ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕೆಗೆ ವಿಜ್ಞಾನ ಪ್ರೇರಕ

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು
Last Updated 27 ಜನವರಿ 2020, 14:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಹಾಗೂ ಮಾನಸಿಕ ಬೆಳವಣಿಗೆಗೆ ವಿಜ್ಞಾನ ವಸ್ತುಪ್ರದರ್ಶನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಮಕ್ಕಳ ಜ್ಞಾನ ವೃದ್ಧಿ ಹಾಗೂ ಬೆಳವಣಿಗೆಗೆ ಇದು ಸಹಕಾರಿಯಾಗಬಲ್ಲದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಅಭಿಪ್ರಾಯಪಟ್ಟರು.

ಇಲ್ಲಿನ ಇಂಡಿಯನ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ‘ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಇನ್‌ಸ್ಪೈರ್‌ ಅವಾರ್ಡ್‌’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇನ್‌ಸ್ಪೈರ್‌ ಅವಾರ್ಡ್‌’ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪೂರಕ ವೇದಿಕೆ ನಿರ್ಮಿಸಿಕೊಟ್ಟಿದೆ. ಮಕ್ಕಳ ಸೃಜನಶೀಲತೆ ಇದರಲ್ಲಿ ಬೆಳಕಿಗೆ ಬರಲಿದೆ. ವಿಜ್ಞಾನದ ಪ್ರತಿ ಮಾದರಿಯಲ್ಲಿ ಮಕ್ಕಳ ಜ್ಞಾನ, ಬುದ್ದಿಶಕ್ತಿ ಗೋಚರವಾಗುತ್ತಿದೆ. ಮಕ್ಕಳ ಪಾಲ್ಗೊಳ್ಳುವಿಕೆ ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, ‘ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರ. ವಿಜ್ಞಾನ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಾರೆ. ಸೃಜನಶೀಲತೆ ಹೊಂದಿದ ಶಿಕ್ಷಕರು ಮಕ್ಕಳಿಗೆ ಸ್ಫೂರ್ತಿ ತುಂಬುತ್ತಾರೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತಿದೆ. ವಿಜ್ಞಾನದ ಬೆಳವಣಿಗೆಗೆ ಪ್ರತಿಯೊಬ್ಬರು ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಾನಂದ್ ಮಾತನಾಡಿ, ‘ವಿಜ್ಞಾನದ ನಿಯಮ, ರೂಪುರೇಷೆ ಹಾಗೂ ಪ್ರಾಮುಖ್ಯತೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ವಿಜ್ಞಾನದ ಸಂಶೋಧನೆ ಅರಿತು ಸ್ಥಳೀಯ ತೊಂದರೆಗಳನ್ನು ನಿವಾರಿಸುವಲ್ಲಿ ಸಕ್ರಿಯರಾಗಬೇಕು’ ಎಂದು ಸಲಹೆ ನೀಡಿದರು.

‘ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿಯ ಅಭಿವೃದ್ಧಿಗಾಗಿ ವೈಜ್ಞಾನಿಕ ಸಾಧನ, ಸಲಕರಣೆ ಹಾಗೂ ಸಾವಯವ ಗೊಬ್ಬರ, ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅವಿಷ್ಕಾರಗಳನ್ನು ಕೈಗೊಳ್ಳಬೇಕು. ವಿಜ್ಞಾನದ ಮುಂದುವರೆದ ರೂಪವೇ ತಂತ್ರಜ್ಞಾನವಾಗಿದೆ. ವಿದ್ಯಾರ್ಥಿಗಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ವಸ್ತುಪ್ರದರ್ಶನ ಮಾದರಿಗಳು ನೋಡುಗರನ್ನು ಆಕರ್ಷಿಸಿದವು. ಸೋಲಾರ್ ರೈಲು, ಸೋಲಾರ್ ಹೈಬ್ರಿಡ್ ಸೈಕಲ್, ಅಪರಿಮಿತ ಸಂಪನ್ಮೂಲ ಶಕ್ತಿ, ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿಸುವ ಸಾಧನ, ಅಪಘಾತ ತಪ್ಪಿಸಲು ಯೂನಿವರ್ಸಲ್ ರಸ್ತೆ, ಒಣಬೇಸಾಯ ಆಹಾರ ಸುಸ್ಥಿರತೆ, ಸೌರಮಂಡಲ, ತ್ಯಾಜ್ಯ ವಿಲೇವಾರಿ, ಮಾನವ ಹೃದಯದ ಕಾರ್ಯವೈಖರಿ ಸೇರಿದಂತೆ ಹಲವು ವಿಜ್ಞಾನದ ಮಾದರಿಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಕೈಗನ್ನಡಿ ಹಿಡಿದಿದ್ದವು. ಆರು ತಾಲ್ಲೂಕುಗಳಿಂದ 441 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಡಯಟ್ ಉಪನಿರ್ದೇಶಕ ಕೆ.ಕೋದಂಡರಾಮ, ಶಿವಮೊಗ್ಗ ಡಿಡಿಪಿಐ ಎನ್.ಎಂ.ರಮೇಶ್, ಉಪನ್ಯಾಸಕ ಭರಮಪ್ಪ ಮೈಸೂರು, ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ರುದ್ರಪ್ಪ, ಡಯಟ್ ಉಪಪ್ರಾಂಶುಪಾಲ ಗಂಗಯ್ಯ, ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಪ್ಪ, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಮೊಳಕಾಲ್ಮುರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT