ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ‘ನೆಲದ ಸಾಹಿತ್ಯ, ಸಂಸ್ಕೃತಿ ಉಳಿಸಿ’

‘ಚೈತ್ರದ ಚಿಗುರು’ ಜಿಲ್ಲಾ ಮಟ್ಟದ ಕವಿಗೋಷ್ಠಿ
Last Updated 16 ಮೇ 2022, 2:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಬರದ ನಾಡಾದ ಚಿತ್ರದುರ್ಗ ಸಾಹಿತ್ಯಿಕವಾಗಿ ಬಹು ಶ್ರೀಮಂತಿಕೆ ಹೊಂದಿದ್ದು, ಇದಕ್ಕೆ ಇಲ್ಲಿನ ಜಾನಪದ, ಬುಡಕಟ್ಟು ಸಂಸ್ಕೃತಿಯೇ ಸಾಕ್ಷಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಎಂ. ವೀರೇಶ್ ಹೇಳಿದರು.

ನಗರದ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ‘ಚೈತ್ರದ ಚಿಗುರು’ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ನೆಲದ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಕಾರ್ಯವನ್ನು ಸಾಕಷ್ಟು ಬರಹಗಾರರು ಮಾಡುತ್ತಿದ್ದಾರೆ. ಈ ಕಾರ್ಯ ಮತ್ತಷ್ಟು ಕ್ರಿಯಾಶೀಲವಾಗಬೇಕು.ಯುವಜನರು ಅಂಕಗಳ ಬೆನ್ನತ್ತಿ ಹೊರಟಿದ್ದಾರೆ. ಆದರೆ ಅಂಕಗಳೇ ಜೀವನವಲ್ಲ ಎಂಬ ಸತ್ಯವನ್ನು ಸಾಹಿತ್ಯ ತೋರಿಸುತ್ತಿದೆ. ಜೀವನದ ಅನುಭವದ ಸಾರವೇ ಕವಿತೆಗಳಾಗಿ ದಾಖಲಾಗಬೇಕು. ಅಂತಹ ಕವಿತೆಗಳು ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುತ್ತವೆ’ ಎಂದು ತಿಳಿಸಿದರು.

ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ ಗಣಕೀಕೃತವಾಗುತ್ತಿದೆ.ಆನ್‌ಲೈನ್‌ ಮೂಲಕವೇ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಆಗ ಹೆಚ್ಚಿನ ಕನ್ನಡಿಗರು ಸದಸ್ಯರಾಗಿ ಪರಿಷತ್ತನ್ನು ಬಲಪಡಿಸಲು ಸಹಕಾರಿಯಾಗಲಿದೆ’ ಎಂದರು.

ಸಾಹಿತಿ ಡಾ.ಸಿ. ಶಿವಲಿಂಗಪ್ಪ, ‘ಉದಯೋನ್ಮುಖ ಕವಿಗಳು ಅವರಲ್ಲಿನ ವಿಚಾರ, ಕಲ್ಪನೆ ಹಾಗೂ ಭಾವನೆಗಳಿಗೆ ಮೂರ್ತ ಸ್ವರೂಪ ನೀಡಿ ಶಬ್ದಗಳ ಮೂಲಕ ಕಾವ್ಯಕ್ಕೆ ಒಂದು ಹೊದಿಕೆ ಕೊಡುತ್ತಾರೆ. ಕವಿಯ ಆಲೋಚನೆ ಮತ್ತು ಚಿಂತನೆ ಕಾವ್ಯದ ಆತ್ಮವಾಗಿರುತ್ತದೆ.ಈ ರೀತಿಯ ಅಭಿವ್ಯಕ್ತಿಯ ವಸ್ತು ಹೊಸದಾಗಿರಬೇಕು’ ಎಂದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ 15ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT