ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ತೋಟದಲ್ಲಿ ಬೆಳೆಸಿದ್ದ ₹ 25 ಲಕ್ಷ ಮೌಲ್ಯದ ಗಂಧದ ಮರ ಕಳವು

Last Updated 24 ಡಿಸೆಂಬರ್ 2021, 2:36 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ನಗರಘಟ್ಟದ ನಿವೃತ್ತ ಶಿಕ್ಷಕ ಬಸಪ್ಪ ಎಂಬುವರ ತೋಟದಲ್ಲಿದ್ದ 6 ಶ್ರೀಗಂಧದ ಮರಗಳನ್ನು ಬುಧವಾರ ರಾತ್ರಿ ಕಳವು ಮಾಡಲಾಗಿದೆ.

13 ವರ್ಷದ 6 ಶ್ರೀಗಂಧದ ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದು, ಇನ್ನೂ 6 ಮರಗಳನ್ನು ಅರ್ಧ ಕತ್ತರಿಸಿ ಬಿಟ್ಟು ಹೋಗಿದ್ದಾರೆ. ಪ್ರತಿ ಮರ 35ರಿಂದ 40 ಕೆ.ಜಿ. ತೂಕವಿದೆ. ಬೆಂಗಳೂರಿನಲ್ಲಿ ಪ್ರತಿ ಕೆ.ಜಿ. ಶ್ರೀಗಂಧದ ಮರಕ್ಕೆ ಗರಿಷ್ಠ ₹ 11,000 ಬೆಲೆ ಇದ್ದು, 6 ಮರಗಳ ಬೆಲೆ ₹ 25 ಲಕ್ಷ ಎಂದು ಅಂದಾಜಿಸಲಾಗಿದೆ.

‘ನಮ್ಮ ಮನೆಯ ಪಕ್ಕದಲ್ಲೇ ಅಡಿಕೆ ತೋಟವಿದ್ದು, ಅದರಲ್ಲಿ ಮಿಶ್ರಬೆಳೆಯಾಗಿ ಶ್ರೀಗಂಧ ಬೆಳೆದಿದ್ದೆವು. ತೋಟದಲ್ಲಿ 100 ಮರಗಳಿದ್ದವು. ಕಳ್ಳರು ಮಧ್ಯರಾತ್ರಿ ತೋಟಕ್ಕೆ ನುಗ್ಗಿದ್ದಾರೆ. ಶ್ರಿಗಂಧದ ಮರದ ಕಾಂಡಕ್ಕೆ ತಂತಿಯ ಮೆಶ್‌ ಹಾಕಿದ್ದು, ಸಿಮೆಂಟ್ ಕೂಡ ಮಾಡಿಸಿದ್ದೆವು. ಸಿಮೆಂಟ್ ಒಡೆದು, ಮೆಶ್‌ ತುಂಡರಿಸಿ ಗರಗಸದಿಂದ ಮರ ಕತ್ತರಿಸಿದ್ದಾರೆ. ನಮ್ಮ ತೋಟದಲ್ಲಿದ್ದ ನಾಯಿ ಬೊಗಳದಂತೆ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದಾರೆ’ ಎಂದು ತೋಟದ ಮಾಲೀಕ ಬಸಪ್ಪ ತಿಳಿಸಿದರು.

‘ಅಡಿಕೆಗೆ ಕೊಡುತ್ತಿದ್ದ ನೀರು ಗೊಬ್ಬರದಿಂದ ಶ್ರೀಗಂಧದ ಮರಗಳು ಉತ್ಕೃಷ್ಟವಾಗಿ ಬೆಳೆದಿದ್ದವು. ಸುತ್ತಲೂ ಒಂದು ಇಂಚು ಬಿಳಿ ಮರ ಬಿಟ್ಟರೆ ಒಳಗೆಲ್ಲ ಸೇಗು (ಬಲಿತ ಮರ) ಬಂದಿತ್ತು. ಮರ ಕತ್ತರಿಸಿದ ಸ್ಥಳದಲ್ಲಿ ಉದುರಿರುವ ಪುಡಿಯ ಸುವಾಸನೆ ತೋಟದ ತುಂಬ ಹರಡಿದೆ. 8 ದಿನಗಳ ಹಿಂದೆ ನನ್ನ ತಮ್ಮನ ತೋಟದಲ್ಲಿಯೂ 2 ಮರ ಕತ್ತರಿಸಿಕೊಂಡು ಹೋಗಿದ್ದರು. ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬಸಪ್ಪ ಬೇಸರ ವ್ಯಕ್ತಪಡಿಸಿದರು.

‘ಮೂರ್ನಾಲ್ಕು ತಿಂಗಳ ಹಿಂದೆ ನಮ್ಮ ತೋಟದಲ್ಲೂ ಶ್ರೀಗಂಧದ ಮರಗಳನ್ನು ಕಳ್ಳರು ಕದ್ದೊಯ್ದಿದ್ದರು. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಪೊಲೀಸರು ಕಳ್ಳರನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಹಾಗೂ ತೋಟಗಳಿಗೆ ಭದ್ರತೆ ನೀಡಬೇಕು’ ಎಂದು ಉಪ್ಪರಿಗೇನಹಳ್ಳಿಯ ಶ್ರೀಗಂಧ ಬೆಳೆಗಾರ ದಿನೇಶ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT