ಸೋಮವಾರ, ಸೆಪ್ಟೆಂಬರ್ 23, 2019
27 °C
ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್‌ ಭರವಸೆ

ಸೆಪ್ಟಂಬರ್‌ನಲ್ಲಿ ವಾಣಿವಿಲಾಸಕ್ಕೆ ಭದ್ರೆ ನೀರು    

Published:
Updated:
Prajavani

ಹೊಸದುರ್ಗ: ಸೆಪ್ಟೆಂಬರ್‌ ಮೊದಲ ವಾರದಲ್ಲಿ ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸುವುದು ಶತಸಿದ್ಧ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಭರವಸೆ ನೀಡಿದರು.

ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ವಾಣಿವಿಲಾಸ ಜಲಾಶಯ ತುಂಬಿದರೆ ಹಿನ್ನೀರು ನಮ್ಮ ತಾಲ್ಲೂಕಿನಲ್ಲಿ ನಿಲ್ಲುತ್ತದೆ. ₹ 151 ಕೋಟಿ ವೆಚ್ಚದಲ್ಲಿ ಮತ್ತೋಡು ಹಾಗೂ ಶ್ರೀರಾಂಪುರ ಹೋಬಳಿಯ ಕೆರೆಗಳಿಗೆ ನೀರು ಹರಿಸಲಾಗುವುದು. ಮಾಡದಕೆರೆ ಹೋಬಳಿಯಿಂದ ವಿವಿ ಸಾಗರ ಹಿನ್ನೀರು ದಾಟಿ ಮತ್ತೋಡಿಗೆ ಹೋಗಲು ₹ 48 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. ದಶರಥರಾಮೇಶ್ವರ ವಜ್ರದ ಅಭಿವೃದ್ಧಿಗೆ ₹ 5 ಕೋಟಿ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸಂಸದ ಎ.ನಾರಾಯಣಸ್ವಾಮಿ, ‘ಭದ್ರೆ ನೀರು ಹರಿಸಿ ಈ ಭಾಗದ ಜನರ ಹಲವು ವರ್ಷಗಳ ಕನಸು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಇದರಿಂದ ತಾಲ್ಲೂಕಿನ ರೈತರಿಗೆ ಹೆಚ್ಚು ಉಪಯೋಗವಾಗಲಿದೆ. ಶ್ರೀಕೃಷ್ಣನು ಯಾವುದೇ ಒಂದು ಜಾತಿಗೆ ಸೀಮಿತವಾದ ದಾರ್ಶನಿಕನಲ್ಲ. ಸರ್ವಜನಾಂಗದ ಹಾಗೂ ದೇಶಭಕ್ತಿಯ ಹರಿಕಾರ’ ಎಂದರು.

ಗ್ರಾಮದ ಮುಖಂಡ ಎಚ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಟಿ. ಅಜ್ಜಪ್ಪ, ಚೇತನಾ ಪ್ರಸಾದ್, ಹೆಬ್ಬಳ್ಳಿ ಮಲ್ಲಿಕಾರ್ಜುನ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ರವೀಂದ್ರ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಾ ಮಂಜುನಾಥ್‌, ಸದಸ್ಯೆ ಮಂಜುಳಾ ಚಿದಾನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಮ್ಮ ಜಗನ್ನಾಥ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ್‌, ಎಂ.ಆರ್‌.ಶಾಂತಪ್ಪ ಹಾಜರಿದ್ದರು.

 

Post Comments (+)