ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವಕ್ಕೆ ಮುರುಘಾಮಠ ಸಜ್ಜು

ಮೊದಲಿನಂತೆಯೇ ಹತ್ತು ದಿನಗಳು ಶ್ರೀಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮ
Last Updated 8 ಅಕ್ಟೋಬರ್ 2021, 5:38 IST
ಅಕ್ಷರ ಗಾತ್ರ

ಚಿತ್ರದುರ್ಗ: ದಸರಾ ಮಹೋತ್ಸವದ ಸಂದರ್ಭದಲ್ಲಿಯೇ ಇಲ್ಲಿಯ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಕಳೆಗಟ್ಟಿದೆ. ಅ. 8ರಿಂದ 18ರವರೆಗೆ ನಿತ್ಯವೂ ವೈವಿಧ್ಯಮಯ ಕಾರ್ಯಕ್ರಮಆಯೋಜಿಸಲಾಗಿದೆ.

11 ದಿನ ನಡೆಯುತ್ತಿದ್ದ ಉತ್ಸವವನ್ನು ಕೋವಿಡ್‌ ಕಾರಣಕ್ಕೆ 2020ರಲ್ಲಿ ಆರು ದಿನಗಳಿಗೆ ಇಳಿಸಲಾಗಿತ್ತು. ‘ತಾವಿದ್ದಲ್ಲೇ ಶರಣ ಸಂಸ್ಕೃತಿ ಉತ್ಸವ’ ಎಂಬ ಧ್ಯೇಯ ವಾಕ್ಯದೊಂದಿಗೆ ಫೇಸ್‌ಬುಕ್‌ ಹಾಗೂ ಯುಟ್ಯೂಬ್ ನೇರ ಪ್ರಸಾರದ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕಿನ ಪ್ರಕರಣ ಗಣನೀಯವಾಗಿ ಕಡಿಮೆ ಆಗುತ್ತಿರುವುದರಿಂದ ಎಂದಿನಂತೆ ಅದ್ದೂರಿಯಾಗಿ ಆಚರಿಸಲು ಮಠದ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಈ ಬಾರಿ ರಾಜ್ಯ ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ಅನೇಕ ಮಠಾಧೀಶರು, ರಾಜ್ಯದ ಪ್ರಭಾವಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವ ಮುಗಿಯುವವರೆಗೂ ತಂಗುವವರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮ, ವಿಚಾರಗೋಷ್ಠಿಗಳು ನಡೆಯಲಿವೆ. ಅದಕ್ಕಾಗಿ ಶ್ರೀಮಠಸಜ್ಜುಗೊಂಡಿದೆ. ಬೈಕ್‌ ರ‍್ಯಾಲಿ, ರಾಜ್ಯಮಟ್ಟದ ಜನಪದ ಕಲೆಗಳ ಸ್ಪರ್ಧೆ, ಚಲನಚಿತ್ರೋತ್ಸವ, ರಾಜ್ಯಮಟ್ಟದ ಕೋಲಾಟ ಸ್ಪರ್ಧೆ, ದಕ್ಷಿಣ ರಾಜ್ಯಗಳ ಮೌಂಟೇನ್ ಬೈಕ್ ರ‍್ಯಾಲಿ, ರಾಜ್ಯಮಟ್ಟದ ಭಜನೆ ಸ್ಪರ್ಧೆ, ಸ್ಥಳೀಯ ಮಹಿಳೆಯರ ಕ್ರೀಡಾಕೂಟ, ಸ್ವಾತಂತ್ರ್ಯ ಹೋರಾಟದ ಅಮೃತ ಮಹೋತ್ಸವ, ಬಸವಕೇಂದ್ರ ಪದಾಧಿಕಾರಿಗಳ ಸಮಾವೇಶ, ಕೃಷಿ ಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಯುವಮೇಳ, ಮಕ್ಕಳ ಮೇಳ, ಜಯದೇವ ಜಂಗಿಕುಸ್ತಿ ಹೀಗೆ ಉತ್ಸವ ಮುಗಿಯುವವರೆಗೂ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮ ಜರುಗಲಿವೆ.

30ನೇ ವರ್ಷದ ಉತ್ಸವ: 1990ಕ್ಕೂ ಹಿಂದಿನಿಂದಲೂ ದಸರಾ ಮಹೋತ್ಸವವಾಗಿ ಶ್ರೀಮಠದಲ್ಲಿ ಆಚರಿಸಲಾಗುತ್ತಿದ್ದ ಉತ್ಸವವೂ 1991ರಿಂದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ‘ಶರಣ ಸಂಸ್ಕೃತಿ ಉತ್ಸವ’ದ ಹೆಸರಿನೊಂದಿಗೆಬದಲಾವಣೆ ಆಯಿತು. ಅಲ್ಲಿಂದ ಈವರೆಗೂ ವೈಚಾರಿಕತೆಯನ್ನು ಬಿತ್ತುತ್ತ ಬಂದಿದ್ದು, ಈ ಬಾರಿ ನಡೆಯುತ್ತಿರುವುದು 30ನೇ ವರ್ಷದ ಉತ್ಸವವಾಗಿದೆ. ಅಲ್ಲದೆ, ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವವೂ ಹೌದು.

ಒಂಬತ್ತು ದಿನ ವಿಶೇಷ ಪೂಜೆ
ಕೋಟೆನಗರಿಯ ನವದುರ್ಗಿಯರು ಸೇರಿ ಇಲ್ಲಿಯ ಶಕ್ತಿದೇವತೆಗಳಿಗೆ ನವರಾತ್ರಿ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳೂ ಪೂಜೆ ನೆರವೇರಲಿದೆ. ಉತ್ಸವ, ಕೆಂಡಾರ್ಚನೆ ಸೇರಿ ವಿಶೇಷ ಪೂಜೆಗಳು ಜರುಗಲಿವೆ.

ಶಕ್ತಿದೇವತೆಗಳನ್ನು ಒಂಬತ್ತು ರಾತ್ರಿ ಹಾಗೂ ಹತ್ತು ಹಗಲು ಪೂಜೆ ಸಲ್ಲಿಸುವ ಮೂಲಕ ಚಿತ್ರದುರ್ಗದ ಭಕ್ತರು ಶ್ರದ್ಧಾಭಕ್ತಿಯಿಂದ ನವರಾತ್ರಿ ಉತ್ಸವವನ್ನು ಆಚರಿಸಲು ಮುಂದಾಗಿದ್ದಾರೆ. ದೇಗುಲಗಳಲ್ಲಿ ಮೂಲ ಮತ್ತು ಉತ್ಸವಮೂರ್ತಿಗಳಿಗೆ ನವರಾತ್ರಿಯಲ್ಲಿ ನಿತ್ಯವೂ ವಿವಿಧ ಬಗೆಯ ಅಲಂಕಾರಗಳು ನಡೆಯಲಿದ್ದು, ಅ. 15ರವರೆಗೂ ಭಕ್ತರ ಕಣ್ಮನ ಸೆಳೆಯಲಿವೆ.

ರಸದೌತಣ ನೀಡಲಿರುವ ದೀಪಾಲಂಕಾರ
ಮುರುಘಾಮಠದಲ್ಲಿ ದೀಪಗಳ ಸಿಂಗಾರ... ಉತ್ಸವಕ್ಕೆ ಮಿನುಗುವ ನಕ್ಷತ್ರದಂತೆ ಹೊಳೆಯುವ ಮಾಯಾಲೋಕದ ಸೃಷ್ಟಿ. ಎತ್ತ ನೋಡಿದರೂ ಎರಡು ಕಣ್ಣುಗಳಿಗೆ ರಸದೌತಣ ನೀಡುವ ವರ್ಣರಂಜಿತ ವಿದ್ಯುತ್ ದೀಪಗಳು.

ಇದು ಈ ಉತ್ಸವದಲ್ಲಿ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುವ ಬಗೆ. ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿನ ಶ್ರೀಮಠದ ಆವರಣದಲ್ಲಿ ದೀಪಾಲಂಕಾರ ವಿಶೇಷ ಆಕರ್ಷಣೆಯಾಗಲಿದೆ. ಕಟ್ಟಡಗಳಿಗೆ ಸಾಲು ಸಾಲು ದೀಪಗಳು ಹಾಸಿಕೊಳ್ಳುತ್ತವೆ.

ಮಠದ ಹೊರಾಂಗಣವನ್ನು ದೀಪಗಳಲ್ಲಿ ಅಲಂಕರಿಸುವ ಕಲಾಕೃತಿ ಅನಾವರಣ. ಕಣ್ಣಿಗೆ ಹಬ್ಬ, ಮನಸಿಗೆ ಮುದ ನೀಡಲು ಸಜ್ಜಾಗುತ್ತಿದೆ. ವಿವಿಧೆಡೆಯಿಂದ ಬರುತ್ತಿರುವ ಮಠದ ಭಕ್ತರಿಗೆ ಈ ಉತ್ಸವವೂ ಸಾಂಪ್ರದಾಯಿಕ ಆಚರಣೆಯಾಗಿರದೇ ವೈಚಾರಿಕತೆ ಬಿತ್ತುವ, ಸಮಾನತೆ ಸಾರುವ ಉತ್ಸವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT