ಗುರುವಾರ , ನವೆಂಬರ್ 14, 2019
23 °C
ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ

ಪ್ರಜಾಪ್ರಭುತ್ವ ಕೊಲೆಗೈದ ಅಮಿತ್‌ ಶಾ

Published:
Updated:
Prajavani

ಚಿತ್ರದುರ್ಗ: ಸಂವಿಧಾನಬದ್ಧವಾಗಿ ರಚನೆಯಾದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಿಯೊದಲ್ಲಿ ಈ ಸತ್ಯ ಹೊರಬಿದ್ದಿದೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಅಮಿತ್‌ ಶಾ ನಿರ್ದೇಶನ ನೀಡಿದ್ದರು ಎಂಬುದು ಬಹಿರಂಗವಾಗಿದೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದಾಗಿ ಪ್ರಮಾಣ ಮಾಡಿದ ಸಚಿವರೇ ಸಂವಿಧಾನ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) 121 (ಎ) ಅನ್ವಯ ಇದು ಅಪರಾಧ’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಉರುಳಿಸಲಾಗಿದೆ. ಶಾಸಕರು ಅಧಿಕಾರದ ಆಸೆಗಾಗಿ ರಾಜೀನಾಮೆ ನೀಡಿದ್ದಾರೆ. ಅವರಿಗೆ ಪಕ್ಷದಲ್ಲಿ ಯಾವುದೇ ಕಿರುಕುಳ ಇರಲಿಲ್ಲ’ ಎಂದು ಸ್ಪಷ್ಟಪಸಿದರು.

‘ಈಚೆಗೆ ಸುರಿದ ಮಳೆಗೆ 103 ತಾಲ್ಲೂಕು ಅತಿವೃಷ್ಟಿಗೆ ತುತ್ತಾಗಿವೆ. ಉತ್ತರ ಕರ್ನಾಟಕದ 12 ಹಾಗೂ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳು ಪ್ರವಾಹ ಪರಿಸ್ಥಿತಿ ಎದುರಿಸಿವೆ. ಸುಮಾರು 2.4 ಲಕ್ಷ ಮನೆಗಳು ನೆಲಸಮವಾಗಿದ್ದು, 30 ಲಕ್ಷ ಎಕರೆ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಪ್ರವಾಹ ಉಂಟಾಗಿ ಮೂರು ತಿಂಗಳು ಕಳೆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿಲ್ಲ’ ಎಂದು ಆರೋಪಿಸಿದರು.

‘ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿದರೂ ಬಿಜೆಪಿ ಸ್ಪಂದಿಸುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಸಮ್ಮಿಶ್ರ ಸರ್ಕಾರ ₹ 9.85 ಲಕ್ಷ ಪರಿಹಾರ ನೀಡಿತ್ತು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ₹ 5 ಲಕ್ಷ ಮಾತ್ರ ಪರಿಹಾರ ವಿತರಣೆ ಮಾಡಲು ಮುಂದಾಗಿದೆ. ಸಂತ್ರಸ್ತರನ್ನು ಈ ಹಣ ಇನ್ನೂ ತಲುಪಿಲ್ಲ’ ಎಂದು ದೂರಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಪ್ರವಾಹ ಪರಿಸ್ಥಿತಿಗೆ ಸಿಲುಕಿ ಮೂರು ತಿಂಗಳು ಕಳೆದರೂ ಜನರಿಗೆ ನೆರವು ಸಿಕ್ಕಿಲ್ಲ. 1914ರ ಬಳಿಕ ಇಂತಹ ಪ್ರವಾಹವನ್ನು ಉತ್ತರ ಕರ್ನಾಟಕ ಎದುರಿಸಿರಲಿಲ್ಲ. ಎರಡು ಸಾವಿರಕ್ಕೂ ಹೆಚ್ಚು ಮನೆಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರ ಮಾಡುವ ಅಗತ್ಯವಿದೆ. ಇದಕ್ಕೂ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ’ ಎಂದು ಹರಿಹಾಯ್ದರು.

‘ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಆದರೂ, ಬಿಜೆಪಿ ಕೇಂದ್ರ ನಾಯಕರು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡದೇ ತೆರಳಿದ್ದಾರೆ. ನೆರೆ ಸಂತ್ರಸ್ತರ ನೋವು ಆಲಿಸುವ ವ್ಯವಧಾನವೂ ಅವರಲ್ಲಿ ಇಲ್ಲ’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್‌, ಕಾರ್ಯಾಧ್ಯಕ್ಷ ಸಿ.ಶಿವು ಯಾದವ ಇದ್ದರು.

ಪ್ರತಿಕ್ರಿಯಿಸಿ (+)