ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಗಂಟೆ ನಂತರ ತುಂಡಾದ ಸರಪಳಿ

ಏಳುಕೋಟಿ ಮೈಲಾರಲಿಂಗೇಶ್ವರಸ್ವಾಮಿ ಸರಪಳಿ ಎಳೆಯುವ ಕಾರ್ಯಕ್ರಮ
Last Updated 28 ಅಕ್ಟೋಬರ್ 2020, 4:54 IST
ಅಕ್ಷರ ಗಾತ್ರ

ಹಿರಿಯೂರು: ನಗರದಲ್ಲಿ ಮಂಗಳವಾರ ನಡೆದ ಇತಿಹಾಸ ಪ್ರಸಿದ್ಧ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ದೇವರ ಸರಪಳಿ ಪ್ರಥಮ ಬಾರಿಗೆ ಸತತ ಮೂರು ಗಂಟೆ ಎಳೆದ ನಂತರ ತುಂಡಾಯಿತು.

ತಹಶೀಲ್ದಾರ್ ಜಿ.ಎಚ್.ಸತ್ಯನಾರಾಯಣ ಮಧ್ಯಾಹ್ನ 2ಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಪಳಿ ಎಳೆಯುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಹಿಂದಿನ ವರ್ಷಗಳಲ್ಲಿ ಒಂದು– ಒಂದೂವರೆ ಗಂಟೆ ಒಳಗೆ ತುಂಡಾಗುತ್ತಿದ್ದ ಸರಪಳಿ, ಮೂರು ಗಂಟೆಯಾದರೂ ತುಂಡಾಗದ ಕಾರಣ ಭಕ್ತರು ಆತಂಕ ಪಡುವಂತಾಗಿತ್ತು.

ಅಂತಿಮವಾಗಿ ಸಂಜೆ 5.10ಕ್ಕೆ ಮಿಥುನ್ ಎಂಬ ಯುವಕ ಎಳೆಯುವಾಗ ಐದು ಮೀಟರ್ ಉದ್ದಕ್ಕೆ ಸರಪಳಿ ತುಂಡಾಗಿದ್ದರಿಂದ ಈ ವರ್ಷ ಮಳೆ–ಬೆಳೆ ಸಮೃದ್ಧ ಅಲ್ಲದಿದ್ದರೂ ಉತ್ತಮವಾಗಿ ಆಗಲಿದೆ ಎಂದು ಸ್ಥಳದಲ್ಲಿದ್ದ ಹಿರಿಯರು ಅಭಿಪ್ರಾಯಪಟ್ಟರು.

ಸರಪಳಿ ಪವಾಡ ಪಾರಂಪರಿಕವಾಗಿ ನಡೆದು ಬಂದಿದೆ. ಹಾಲುಮತದ ಮೂರು ಮನೆತನದವರಾದ ಭಂಡಾರದವರು, ಗಣಾಚಾರರು ಹಾಗೂ ಸೊಪ್ಪಿನವರು ಸ್ವಾಮಿಯ ಸರಪಳಿ ಪವಾಡ ಹಾಗೂ ಇತರೆ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು.

ವಿವಿಧ ಜಾತಿ, ಧರ್ಮ ಹಾಗೂ ಕಸುಬಿಗೆ ಸೇರಿದ ಭಕ್ತ ಸಮುದಾಯ ಸ್ವಾಮಿಗೆ ಹರಕೆ ತೀರಿಸುತ್ತಾರೆ. ಹಾಲುಮತದ ಮನೆತನದವರು ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ಕಟ್ಟುನಿಟ್ಟಾದ ನಿಯಮ ಪಾಲನೆ ಮಾಡುತ್ತಾರೆ. ಸರಪಳಿ ಪವಾಡದ ದಿನ ಮನೆ ಮಂದಿಯೆಲ್ಲ ಉಪವಾಸವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಸರಪಳಿಗೆ ಹಾಲು, ತುಪ್ಪ, ಜೇನುತುಪ್ಪ, ವಿವಿಧ ಹಣ್ಣುಗಳಿಂದ ತಯಾರಿಸಿದ ಪ್ರಸಾದವನ್ನು ಮಣೇವು ಮತ್ತು ದೋಣಿ ಸೇವೆಯಲ್ಲಿ ಸ್ವಾಮಿಗೆ ಸಮರ್ಪಿಸಲಾಯಿತು. ಸರಪಳಿ ಪವಾಡ ಸಮಾಪನೆಗೊಂಡ ನಂತರ ಸ್ವಾಮಿಗೆ ‘ಗಂಗಾಪೂಜೆ’ ಸಲ್ಲಿಸಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT