ಸಂಕ್ರಾಂತಿಯ ವಿಶಿಷ್ಟ ಆಚರಣೆ: ಕಾಡಿನ ಮೊಲಕ್ಕೆ ಕಿವಿಯೋಲೆ ಹಾಕುವ ಭಕ್ತರು

7
ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಕಂಚೀಪುರದ ವಿಶೇಷ

ಸಂಕ್ರಾಂತಿಯ ವಿಶಿಷ್ಟ ಆಚರಣೆ: ಕಾಡಿನ ಮೊಲಕ್ಕೆ ಕಿವಿಯೋಲೆ ಹಾಕುವ ಭಕ್ತರು

Published:
Updated:
Prajavani

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚೀಪುರ ಗ್ರಾಮದ ಕಂಚೀವರದರಾಜ ಸ್ವಾಮಿಯ ಭಕ್ತರು ಮಕರ ಸಂಕ್ರಾಂತಿ ದಿನ ಕಾಡಿನಲ್ಲಿ ಬೇಟೆಯಾಡಿ ಹಿಡಿದ ಮೊಲಕ್ಕೆ ಕಿವಿಯೋಲೆ ಹಾಕುವ ಮೂಲಕ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಮೊಲದ ಕಿವಿಚುಚ್ಚಿ ಓಲೆ ಹಾಕಿ, ವಿಶೇಷ ಅಲಂಕಾರ ಮಾಡಿ ರಾಜಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ. ನಂತರ ಆ ಮೊಲವನ್ನು ಮತ್ತೆ ಕಾಡಿಗೆ ಬಿಡುವುದು ಇಲ್ಲಿನ ವಿಶೇಷತೆ.

ಇಲ್ಲಿನ ಜನರು ನೂರಾರು ವರ್ಷಗಳಿಂದಲೂ ಈ ವಿಶಿಷ್ಟ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಶೂನ್ಯಮಾಸವು ಮಕರ ರಾಶಿಯಿಂದ ಪ್ರವೇಶ ಆಗುತ್ತದೆ. ಇದರಿಂದ ಕಂಚೀವರದರಾಜ ಸ್ವಾಮಿ ಮಹಿಮೆ ಕಳೆಗುಂದುತ್ತದೆ ಎಂದು ಇಲ್ಲಿನ ಭಕ್ತರು ಶೂನ್ಯಮಾಸ ಆರಂಭದ ದಿನದಿಂದಲೂ ಪ್ರತಿದಿನ ಸೂರ್ಯೋದಯಕ್ಕೂ ಮೊದಲು ವಿಶೇಷ ನೈವೇದ್ಯ ಪೂಜೆ, ಪ್ರಸಾದ ವಿನಿಯೋಗ ಮಾಡುತ್ತಾರೆ.

ಶೂನ್ಯ ಮಾಸದ ಕೊನೆ ದಿನವಾದ ಮಕರ ಸಂಕ್ರಾಂತಿಯಂದು ಬೆಳಿಗ್ಗೆ 7.30ರ ಸುಮಾರಿಗೆ ಬೇಟೆಯಲ್ಲಿ ನೈಪುಣ್ಯ ಹೊಂದಿರುವ ಸುಮಾರು 30 ಮಂದಿ ಭಕ್ತರು ನಾಮಧಾರಣೆ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸುತ್ತಾರೆ.

ನಂತರ ತಮ್ಮ ಹೆಗಲ ಮೇಲೆ ಮೂರು ಬಲೆ ಹಾಕಿಕೊಂಡು, ಕಂಚೀವರದರಾಜ ಸ್ವಾಮಿ ಗೋವಿಂದಾ.. ಗೋವಿಂದಾ...ಎಂಬ ಘೋಷಣೆ ಕೂಗುತ್ತಾ ಸಮೀಪದ ಕಾಡಿಗೆ ಹೋಗುತ್ತಾರೆ. ಮೊಲ ಇರುವ ಜಾಗ ನೋಡಿ ಬಲೆ ಬೀಸುತ್ತಾರೆ. ಒಂದು ಮೊಲ ಸಿಗುವ ವರೆಗೂ ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ವಾಪಸ್‌ ಬರುವುದಿಲ್ಲ. ಬಲೆಗೆ ಎಷ್ಟೇ ಮೊಲ ಬಿದ್ದರೂ ಎಲ್ಲವನ್ನು ತರುವುದಿಲ್ಲ. ಯಾವುದೇ ಮೊಲಕ್ಕೆ ಸ್ವಲ್ಪವೂ ಪೆಟ್ಟು ಮಾಡುವುದಿಲ್ಲ. ಒಂದು ಮೊಲವನ್ನು ಮಾತ್ರ ಹಿಡಿದು ದೇವಸ್ಥಾನಕ್ಕೆ ತರುತ್ತಾರೆ.

ನಂತರ ದೇವರ ಸನ್ನಿಧಿಯಲ್ಲಿ ಮೊಲಕ್ಕೆ ಸ್ನಾನ ಮಾಡಿಸಿ, ನಾಮಧಾರಣೆ ಮಾಡಲಾಗುತ್ತದೆ. ಅದರ ಕಿವಿ ಚುಚ್ಚಿ ರಿಂಗು ಅಥವಾ ಕಿವಿಯೋಲೆ ಅಥವಾ ಗೆಜ್ಜೆ ಹಾಕುತ್ತಾರೆ. ಅದಕ್ಕೆ ಹೂವಿನ ಅಲಂಕಾರ ಮಾಡಿ ಕಂಚೀವರದರಾಜ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ನಂತರ ಅಲಕಂರಿಸಿದ ಮೊಲವನ್ನು ದೇವರಿಗೆ 3 ಬಾರಿ ಪ್ರದಕ್ಷಿಣೆ ಹಾಕಿ. ವಿವಿಧ ಜಾನಪದ ಕಲಾತಂಡದ ಮೆರವಣಿಗೆಯೊಂದಿಗೆ ಮೊಲವನ್ನು ಊರ ಬಾಗಿಲಿಗೆ ತರಲಾಗುತ್ತದೆ.

ಅಲ್ಲಿ ಮತ್ತೆ ಮೊಲವನ್ನು 3 ಬಾರಿ ದೇವರಿಗೆ ಪ್ರದಕ್ಷಿಣೆ ಹಾಕಿಸಿ ಸಂಜೆ ಹೊತ್ತಿಗೆ ಮತ್ತೆ ಮೊಲವನ್ನು ಜೀವಂತವಾಗಿಯೇ ಕಾಡಿಗೆ ಬಿಡಲಾಗುತ್ತದೆ. ಮೆರವಣಿಗೆಯಲ್ಲಿ ಬರುವ ಕಂಚೀವರದರಾಜ ಸ್ವಾಮಿಗೆ ನೆರೆದಿದ್ದ ಭಕ್ತರು ಲಕ್ಷಾಂತರ ಚಿಲ್ಲರೆ ನಾಣ್ಯವನ್ನು ತೂರುತ್ತಾರೆ. ಈ ರೀತಿ ಮಾಡುವುದರಿಂದ ಶೂನ್ಯಮಾಸದ ದೋಷ ನಿವಾರಣೆ ಆಗುತ್ತದೆ. ಗ್ರಾಮದ ಜನರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ ಎಂದು ದೇವಸ್ಥಾನದ ಹಿರಿಯ ಪ್ರಧಾನ ಅರ್ಚಕ ಡಿ.ಪರುಶುರಾಮಪ್ಪ ‘ಪ್ರಜಾವಾಣಿ’ಗೆ ವಿವರಿಸಿದರು.

ಕಾಡಿನಲ್ಲಿ ಯಾವುದೇ ಪ್ರಾಣಿ ಬೇಟೆಯಾಡುವುದು, ಅದನ್ನು ಹಿಂಸಿಸುವುದು ಹಾಗೂ ಕೊಲ್ಲುವುದು ಅಪರಾಧ. ಈ ಬಗ್ಗೆ ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರದೀಪ್‌ ಪವಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !