ಗುರುವಾರ , ಜೂನ್ 17, 2021
22 °C
ವೈಜ್ಞಾನಿಕವಾಗಿ ನೀರಿನ ಮೂಲ ಪತ್ತೆ, ಕೊಳವೆಬಾವಿ ಯೋಜನೆ ಯಶಸ್ವಿ

ಜಲ ಶೋಧನೆ ಕಾರ್ಯಕ್ಕೆ ಮುಂದಾದ ವಿಜ್ಞಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನಾಯಕನಹಟ್ಟಿ: ಶಾಸಕ ಬಿ.ಶ್ರೀರಾಮುಲು ಸೂಚನೆಯ ಮೇರೆಗೆ  ಆರ್.ಡಿ.ಪಿ.ಆರ್ ಹಿರಿಯ ವಿಜ್ಞಾನಿಗಳ ತಂಡ ಕ್ಷೇತ್ರದಲ್ಲಿ ತೀವ್ರ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ನಿಖರವಾದ ಜಲ ಮೂಲವನ್ನು ಕಂಡು ಹಿಡಿಯುವ ಮೂಲಕ ಯಶಸ್ವಿಯಾಯಿತು.

ತಾಲ್ಲೂಕಿನ ಎನ್. ಮಹದೇವಪುರ, ಗೊಲ್ಲಹಳಿ ಎತ್ತಿನಹಟ್ಟಿ, ಜೋಗಿಹಟ್ಟಿ, ಅಬ್ಬೇನಹಳ್ಳಿ ಸೇರಿ ಹಲವಾರು ಗ್ರಾಮಗಳಲ್ಲಿ ನೀರಿನ ನಿಖರವಾದ ಸ್ಥಳವನ್ನು ಗುರುತಿಸಿ ಗರಿಷ್ಠ ಪ್ರಮಾಣದ ನೀರನ್ನು ಕೊಳವೆಬಾವಿಯ ಮೂಲಕ ಪಡೆಯಲಾಗುತ್ತಿದೆ.

ಗೊಲ್ಲಹಳ್ಳಿ ಗ್ರಾಮದಲ್ಲಿ ಈ ತಂಡ ಗುರುತಿಸಿದ ಸ್ಥಳದಲ್ಲಿ 3.5 ಇಂಚು ನೀರು ದೊರೆತಿದೆ. ಎನ್. ಮಹದೇವಪುರದಲ್ಲಿ 2.5 ಇಂಚು, ಅಬ್ಬೇನಹಳ್ಳಿ 3ಇಂಚು ದೊರೆತಿದೆ.

ನಾಯಕನಹಟ್ಟಿ ಸೇರಿ ಮೊಳಕಾಲ್ಮುರು ಕ್ಷೇತ್ರದ ನಾನಾ ಸ್ಥಳಗಳಲ್ಲಿ ನೀರಿನ ಮೂಲವನ್ನು ಪತ್ತೆ ಹಚ್ಚುವ ಕಾರ್ಯವನ್ನು ತಂಡ ಕೈಗೊಳ್ಳಲಿದೆ.

ಪ್ರಮುಖವಾಗಿ ನೀರು ಶೋಧನಾ ಕಾರ್ಯದಲ್ಲಿ ರೆಸಿಸ್ಟಿವಿಟಿ ಮೀಟರ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ಎರಡು ಮೀಟರ್ ವ್ಯಾಪ್ತಿಯ ಭೂಮಿಯಲ್ಲಿ ಹಾದುಹೋಗುವ ವಿದ್ಯುತ್ ಪ್ರವಾಹದ ಪ್ರಮಾಣವನ್ನು ನಿಖರವಾಗಿ ದಾಖಲು ಮಾಡಲಾಗುತ್ತದೆ. ಇದರಿಂದ ಭೂಮಿಯ ಮೇಲ್ಮೈಯಿಂದ ಆಳದಲ್ಲಿರುವ ನೀರಿನ ಮೂಲದ ದತ್ತಾಂಶಗಳನ್ನು ಪಡೆಯಲು ಸಹಕಾರಿಯಾಗಿದೆ. ಇದರಿಂದ ಹೆಚ್ಚು ನಿಖರವಾಗಿ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತದೆ.

ಮೊಳಕಾಲ್ಮುರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಶಾಸಕ ಬಿ. ಶ್ರೀರಾಮುಲು ಜನರನ್ನು ಭೇಟಿ ಮಾಡಲು ಪ್ರತಿಗ್ರಾಮಗಳಿಗೂ ಬಂದಾಗ ಜನರು ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೆ ಸ್ಪಂದಿಸಿದ ರಾಮುಲು ತಕ್ಷಣ ಕೊಳವೆಬಾವಿಗಳನ್ನು ಕೊರೆಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ನಂತರ ಕ್ಷೇತ್ರದಲ್ಲಿ 70 ಕೊಳವೆಬಾವಿಗಳನ್ನು ಕೊರೆಯಿಸಿದರೂ ಕೇವಲ ಎಂಟರಲ್ಲಿ ಮಾತ್ರ ಅಲ್ಪಪ್ರಮಾಣದ ನೀರು ದೊರೆತಿತ್ತು. ಇದರಿಂದ ಎಚ್ಚೆತ್ತ ಶಾಸಕ ಶ್ರೀರಾಮುಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ತಾಂತ್ರಿಕ ಸಲಹೆಗಾರರನ್ನು ಸಂಪರ್ಕಿಸಿ ವೈಜ್ಞಾನಿಕ ವಿಧಾನಗಳ ಮೂಲಕ ಜಲಮೂಲವನ್ನು ಹುಡುಕಲು ತಾಕೀತು ಮಾಡಿದ್ದರು. ಹಾಗಾಗಿ ವಿಜ್ಞಾನಿಗಳ ತಂಡ ಬಂದು ಪ್ರತಿ ಗ್ರಾಮದಲ್ಲೂ ಜಲಮೂಲವನ್ನು ಸಂಶೋಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ ಪಿ.ಶಿವಣ್ಣ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು