ಶನಿವಾರ, ಜನವರಿ 23, 2021
25 °C
ಸಾಂಸ್ಕೃತಿಕ ಅಸ್ಮಿತೆ ವಿಚಾರ ಸಂಕಿರಣದಲ್ಲಿ ಡಾ.ಬಂಜಗೆರೆ ಜಯಪ್ರಕಾಶ್

ಸಾಮಾಜಿಕ ಮೌಲ್ಯ ಮೈಗೂಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ‘ಪ್ರತಿಯೊಬ್ಬರೂ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಪರೋಪಕಾರಿ ಜೀವನ ನಡೆಸಬೇಕು. ಈ ಮೂಲಕ ನಾವು ಭವಿಷ್ಯದಲ್ಲಿ ಮಾದರಿ ಜೀವನ ನಡೆಸಲು ಸಾಧ್ಯವಾಗಲಿದೆ’ ಎಂದು ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಗುರುಭವನದಲ್ಲಿ ಪ್ರೇರಣ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬುಡಕಟ್ಟು ಬಳಗ, ಜಂಬೂದ್ವೀಪ ಕರ್ನಾಟಕ, ಜೈಭೀಮ್ ಯುವಕ ಸಂಘ ಸಂಯುಕ್ತವಾಗಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಆದಿಮ ಮತ್ತು ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಷೆ ಹುಟ್ಟುವ ಮುನ್ನ ಬುಡಕಟ್ಟು ಸಂಸ್ಕೃತಿ ಮೂಲ ನಿವಾಸಿಗಳ ಭಾಷೆಯಾಗಿತ್ತು. ಕಾಲ ಬದಲಾದಂತೆ ಮೇಲ್ಜಾತಿಯವರು ಕೆಳ ಸಮುದಾಯಗಳನ್ನು ಒಡೆದು ಆಳುವ ನೀತಿ ಅನುಸರಿಸಿದರು. ಇದನ್ನು ಮೀರಿ ಇಂದು ಬುಡಕಟ್ಟು ಜನಾಂಗ ಮತ್ತು ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬಂದಿದ್ದಾರೆ. ಮಹಿಳೆಯರು ಫುಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಕಡ್ಡಾಯ ಶಿಕ್ಷಣ ಪಡೆಯುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ‘ಪ್ರಸ್ತುತ ನಾವು ಸಾಂಸ್ಕೃತಿಕ ಬಳಲಿಕೆಯಿಂದ ಬಳಲುತ್ತಿದ್ದೇವೆ. ಕೆಳ ಸಮುದಾಯಗಳ ಮೇಲೆ ವೈದಿಕ ವರ್ಗಗಳ ಸಾಂಸ್ಕೃತಿಕ ದಬ್ಬಾಳಿಕೆಯು ಮಾರಕವಾಗಿದ್ದು, ಬುಡಕಟ್ಟು ಸಂಸ್ಕೃತಿಗಳು ಅವನತಿಯತ್ತ ಸಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಬುಡಕಟ್ಟು ಸಂಸ್ಕೃತಿಗಳನ್ನು ಉಳಿಸಿ, ಬೆಳೆಸುವ ಸಾಮಾಜಿಕ ಬದ್ಧತೆಯನ್ನು ಸರ್ಕಾರಗಳು ತೋರಬೇಕಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಅನೇಕ ಕೆಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಯಿತು. ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು, ಜೀವನೋಪಾಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿತ್ತು’ ಎಂದು ಹೇಳಿದರು.

ಪ್ರೇರಣಾ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಕೆ.ಜೆ.ಜಯಲಕ್ಷ್ಮಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಧ್ಯಾಪಕ ಡಾ.ಪೂಜಾರಹಳ್ಳಿ ವಿರೂಪಾಕ್ಷಪ್ಪ, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುಖಾಸಿಂ ಅಲಿ, ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಜಗಳೂರಯ್ಯ, ವಕೀಲ ರಾಜಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಯೋಗೇಶ್ ಬಾಬು, ಮುಖಂಡರಾದ ಮೊಗಲಹಳ್ಳಿ ಜಯಣ್ಣ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಬಸವರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.