ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 29ಕ್ಕೆ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಸಮ್ಮೇಳನದ ರೂಪುರೇಷೆಗಳ ಮಾಹಿತಿ ನೀಡಿದ ಡಾ. ದೊಡ್ಡಮಲ್ಲಯ್ಯ
Last Updated 27 ಜೂನ್ 2019, 16:35 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಇದೇ 29ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ತರಾಸು ರಂಗಮಂದಿರದ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಉದ್ಘಾಟಿಸುವರು. ಸಮ್ಮೇಳನಾಧ್ಯಕ್ಷ ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸುವರು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ಎನ್‌.ಕೆ.ನಾರಾಯಣ್ ವೇದಿಕೆ ಉದ್ಘಾಟಿಸುವರು. ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಮುಖ್ಯದ್ವಾರ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ’ ಎಂದರು.

‘ಅಂದು ಮಧ್ಯಾಹ್ನ 2ರಿಂದ 4ರವರೆಗೆ ನಡೆಯಲಿರುವ ತರಾಸು ಸಾಹಿತ್ಯ ಒಂದು ಅವಲೋಕನದ ಗೋಷ್ಠಿಯಲ್ಲಿ ತರಾಸು ಅವರ ಸಾಮಾಜಿಕ ಕಾದಂಬರಿಗಳ ಕುರಿತು ಕನ್ನಡ ಸಹ ಪ್ರಾಧ್ಯಾಪಕಿ ಡಾ.ಪ್ರೇಮಪಲ್ಲವಿ, ತರಾಸು ಅವರ ಐತಿಹಾಸಿಕ ಕಾದಂಬರಿಗಳ ಬಗ್ಗೆ ಕನ್ನಡ ಭಾಷಾ ಬೋಧಕಿ ಡಾ.ಸವಿತಾ ವಿಷಯ ಮಂಡಿಸುವರು. ಪ್ರಾಚಾರ್ಯ ಡಾ.ಆರ್.ಮಹೇಶ್ ಅಧ್ಯಕ್ಷತೆ ವಹಿಸುವರು. ಪರಿಷತ್‌ನ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅತಿಥಿಯಾಗಿ ಭಾಗವಹಿಸುವರು’ ಎಂದು ಹೇಳಿದರು.

‘ಸಂಜೆ 4ರಿಂದ 6ರವರೆಗೂ ನಡೆಯುವ ಸಂವಿಧಾನ ಮತ್ತು ಭಾರತೀಯ ಸಮಾಜದ ಗೋಷ್ಠಿಯ ಅಧ್ಯಕ್ಷತೆಯನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ ವಹಿಸುವರು. ಸಂವಿಧಾನ ಮತ್ತು ವರ್ತಮಾನದ ಸಮಸ್ಯೆಗಳ ಕುರಿತು ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಸಂವಿಧಾನ ಮತ್ತು ಸಮಾನತೆ ಬಗ್ಗೆ ವಕೀಲ ಕೆ.ವೀರಭದ್ರಪ್ಪ ವಿಷಯ ಮಂಡಿಸುವರು. ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಪ್ರತಿಕ್ರಿಯೆ ನೀಡುವರು. ಪರಿಷತ್‌ನ ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಲೋಕೇಶ್ ಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದರು.

‘ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ 8ಕ್ಕೆ ಮತ್ತಿ ತಿಮ್ಮಣ್ಣನಾಯಕ ಮಹಾದ್ವಾರದಲ್ಲಿ ಧ್ವಜಾರೋಹಣ ನಡೆಯಲಿದೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ರಾಷ್ಟ್ರಧ್ವಜ, ಪರಿಷತ್‌ನ ಜಿಲ್ಲಾಧ್ಯಕ್ಷ ಪರಿಷತ್ತಿನ ಧ್ವಜ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ದಾಸೇಗೌಡ ನಾಡಧ್ವಜ ಕಾರ್ಯಕ್ರಮ ನೆರವೇರಿಸುವರು’ ಎಂದು ತಿಳಿಸಿದರು.

‘30ರಂದು ಬೆಳಿಗ್ಗೆ 9.30ರಿಂದ 11ರವರೆಗೂ ಚಿತ್ರದುರ್ಗ ಜಿಲ್ಲೆ; ಕೃಷಿ ಮತ್ತು ಬರ ಪರಿಹಾರದ ಗೋಷ್ಠಿ ನಡೆಯಲಿದ್ದು, ಶಿವಮೊಗ್ಗದ ಕೃಷಿ ಎಂಜಿನಿಯರ್ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಶಶಿಧರ್ ಅಧ್ಯಕ್ಷತೆ ವಹಿಸುವರು. ಸಹ ಸಂಶೋಧನಾ ನಿರ್ದೇಶಕ ಡಾ.ಶರಣಪ್ಪ ಜಂಗಂಡಿ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಓಂಕಾರಪ್ಪ ವಿಷಯ ಮಂಡಿಸುವರು. ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಪ್ರತಿಕ್ರಿಯೆ ನೀಡುವರು. ಡಯಟ್‌ ಉಪನ್ಯಾಸಕ ಆರ್.ನಾಗರಾಜ್, ಪರಿಷತ್‌ನ ಹಿರಿಯೂರು ತಾಲ್ಲೂಕು ಅಧ್ಯಕ್ಷ ಎಚ್‌.ಆರ್.ಶಂಕರ್ ಅತಿಥಿಯಾಗಿ ಭಾಗವಹಿಸುವರು’ ಎಂದು ತಿಳಿಸಿದರು.

‘ಅಂದು ಬೆಳಿಗ್ಗೆ 11ರಿಂದ 12ರವರೆಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಬರಹ-ಬದುಕು ವಿಷಯದ ಗೋಷ್ಠಿ ನಡೆಯಲಿದ್ದು, ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ ಅಧ್ಯಕ್ಷತೆ ವಹಿಸುವರು. ಬರಹ ಕುರಿತು ವಿಮರ್ಶಕ ಡಾ.ಜಿ.ವಿ.ಆನಂದಮೂರ್ತಿ, ಬದುಕು ಕುರಿತು ಪ್ರಾಧ್ಯಾಪಕ ಪ್ರೊ.ಡಿ.ಅಂಜನಪ್ಪ ವಿಷಯ ಮಂಡಿಸುವರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಅತಿಥಿಯಾಗಿ ಭಾಗವಹಿಸುವರು’ ಎಂದು ಹೇಳಿದರು.

‘ಮಧ್ಯಾಹ್ನ 12ರಿಂದ 2ರವರೆಗೂ ಕನ್ನಡನಾಡಿನ ಚಳವಳಿಗಳ ವಿಷಯದ ಗೋಷ್ಠಿ ನಡೆಯಲಿದೆ. ಡಾ.ಸಿದ್ದನಗೌಡ ಪಾಟೀಲ್-ರೈತ ಚಳವಳಿ, ಆರ್‌.ಜಿ.ಹಳ್ಳಿ ನಾಗರಾಜ್-ದಲಿತ ಮತ್ತು ಬಂಡಾಯ ಚಳವಳಿ, ಡಾ.ಮೇಟಿ ಮಲ್ಲಿಕಾರ್ಜುನ-ಭಾಷಾ ಚಳವಳಿ ಕುರಿತು ವಿಷಯ ಮಂಡಿಸುವರು. ಪರಿಷತ್‌ನ ಗೌರವ ಕೋಶಾಧ್ಯಕ್ಷ ಎಂ.ಗೋವಿಂದಪ್ಪ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಧನಂಜಯ ಮೆಂಗಸಂದ್ರ, ಉಪನ್ಯಾಸಕ ಚಿತ್ರಲಿಂಗಸ್ವಾಮಿ ಅತಿಥಿಯಾಗಿ ಭಾಗವಹಿಸುವರು’ ಎಂದು ತಿಳಿಸಿದರು.

‘ಮಧ್ಯಾಹ್ನ 2ರಿಂದ 4ರವರೆಗೆ ಕವಿಗೋಷ್ಠಿ ನಡೆಯಲಿದೆ. ಸಾಹಿತಿ ಜಯಾಪ್ರಾಣೇಶ್ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ.ಎನ್.ಧನಕೋಟಿ ಆಶಯ ನುಡಿಗಳನ್ನಾಡುವರು. ಸಾಹಿತಿ ಶರೀಫಾಬಿ, ಪರಿಷತ್‌ನ ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ಕೊಂಡ್ಲಹಳ್ಳಿ ಜಯಪ್ರಕಾಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.

‘ಸಂಜೆ 4ರ ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಸಂಸದ ಎ.ನಾರಾಯಣಸ್ವಾಮಿ, ಶಾಸಕ ಟಿ.ರಘುಮೂರ್ತಿ ಭಾಗವಹಿಸುವರು. ಸಾಹಿತಿ ಡಾ.ರಮಜಾನ್ ದರ್ಗಾ ಸಮಾರೋಪ ನುಡಿಗಳನ್ನಾಡುವರು. ಡಾ.ಮೀರಾಸಾಬಿಹಳ್ಳಿ ಶಿವಣ್ಣ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು’ ಎಂದು ತಿಳಿಸಿದರು.

ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಮ್ಮ, ಸಿಇಒ ಸತ್ಯಭಾಮ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ ಭಾಗವಹಿಸುವರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಯೂಸಫ್, ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ದಾಸೇಗೌಡ, ತಾಲ್ಲೂಕು ಕಾರ್ಯದರ್ಶಿ ಸುರೇಶ್, ಸಾಹಿತಿ ಶರೀಬಿ, ಮೋಕ್ಷ ರುದ್ರಸ್ವಾಮಿ, ಓಂ ಪವನಪ್ರಿಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT