕೆಗೆ ಪೂರಕವಾದ ಚಿತ್ರ ಬಿಡಿಸಲಾಗಿದ್ದು ಆಕರ್ಷಕವಾಗಿದೆ. ಅದರಲ್ಲೂ ಒಂದು ಕೊಠಡಿಯ ಹೊರಭಾಗದ ಗೋಡೆಯಲ್ಲಿ ಬಿಡಿಸಲಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಿತ್ರವಂತೂ ಚಿತ್ತಾಕರ್ಷಕವಾಗಿದೆ.

‘1943ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 102 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸ್.ಡಿ.ಎಂ.ಸಿ., ಹಳೇ ವಿದ್ಯಾರ್ಥಿ ಸಂಘದವರು ಶಾಲಾಭಿವೃದ್ಧಿಗೆ ತುಂಬಾ ಸಹಕಾರ ನೀಡುತ್ತಿದ್ದು ಅದರ ಪರಿಣಾಮವಾಗಿ ಈ ವರ್ಷ ತಾಲ್ಲೂಕು ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಲಭಿಸಿದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಸ್.ಜಿ. ಪ್ರಕಾಶ್.

ಸ್ಮಾರ್ಟ್‌ಕ್ಲಾಸ್‌ಗೆ ಬೇಕಾದ ಸಾಮಗ್ರಿಗಳು ಬಂದಿದ್ದು, ಅಳವಡಿಸುವ ಕಾರ್ಯ ಬಾಕಿ ಇದೆ. ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಆಂಗ್ಲ ಮಾಧ್ಯಮ ಆರಂಭಿಸಲು ಮನವಿ
‘1,800ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಪರಿಶಿಷ್ಟ ಜನಾಂಗ, ಹಿಂದುಳಿದ ಹಾಗೂ ಬಹುತೇಕ ರೈತಾಪಿ ಕುಟುಂಬಗಳಿದ್ದು, ಈಗಿನ ಆಧುನಿಕ ಶಿಕ್ಷಣ ಪದ್ಧತಿಗೆ ಪೂರಕವಾಗುವಂತೆ ನಮ್ಮ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಆದಷ್ಟು ಬೇಗನೆ ಆಂಗ್ಲ ಮಾಧ್ಯಮ ಆರಂಭಿಸಲು ಕ್ರಮ ವಹಿಸುವ ವಿಶ್ವಾಸವಿದೆ’ ಎನ್ನುತ್ತಾರೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಗನಾಥ್.

*
ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಸಹಕಾರ ಉತ್ತಮವಾಗಿದೆ. ಸರ್ಕಾರ ಬರುವ ಶೈಕ್ಷಣಿಕ ವರ್ಷದಲ್ಲಾದರೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಬೇಕು.
– ಟಿ. ಮುರಳಿ, ಅಧ್ಯಕ್ಷರು ಎಸ್‌.ಡಿ.ಎಂ.ಸಿ., ಸ.ಹಿ.ಪ್ರಾ. ಶಾಲೆ, ಎಸ್. ನೇರಲಕೆರೆ

*
1956ನೇ ಸಾಲಿನಿಂದ ಸುಮಾರು 1,500ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳ ಪಟ್ಟಿ ಮಾಡುತ್ತಿದ್ದು ಅವರೆಲ್ಲರ ಸಹಕಾರದಿಂದ ತಾಲ್ಲೂಕಿನಲ್ಲೇ ಮಾದರಿ ಶಾಲೆ ಮಾಡುವ ಉದ್ದೇಶ ಹೊಂದಲಾಗಿದೆ.
– ರಂಗನಾಥ್, ಅಧ್ಯಕ್ಷರು, ಹಳೇ ವಿದ್ಯಾರ್ಥಿಗಳ ಸಂಘ, ಎಸ್. ನೇರಲಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT