ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ ಪ್ರಕರಣ: ಡಿವೈಎಸ್‌ಪಿ ಕಚೇರಿಯಲ್ಲಿ ಮುರುಘಾ ಶ್ರೀ ವಿಚಾರಣೆ

Last Updated 2 ಸೆಪ್ಟೆಂಬರ್ 2022, 2:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಚಳ್ಳಕೆರೆಯ ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಚಳ್ಳಕೆರೆ ನಗರವು ಚಿತ್ರದುರ್ಗದಿಂದ 30 ಕಿ.ಮೀ ದೂರದಲ್ಲಿದೆ.

ಭಾರಿ ಪೊಲೀಸರೊಂದಿಗೆ ತೆರಳಿದ ತನಿಖಾ ತಂಡ ಮುರುಘಾಶ್ರೀ ಅವರಿಗೆ ಪೊಲೀಸ್‌ ವಾಹನ ಏರುವಂತೆ ಸೂಚನೆ ನೀಡಿತು. ಖಾವಿ ಬಟ್ಟೆ ಧರಿಸಿದ ಅವರು ಮೇಲೊಂದು ಬಿಳಿ ವಸ್ತ್ರ ಹೊದ್ದು ಪೊಲೀಸ್‌ ವಾಹನ ಹತ್ತಿದರು. ಅನುಭವ ಮಂಟದಿಂದ ಹೊರಟ ಪೊಲೀಸ್ ವಾಹನ ಉತ್ತರ ದಿಕ್ಕಿನ ಭಾಗಿಲಿನಿಂದ ಹೊರಗೆ ಬಂದಿತು.

ಮಾಧ್ಯಮ ಪ್ರತಿನಿಧಿಗಳು ಅದಾಗಲೇ ಮಠದ ಮುಂಭಾಗದಲ್ಲಿ ಜಮಾಯಿಸಿದ್ದರು. ಬಂಧನ ಭೀತಿ ಹೆಚ್ಚಾಗಿದ್ದರಿಂದ ಭಕ್ತರು ಮಠದತ್ತ ಬರಲಾರಂಭಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಶರಣರನ್ನು ಚಳ್ಳಕೆರೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿತು ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ
ಚಿತ್ರದುರ್ಗ:
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ವೈದ್ಯಕೀಯ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು.

ಮುರುಘಾ ಮಠದ ಆವರಣದಲ್ಲಿ ಅವರನ್ನು ಬಂಧಿಸಿದ ಪೊಲೀಸರು ವಿಚಾರಣೆಗಾಗಿ ಚಳ್ಳಕೆರೆ ಡಿವೈ ಎಸ್ ಪಿ ಕಚೇರಿಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಮಧ್ಯ ರಾತ್ರಿ 12.40ಕ್ಕೆ ಕರೆತರಲಾಯಿತು.

ತಾಯಿ ಮತ್ತು ಮಕ್ಕಳಿಗೆ ನೂತನವಾಗಿ ನಿರ್ಮಿಸಿದ ಆಸ್ಪತ್ರೆಯ ಕಟ್ಟಡದಲ್ಲಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಬಸವರಾಜ್ ನೇತೃತ್ವದ ವೈದ್ಯರ ತಂಡ ಪರೀಕ್ಷೆ ನಡೆಸಿತು.

'ಪ್ರಕರಣದ ಪ್ರಮುಖ ಆರೋಪಿ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಹಾಸ್ಟೆಲ್ ವಾರ್ಡನ್ ವಶಕ್ಕೆ ಪಡೆಯಲಾಗಿದೆ. ಉಳಿದ ಮೂವರು ಆರೋಪಿಗಳಿಗೆ ನೋಟಿಸ್ ನೀಡಿಲ್ಲ. ಅವರು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ' ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT