ಮರಳು ಅಕ್ರಮಕ್ಕೆ ಬೀಳದ ಕಡಿವಾಣ

7

ಮರಳು ಅಕ್ರಮಕ್ಕೆ ಬೀಳದ ಕಡಿವಾಣ

Published:
Updated:
Prajavani

ಚಿತ್ರದುರ್ಗ: ನದಿ, ಹಳ್ಳ, ಕೆರೆಗಳ ಒಡಲು ಬಗೆದು ಮರಳು ಸಾಗಿಸುವ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ವೇದಾವತಿ ನದಿ ಜೀವಂತ ನಿದರ್ಶನವಾಗಿ ಗೋಚರಿಸುತ್ತಿದೆ. ನದಿ ತೀರದಲ್ಲಿ ನಡೆಯುತ್ತಿರುವ 21 ಅಧಿಕೃತ ಬ್ಲಾಕ್‌ಗಳಲ್ಲಿಯೇ ಅಕ್ರಮದ ಘಾಟು ಮೂಗಿಗೆ ಬಡಿಯುತ್ತಿದೆ.

ಅಕ್ರಮವನ್ನು ಪ್ರಶ್ನಿಸಿದ ರೈತರು ಮೌನಕ್ಕೆ ಶರಣಾಗಿದ್ದಾರೆ. ಮರಳು ದಂಧೆಯ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಪೊಲೀಸರು ಹಾಗೂ ರಾಜಕೀಯ ಪಕ್ಷಗಳ ಬೆಂಗಾವಲಿನಲ್ಲೇ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದಕ್ಕೆ ಸ್ಟಾಕ್‌ ಯಾರ್ಡ್‌ ಹಾಗೂ ಬ್ಲಾಕ್‌ಗಳಲ್ಲಿರುವ ಅವ್ಯವಸ್ಥೆಯೇ ಕನ್ನಡಿ ಹಿಡಿಯುತ್ತದೆ.

ಹೊಸದುರ್ಗ ತಾಲ್ಲೂಕಿನ ವೇದಾವತಿ ನದಿಯಲ್ಲಿ 7 ಬ್ಲಾಕ್‌ಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅವಕಾಶ ಕಲ್ಪಿಸಿದೆ. ಪ್ರತಿ ಬ್ಲಾಕ್‌ 15 ರಿಂದ 23 ಎಕರೆವರೆಗೂ ಹರಡಿಕೊಂಡಿದೆ. ಪ್ರತಿಯೊಂದರಲ್ಲಿಯೂ ಸುಮಾರು 50 ಸಾವಿರ ಟನ್‌ ಮರಳು ಅಧಿಕೃತವಾಗಿ ಗಣಿಗಾರಿಕೆ ಮಾಡಲಾಗಿದೆ. ಸ್ಟಾಕ್‌ ಯಾರ್ಡ್‌ಗೆ ಬಾರದೇ ನೇರವಾಗಿ ಸಾಗಣೆ ಆಗುವ ಮರಳಿನ ಲೆಕ್ಕ ಯಾರಿಗೂ ಸಿಗುತ್ತಿಲ್ಲ.

ಗಣಿಗಾರಿಕೆ, ವಿತರಣೆಗೆ ನಿರ್ಬಂಧ:

ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗೆ ಹಲವು ದೂರು ಬಂದಿವೆ. ಈ ದೂರುಗಳ ಆಧಾರದ ಮೇರೆಗೆ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಗಣಿಗಾರಿಕೆ ಹಾಗೂ ಪರವಾನಗಿ ವಿತರಣೆಗೆ ಡಿ.28ರಿಂದ ನಿರ್ಬಂಧ ವಿಧಿಸಿದ್ದಾರೆ. ಆದರೂ, ಬ್ಲಾಕ್‌ಗಳಲ್ಲಿ ಮರಳು ಎತ್ತುವ ಪ್ರಕ್ರಿಯೆ ನಡೆಯುತ್ತಲೇ ಇದೆ.

ಹೊಸದುರ್ಗ ತಾಲ್ಲೂಕಿನ ಬಲ್ಲಾಳ ಸಮುದ್ರದಲ್ಲಿರುವ ಮರಳು ಬ್ಲಾಕ್‌ನಲ್ಲಿ ಎರಡು ಜೆಸಿಬಿ ಹಾಗೂ 20ಕ್ಕೂ ಹೆಚ್ಚು ಕಾರ್ಮಿಕರು ಸೋಮವಾರ ಮರಳು ಮೇಲೆತ್ತುವಲ್ಲಿ ನಿರತರಾಗಿದ್ದರು. ಈ ಮರಳನ್ನು ಯಾರ್ಡ್‌ಗಳಲ್ಲಿ ಸಂಗ್ರಹಿಸಿಕೊಳ್ಳುವ ಕೆಲಸವೂ ನಡೆಯುತ್ತಿದೆ. ಆದರೆ, ಇದು ಸಾರ್ವಜನಿಕರಿಗೆ ವಿತರಣೆ ಆಗುತ್ತಿಲ್ಲ.

25 ಅಡಿ ಆಳ ಗಣಿಗಾರಿಕೆ:

ನಿಯಮದ ಪ್ರಕಾರ ನದಿಯಲ್ಲಿ ಮೂರು ಅಡಿ ಆಳದಲ್ಲಿ ಮರಳು ಗಣಿಗಾರಿಕೆ ನಡೆಸಲು ಅವಕಾಶವಿದೆ. ಆದರೆ, ವೇದಾವತಿ ನದಿಯ ಬಹುತೇಕ ಭಾಗಗಳಲ್ಲಿ 25 ಅಡಿಯವರೆಗೂ ಒಡಲು ಬಗೆಯಲಾಗಿದೆ. ಇಲ್ಲಿ ಯಾವುದೇ ನಿಯಮಗಳು ಪಾಲನೆ ಆಗುತ್ತಿಲ್ಲ ಎಂಬುದಕ್ಕೆ ನದಿ ತೀರದಲ್ಲಿ ಸೃಷ್ಟಿಯಾಗಿರುವ ಕಂದಕಗಳೇ ಸಾಕ್ಷ್ಯ ಒದಗಿಸುತ್ತವೆ.

‘ಆರಂಭದ ಐದು ಅಡಿ ಮಣ್ಣು, ಕೆಸರು ಸಿಕ್ಕಿದೆ. ಬಳಿಕ ಮರಳು ಲಭ್ಯವಾಗಿದೆ. ಮೂರು ಅಡಿಗಿಂತ ಹೆಚ್ಚಿನ ಆಳದಲ್ಲಿ ಮರಳು ತೆಗೆದರೆ ದಂಡ ವಿಧಿಸಲಾಗುತ್ತದೆ. ನಿಯಮ ಬಾಹಿರವಾಗಿ ಗಣಿಗಾರಿಕೆ ನಡೆಸಿಲ್ಲ’ ಎಂದು ಬಲ್ಲಾಳ ಸಮುದ್ರದಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರ ಸ್ಪಷ್ಟನೆ. ಅವರು ಮಾತನಾಡುತ್ತಿರುವಾಗಲೇ ಸಮೀಪದಲ್ಲಿದ್ದ ಜೆಸಿಬಿ 25 ಅಡಿ ಆಳದ ಕಂದಕದಲ್ಲಿ ಕೆಲಸ ಮಾಡುತ್ತಿತ್ತು.

ಅಕ್ರಮಕ್ಕೆ ನೂರೆಂಟು ದಾರಿ:

ನದಿ ತೀರದಲ್ಲಿ ಗುರುತಿಸಿದ ಬ್ಲಾಕ್‌ಗಳಲ್ಲಿ ತೆಗೆದ ಮರಳನ್ನು ಸ್ಟಾಕ್‌ ಯಾರ್ಡ್‌ಗಳಿಗೆ ಸರಬರಾಜು ಮಾಡುವುದು ಕಡ್ಡಾಯ. ನದಿ ದಂಡೆಯ ಜಮೀನುಗಳಲ್ಲಿ ಗುತ್ತಿಗೆದಾರರು ಯಾರ್ಡ್‌ ನಿರ್ಮಿಸಿಕೊಂಡು, ಮರಳು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಪರವಾನಗಿ ಪಡೆದ ಗ್ರಾಹಕರಿಗೆ ಇಲ್ಲಿಂದ ಮರಳನ್ನು ವಿತರಿಸಲಾಗುತ್ತದೆ.

ಆದರೆ, ಬಹುತೇಕ ಎಲ್ಲ ಬ್ಲಾಕ್‌ಗಳಲ್ಲಿ ಯಾರ್ಡ್‌ಗೆ ಬದಲು ಮತ್ತೊಂದು ಮಾರ್ಗವನ್ನೂ ಗುತ್ತಿಗೆದಾರರು ನಿರ್ಮಿಸಿಕೊಂಡಿದ್ದಾರೆ. ನದಿಯಲ್ಲಿ ಮರಳು ತುಂಬಿದ ಲಾರಿ, ಟ್ರ್ಯಾಕ್ಟರ್‌ಗಳು ನೇರವಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತವೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೂ ರಾಜಧನ ವಂಚಿಸುತ್ತಿವೆ. ಇದಕ್ಕೆ ಪೊಲೀಸರದೇ ಶ್ರೀರಕ್ಷೆ ಎಂಬುದು ಸ್ಥಳೀಯರ ಆರೋಪ.

ನಿಗದಿಗಿಂತ ಹೆಚ್ಚು ಸಾಗಣೆ:

ಆರು ಚಕ್ರದ ಲಾರಿಗೆ ಈ ಮೊದಲು 10 ಟನ್‌ ಮರಳು ತುಂಬುವ ಅವಕಾಶವಿತ್ತು. ಇತ್ತೀಚೆಗೆ ಈ ಮಿತಿಯನ್ನು 12.5 ಟನ್‌ಗೆ ಹೆಚ್ಚಿಸಲಾಗಿದೆ. 8 ಚಕ್ರದ ಲಾರಿಗೆ 20 ಟನ್‌ವರೆಗೂ ಮರಳು ತುಂಬುವ ಅವಕಾಶವಿದೆ. ಈ ಮಿತಿಯನ್ನೂ ಮೀರಿ ಮರಳು ತುಂಬಿ ಸಾಗಣೆ ಮಾಡಲಾಗುತ್ತಿದೆ ಎಂಬುದಕ್ಕೆ ಯಾರ್ಡ್‌ಗಳಲ್ಲಿ ಪಾಳುಬಿದ್ದ ಸ್ಥಿತಿಯಲ್ಲಿರುವ ವೇಬ್ರಿಡ್ಜ್‌ಗಳೇ ನಿದರ್ಶನದಂತೆ ಕಾಣುತ್ತವೆ.

‘ನಿಗದಿಗಿಂತ ಹೆಚ್ಚು ಮರಳನ್ನು ತುಂಬಲು ಸಾಧ್ಯವಿಲ್ಲ. ತೂಕದ ಯಂತ್ರದಲ್ಲಿ ಇದು ಪತ್ತೆ ಆಗುತ್ತದೆ. ಯಾರ್ಡ್‌ ಕಣ್ಗಾವಲಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪರವಾನಗಿ ವಿತರಣೆಯ ಸಮಯದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದ ಹಾರ್ಡ್‌ ಡಿಸ್ಕ್‌ ಸಲ್ಲಿಸುವುದು ಕಡ್ಡಾಯ’ ಎಂದು ವಿವರಣೆ ನೀಡುತ್ತಾರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !