ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಪರಂಪರೆ ಏಳ್ಗೆಗೆ ಒಕ್ಕೂಟ ರಚನೆ: ಮಠಾಧೀಶರ ಚರ್ಚೆ

ಪರಂಪರೆಯ ಮಠಗಳ ನಿರ್ವಹಣೆ, ನೂತನ ಬಸವ ಕೇಂದ್ರಗಳ ಸ್ಥಾಪನೆ ಕುರಿತು ಮಠಾಧೀಶರ ಚರ್ಚೆ
Last Updated 7 ಡಿಸೆಂಬರ್ 2021, 4:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಪರಂಪರೆಯನ್ನು ಉಳಿಸಿ, ಅದನ್ನು ಎತ್ತರಕ್ಕೆ ಕೊಂಡೊಯ್ಯುವ ಕಠಿಣ ಸಂದರ್ಭ ಎದುರಾದರೂ ಮುನ್ನಡೆಸುವ ಸದುದ್ದೇಶದಿಂದ ಮುರುಘಾಮಠದಲ್ಲಿ ಸೋಮವಾರ ಮುರುಘಾ ಪರಂಪರೆಯ ಮಠಾಧೀಶರ ಒಕ್ಕೂಟ ರಚನೆಯಾಯಿತು.

ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು. ಮುರುಘಾಮಠ, ಶಾಖಾ ಮಠಗಳು ಹಾಗೂ ವಿರಕ್ತ ಮಠಗಳ ಅನೇಕ ಮಠಾಧೀಶರು ಸುಮಾರು ಹೊತ್ತು ಗಂಭೀರ ಚರ್ಚೆ ನಡೆಸಿ ತೀರ್ಮಾನ ಕೈಗೊಂಡರು. ಮಠಾಧೀಶರ ಈ ಸಮಾಗಮ ಪರಂಪರೆಗೆ ಹೊಸ ಮುನ್ನುಡಿ ಬರೆಯಲು ನಾಂದಿ ಹಾಡಿತು. ಮಠಗಳ ನಿರ್ವಹಣೆ, ಇನ್ನಷ್ಟು ನೂತನ ಬಸವ ಕೇಂದ್ರಗಳ ಸ್ಥಾಪನೆಯ ವಿಷಯ ಕೂಡ ಮುನ್ನಲೆಗೆ ಬಂದಿತು.

ಶಿವಮೂರ್ತಿ ಶರಣರು, ‘ಇಲ್ಲಿ ಸೇರಿರುವ ಮಠಾಧೀಶರೆಲ್ಲರೂ ಬರಿಗೈಲಿ ಬಂದವರು. ಮುರುಘಾ ಪರಂಪರೆ ಒಂದು ಉತ್ತಮ ಸ್ಥಾನ ಕೊಟ್ಟಿದೆ. ಇದೊಂದು ವಿಶಾಲವಾದ ಛತ್ರಿಯಾಗಿದ್ದು, ನಾವೆಲ್ಲಾ ಅದರ ನೆರಳಲ್ಲಿದ್ದೇವೆ. ಅದನ್ನು ಮುಂದುವರಿಸುವುದು ಎಲ್ಲರ ಕರ್ತವ್ಯ ಮಾತ್ರವಲ್ಲ, ಅದಕ್ಕೆ ಸಲ್ಲಿಸುವ ಗೌರವವೂ ಹೌದು’ ಎಂದು ಸಲಹೆ ನೀಡಿದರು.

‘ಕೆಲ ಮಠಾಧೀಶರಿಗೆ ಆಸ್ತಿ ಕೇಂದ್ರಿತ ಮಠ ಬೇಕಿದೆ. ಆದರೆ, ಪರಂಪರೆ ಬೇಡ ಎಂಬ ಭಾವನೆ ಇದೆ. ಆದರ್ಶಯುತ ಮಠಾಧೀಶರು ಆಗಬೇಕು ಎಂಬುದು ಮುರುಘಾ ಪರಂಪರೆಯ ಮೂಲ ಉದ್ದೇಶ. ಈಗಾಗಲೇ ಪರಂಪರೆಗೆ ಸೇರಿದ ಶಾಖಾಮಠಗಳಿಗೆ ಮೂಲಮಠದ ಪರವಾನಗಿ ಇಲ್ಲದೆ ಕೆಲವರು ನೇಮಕಗೊಂಡಿದ್ದಾರೆ. ಆಯಾ ಊರಿನ ಭಕ್ತರಿಗೆ ಪರಂಪರೆಯ ಅರಿವು ಇಲ್ಲದಿರುವುದೇ ಇದಕ್ಕೆ ಬಹುಮುಖ್ಯ ಕಾರಣ. ಹೀಗಾಗಿ ಅಳಿವಿನತ್ತ ಕೊಂಡೊಯ್ಯುತ್ತಿದೆ’ ಎಂದು ವಿಷಾದಿಸಿದರು.

ಕುಟುಂಬದ ಆಸ್ತಿಯಾಗುವುದು ಬೇಡ: ‘ರಕ್ತ ಸಂಬಂಧಿಗಳ ಪೈಕಿ ಉತ್ತರಾಧಿಕಾರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ತೊಂದರೆ ಇಲ್ಲ. ರಕ್ತಸಂಬಂಧವೇ ಅರ್ಹತೆ ಆಗದೆ, ಆತನಲ್ಲಿನ ಪ್ರತಿಭೆ ಗುರುತಿಸಿ. ಧಾರ್ಮಿಕ, ಸಾಮಾಜಿಕ ಕಳಕಳಿ ಜತೆಗೆ ಸೇವಾ ಮನೋಭಾವ ಮಾನದಂಡ ಆಗಬೇಕು. ಸಂಬಂಧಿಕರನ್ನು ಸೇರಿಸಿಕೊಂಡು ಕುಟುಂಬದ ಆಸ್ತಿಯನ್ನಾಗಿ ಯಾವ ಮಠವನ್ನು ಮಾಡಬೇಡಿ’ ಎಂದು ಸಲಹೆ ನೀಡಿದರು.

ಬನವಾಸಿಯ ನಾಗಭೂಷಣ ಸ್ವಾಮೀಜಿ, ‘ಪರಂಪರೆ ಜತೆಗೆ ಸಾಗದಿದ್ದರೆ, ಭವಿಷ್ಯವಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಾಗೋಣ. ಸಮಾಜಮುಖಿ ಸ್ವಾಮೀಜಿಗಳಾಗಿ ಬದುಕೋಣ. ಅಪಹಾಸ್ಯಕ್ಕೆ ಗುರಿಯಾಗದೆ, ಸಮಾಜ ಹಾಳು ಮಾಡದೆ, ಪರಂಪರೆ ಜತೆ ಬದ್ಧರಾಗಿರುತ್ತೇನೆ’ ಎಂದು ಪ್ರಮಾಣ ಮಾಡಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ‘ಮುರುಘಾ ಪರಂಪರೆಗೆ ವಿಶೇಷ ಇತಿಹಾಸವಿದೆ. ಕೆಳದಿ ಅರಸರು, ಕೊಡಗಿನ ಅರಸರು ಅನೇಕ ಮಠಗಳನ್ನು ನಿರ್ಮಾಣ ಮಾಡಿದರು. ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಸಾಕಷ್ಟು ಶಾಖಾ ಮಠಗಳಿವೆ. ತಮಿಳುನಾಡು ಮತ್ತು ಕೇರಳದಲ್ಲಿ 9 ಶಾಖಾ ಮಠಗಳಿವೆ. ಕಾಸರಗೋಡಿನ ವೇಕಲದಲ್ಲಿಯೂ ಶಾಖಾ ಮಠವಿದೆ. ಮೂಲ ಮಠದಲ್ಲಿ ಲಕ್ಷಾಂತರಪತ್ರಗಳಿವೆ. 850 ಫೈಲುಗಳಿದ್ದು, ಅದರಲ್ಲಿ 150 ಫೈಲನ್ನು ನಾನೇ ನೋಡಿದ್ದೇನೆ. ಎಲ್ಲಾ ಶಾಖಾ ಮಠಗಳು ಪರಂಪರೆ ಜತೆಗೆ ಪ್ರೀತಿ, ವಿಶ್ವಾಸದಿಂದ ಸಾಗಬೇಕಿದೆ’ ಎಂದು ಹೇಳಿದರು.

ಕಲಬುರಗಿಯ ಬಸವ ಕಬೀರ ಸ್ವಾಮೀಜಿ, ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಶಿರಾಳಕೊಪ್ಪದ ಸಿದ್ಧೇಶ್ವರ ಸ್ವಾಮೀಜಿ, ಹಿರೇಮಾಗಡಿಯ ಶಿವಮೂರ್ತಿ ಸ್ವಾಮೀಜಿ, ಸವಣೂರು ದೊಡ್ಡಹುಣಸೇಮಠದ ಚೆನ್ನಬಸವ ಸ್ವಾಮೀಜಿ, ಸದಾಶಿವಪೇಟೆಯ ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿ ಅನೇಕ ಮಠಾಧೀಶರು ಈ ಸಂದರ್ಭದಲ್ಲಿ ಇದ್ದರು.

ಕೋಟ್‌...

ಶಾಖಾಮಠಗಳ ಯೋಗಕ್ಷೇಮವನ್ನು ಮೂಲ ಮಠ ನೋಡಿಕೊಳ್ಳಬೇಕು. ಎಲ್ಲ ಶಾಖಾ ಮಠಗಳಿಗೆ ತಂದೆ–ತಾಯಿಯಾಗಿ ಪೋಷಿಸಬೇಕು. ಉತ್ತರಾಧಿಕಾರಿ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕು.
ಶಾಂತವೀರ ಸ್ವಾಮೀಜಿ, ಕೊಳದಮಠ

ಪರಂಪರೆ ಉಳಿಸಲು ಇದೊಂದು ಉತ್ತಮ ಸಂದೇಶ. ಬಸವತತ್ವ ಎತ್ತಿಹಿಡಿದ ಮಠಗಳಲ್ಲಿ ಮುರುಘಾಮಠ ಪ್ರಮುಖವಾದುದು. ಎಲ್ಲರೂ ಸೇರಿ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ಸಮಯ.

ರಂಜಾನ್ ದರ್ಗಾ, ಶರಣ ಸಾಹಿತಿ

ಆಸ್ತಿ, ಹಣ ಕೇಳುವುದಿಲ್ಲ

‘ಭೌತಿಕ ಆಸ್ತಿ, ಸಂಪತ್ತಿಗಿಂತ ಪರಂಪರೆ ಶ್ರೀಮಂತವಾದುದು. ಇವೆರಡು ಹೋಗುತ್ತದೆ, ಬರುತ್ತದೆ. ಈಗಾಗಲೇ ಮೂಲಮಠದ ಅನುಮತಿ ಪಡೆಯದೆ ರಾಜ್ಯದ ವಿವಿಧೆಡೆ ಇರುವ ಮುರುಘಾಮಠದ ಶಾಖಾ ಮಠಗಳಿಗೆ ಅನೇಕರು ಸ್ವಾಮೀಜಿ ಆಗಿದ್ದಾರೆ. ಅವರೆಲ್ಲರನ್ನೂ ಶ್ರೀಮಠ ಸ್ವಾಗತಿಸುತ್ತದೆ. ನಿಮ್ಮ ಮುಂದುವರಿಕೆಗೆ ಯಾವ ಅಡ್ಡಿಯಿಲ್ಲ. ಆಸ್ತಿಯನ್ನಾಗಲಿ ಅಥವಾ ಹಣವನ್ನಾಗಲಿ ಕೇಳುವುದಿಲ್ಲ. ಆದರೆ, ಪರಂಪರೆಯೊಂದಿಗೆ ಗುರುತಿಸಿಕೊಳ್ಳುವುದೇ ಮುಖ್ಯ’ ಎಂದು ಶರಣರು ಸಲಹೆ ನೀಡಿದರು.

ಒಕ್ಕೂಟದ ಪದಾಧಿಕಾರಿಗಳು

ಶಿವಮೂರ್ತಿ ಮುರುಘಾ ಶರಣರು (ಅಧ್ಯಕ್ಷರು), ಶಾಂತವೀರ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ವೃಷಭಲಿಂಗೇಶ್ವರ ಸ್ವಾಮೀಜಿ, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಮಹಾಂತ ರುದ್ರೇಶ್ವರ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ, ಮೋಕ್ಷಪತಿ ಸ್ವಾಮೀಜಿ (ಉಪಾಧ್ಯಕ್ಷರು), ಚೆನ್ನಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ (ಕಾರ್ಯದರ್ಶಿ), ಮಡಿವಾಳೇಶ್ವರ ಸ್ವಾಮೀಜಿ, ಸಂಗನ ಬಸವ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ (ಸಹ ಕಾರ್ಯದರ್ಶಿ), ಉಳಿದ ಶಾಖಾ ಮಠಗಳ ಸ್ವಾಮೀಜಿಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT