ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗುಣ ನಿವಾರಣೆಗೆ ರಂಗಭೂಮಿ ಸಹಕಾರಿ: ಸಚಿವ ಕೆ.ಎಸ್‌.ಈಶ್ವರಪ್ಪ

ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ
Last Updated 7 ನವೆಂಬರ್ 2019, 10:04 IST
ಅಕ್ಷರ ಗಾತ್ರ

ಹೊಸದುರ್ಗ: ‘ಮನುಷ್ಯರಲ್ಲಿ ಇರುವ ದುರ್ಗುಣಗಳನ್ನು ನಿವಾರಿಸಲು ರಂಗಭೂಮಿ ಸಹಕಾರಿಯಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ 5ನೇ ದಿನವಾದ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಲಕ್ಷಾಂತರ ಮಠಗಳಿವೆ. ಆದರೆ, ನಾಟಕದ ಸಂಸ್ಕೃತಿಗೆ ಜೀವತುಂಬುವ ಕೆಲಸ ಸಾಣೇಹಳ್ಳಿ ಮಠದಲ್ಲಿ ಆಗುತ್ತಿದೆ. ಕಲಾವಿದರನ್ನು ಪೋಷಿಸುವ ದೇಗುಲ ಇದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿಗೆ ಮಾತೃಭೂಮಿ ಎನ್ನಲಾಗುತ್ತಿದೆ. ಮಣ್ಣಿನಿಂದ ಹೆಣ್ಣಿಗೆ ತಾಯಿ ಸ್ಥಾನ ಕಲ್ಪಿಸಲಾಗಿದೆ. ಮಣ್ಣಿನ ಪ್ರತಿ ಕಣವನ್ನು ಪೂಜಿಸುತ್ತಿದ್ದೇವೆ. ಈ ಮಣ್ಣಿನ ಗುಣವನ್ನು ಬಣ್ಣಿಸಲು ಸಾಧ್ಯವಿಲ್ಲ. ಹಲವು ಶ್ರೇಷ್ಠ ವ್ಯಕ್ತಿಗಳನ್ನು ಈ ಮಣ್ಣು ಸೃಷ್ಟಿಸಿದೆ. ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ನಾವು ಚಟುವಟಿಕೆಯಿಂದ ಇದ್ದಾಗ ಮನುಷ್ಯರಾಗುತ್ತೇವೆ’ ಎಂದು ತಿಳಿಸಿದರು.

‘ಮಣ್ಣು ಮತ್ತು ಮನುಷ್ಯ’ ವಿಷಯ ಕುರಿತು ಚಿಂತಕ ಪ್ರೊ.ಸಿದ್ದು ಯಾಪಲಪರವಿ ಉಪನ್ಯಾಸ ನೀಡಿ, ‘ಸುಳ್ಳು ಹೇಳುವುದಕ್ಕೆ ಹಲವು ರಾಜಕಾರಣಿಗಳು, ಮಠಾಧೀಶರು ನಮ್ಮಲ್ಲಿದ್ದಾರೆ. ನುಡಿದಂತೆ ನಡೆಯುವವರು ಕಡಿಮೆಯಾಗಿದ್ದಾರೆ. ಹೆಣ್ಣು, ಹೊನ್ನು, ಮಣ್ಣು ಎಂಬ ಮೂರು ಮುಖವಾಡ ಧರಿಸಿಕೊಂಡು ಜೀವನ ಸಾಗಿಸುತ್ತಾರೆ. ರಾಜಕೀಯ ಅನಿವಾರ್ಯತೆಯಿಂದ ಸಮಾಜವನ್ನು ದುಸ್ಥಿತಿಗೆ ತಳುತ್ತಿದ್ದಾರೆ. ಅವಕಾಶವಾದಿಗಳು ಹೆಚ್ಚಾಗಿದ್ದಾರೆ. ಬಸವಣ್ಣನ ಧರ್ಮ ವ್ಯಾಪಾರದ ಸರಕಾಗಿದೆ. ಹೆಣ್ಣು, ಹೊನ್ನು, ಮಣ್ಣಿನ ದಾಹ ಯಾರನ್ನು ಬಿಟ್ಟಿಲ್ಲ. ದೇಶದ ಬಗ್ಗೆ ನಿಜವಾದ ಕಾಳಜಿ ಇರುವವರು ಇದನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ವಿವರಿಸಿದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ದೆಹಲಿಯ ವಾಯುಮಾಲಿನ್ಯಕ್ಕೆ ಮನುಷ್ಯನ ದುರಾಸೆಯೇ ಕಾರಣ. ಕೆರೆ–ಕಟ್ಟೆ ಉಳಿಸಲು ಜನರು ಮುಂದಾಗುತ್ತಿಲ್ಲ. ಗೋಮಾಳ, ಕೆರೆಗಳು ಒತ್ತುವರಿಯಾಗಿವೆ. ನಮ್ಮ ಮಣ್ಣಿಗೆ ಅದ್ಭುತ ಶಕ್ತಿಯಿದೆ. ಮಣ್ಣನ್ನು ಗೆದ್ದಿದ್ದೇವೆಂದು ಭೀಗುವರೇ ಹೆಚ್ಚಾಗಿದ್ದಾರೆ. ಎಲ್ಲರ ಹೋರಾಟವೂ ಮಣ್ಣಿಗಾಗಿ ನಡೆಯುತ್ತಿದೆ. ಮಣ್ಣನ್ನು ತುಳಿಯುವ ಕಾರ್ಯ ಕೈಬಿಟ್ಟು, ಅದನ್ನು ಪೂಜಿಸುವ ಮೂಲಕ ಫಲ ಪಡೆಯಬೇಕು. ಆದರೆ, ಮನುಷ್ಯನ ದುರಾಸೆಯಿಂದ ಜೀವಸಂಕುಲಕ್ಕೆ ಹಾನಿಯಾಗುತ್ತಿದೆ ಎಂದು ತಿಳಿಸಿದರು.

ಕೊಪ್ಪಳದ ಗವಿಸಿದ್ಧೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮೀಜಿ, ‘ಅನ್ನ, ನೀರು, ಒಳ್ಳೆಯ ಮಾತುಗಳೇ ಭೂಮಿಯ ಮೇಲೆ ಇರುವ ನಿಜವಾದ ಸಂಪತ್ತು. ಬಸವಾದಿ ಶಿವಶರಣರ ತತ್ವ ಸಿದ್ಧಾಂತದಡಿ ಜೀವನ ಸಾಗಿಸಿದಲ್ಲಿ ಮಾತ್ರ ಬದುಕು ಹಸನಾಗಲು ಸಾಧ್ಯ’ ಎಂದು ಸಲಹೆ ನೀಡಿದರು.

ನಾಟಕ ಅಕಾಡೆಮಿ ಅಧ್ಯಕ್ಷ ಆರ್‌.ಭೀಮಸೇನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ, ಶಿವಮೊಗ್ಗ ಉದ್ಯಮಿ ಓಂಕಾರಪ್ಪ, ಬಿ.ಬಿ.ಹರೀಶ್‌ ಮಾತನಾಡಿದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಹಿರೇಕೆರೂರು ಸಹಕಾರಿ ರತ್ನಬಂಧು ಪ್ರಶಸ್ತಿ ಪುರಸ್ಕೃತ ಎಸ್‌.ಎಸ್‌.ಪಾಟೀಲ ಅವರನ್ನು ಅಭಿನಂದಿಸಲಾಯಿತು. ಶಾಲಾಕಾಲೇಜಿನ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ತುಮಕೂರು ಡೀಪ್ ಪೋಕಸ್-ನಟ ನಟಿಯರ ಸ್ಟುಡಿಯೊದವರು ‘ಔರಂಗಜೇಬ’ ನಾಟಕ ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT