ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಪರಂಪರೆಯಲ್ಲಿ ಕಿರಣಗಳಾಗಿ ಬೆಳಗೋಣ

ಶರಣ ಸಂಸ್ಕೃತಿ ಉತ್ಸವ ಆರಂಭ, ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ
Last Updated 6 ಅಕ್ಟೋಬರ್ 2022, 5:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವ ಸರಳವಾಗಿ ನಡೆಯುತ್ತಿದೆ. ಮಠ ವಿದ್ಯುತ್‌ ದೀಪಾಲಂಕರಾದಲ್ಲಿ ಸಿಂಗಾರಗೊಂಡಿದ್ದು, ಭಕ್ತರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.

ಉದ್ಘಾಟನಾ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದ ಮುರುಘಾ ಮಠದ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ, ‘ಮುರುಘಾ ಮಠ ಭವ್ಯ, ದಿವ್ಯ ಪರಂಪರೆ ಹೊಂದಿದೆ. ಜಯದೇವ ಸ್ವಾಮೀಜಿ ಕಾಲದಲ್ಲಿ ಅಡ್ಡಪಲ್ಲಕ್ಕಿ, ಪಂಚಕಳಸ, ಅಂಬಾರಿ ಉತ್ಸವ ನಡೆಸಿದರು. ಮುರುಘಾ ಪರಂಪರೆಯ ಬೆಳಕಲ್ಲಿ ಕಿರಣಗಳಾಗಿ ಬೆಳಗೋಣ’ ಎಂದರು.

ಉತ್ಸವಕ್ಕೆ ಚಾಲನೆ ನೀಡಿದ ಇಳಕಲ್ಲಿನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ‘ಮುರುಘಾ ಪರಂಪರೆಯಲ್ಲಿ ಬೆಳೆದವರು ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುವಂತವರು. ಲಿಂಗಾಯತ ಸಮುದಾಯಕ್ಕೆ ಶಿಕ್ಷಣ ನೀಡಲು ಮುರಿಗಾ ಶಾಂತವೀರರು ಶ್ರಮಿಸಿದರು. ಅಂದಿನಿಂದ ಆರಂಭವಾದದ್ದು ಜಯದೇವ ಸ್ವಾಮಿಜಿಯವರೆಗೂ ಶಿಕ್ಷಣ ನೀಡುವ ಕಾರ್ಯ ಮುಂದುವರಿಯಿತು. ಪಾದಪೂಜೆಯ ಕಾಣಿಕೆಯಲ್ಲಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು’ ಎಂದು ಸ್ಮರಿಸಿಕೊಂಡರು.

‘ಶೂನ್ಯಪೀಠ ಪರಂಪರೆ ನಿರಂತರವಾಗಿ ನಡೆಯುತ್ತದೆ. ಸೂರ್ಯನ ಮುಂದೆ ಮೋಡಗಳು ಬರುತ್ತವೆ. ಮೋಡ ಕರಗಿ ಸೂರ್ಯ ಉಳಿದುಕೊಳ್ಳುತ್ತಾನೆ. ಮುರುಘಾ ಮಠ ವಿಶಿಷ್ಟ ಪರಂಪರೆ ಹೊಂದಿದೆ. ಈ ಬಾರಿಯ ಉತ್ಸವ ಸರಳವೂ ಅಲ್ಲ, ವೈಭವವೂ ಅಲ್ಲ. ಇದು ಪರಂಪರೆ’ ಎಂದರು.

ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ, ‘ಶೂನ್ಯಪೀಠ ಪರಂಪರೆ ಅಲ್ಲಮಪ್ರಭು ಅವರಿಂದ ಆರಂಭವಾಯಿತು. 12ನೇಯ ಶತಮಾನದಿಂದ 17ನೇ ಶತಮಾನದವರೆಗೆ 23 ಪೀಠಾಧಿಪತಿಗಳು ಬಂದು ಹೋಗಿದ್ದಾರೆ. ಅಧ್ಯಾತ್ಮ ಮಾರ್ಗದರ್ಶನ, ಕೋರಿಕೆ ಪರಿಹರಿಸುವುದು ಶೂನ್ಯ ಪೀಠಾಧ್ಯಕ್ಷರ ಕರ್ತವ್ಯವಾಗಿತ್ತು. ಮುರುಗಿ ತಾರಾವಳಿ ಮಹಾಲಿಂಗೇಂದ್ರ, ವಿಜಯ ಮಹಾಲಿಂಗಲೀಲ ವಿಲಾಸೂತ್ರದಲ್ಲಿ ಮುರುಘಾ ಪರಂಪರೆಯ ಉಗಮದ ಬಗ್ಗೆ ತಿಳಿಯಬಹುದು’ ಎಂದರು.

ಬ್ಯಾಡಗಿ ಮುಪ್ಪಿನ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಚಿದರಹಳ್ಳಿ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶರಣಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷ ವಿಜಯಪುರ ಗಾಣಿಗ ಗುರುಪೀಠದ ಬಸವಕುಮಾರ ಸ್ವಾಮೀಜಿ, ಕಾರ್ಯಾಧ್ಯಕ್ಷ ಎಸ್.ಲಿಂಗಮೂರ್ತಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಬಿ.ವಸ್ತ್ರಮಠ, ಪ್ರದಾನ ಕಾರ್ಯದರ್ಶಿ ಅನಿತ್ ಕುಮಾರ್ ಇದ್ದರು. ಹಿನ್ನೆಲೆ ಗಾಯಕರಾದ ರವೀಂದ್ರ ಸೋರಗುಂದಿ ಮತ್ತು ಸಾಕ್ಷಿ ಕಲ್ಲೂರು ಅವರು ವಚನ ಸಂಗೀತ ಪ್ರಸ್ತುತಪಡಿಸಿದರು.

ಜಯದೇವ ಸ್ವಾಮೀಜಿ ಸಂದರ್ಭದಲ್ಲಿ ಮಠದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಸ್ವಾಮೀಜಿ ಅವಿರತ ಶ್ರಮದ ಫಲವಾಗಿ ವಿದ್ಯಾಪೀಠ ಸ್ಥಾಪನೆಯಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ ಕೊಡುಗೆಯೂ ಅನನ್ಯ.

- ಮೋಕ್ಷಪತಿ ಸ್ವಾಮೀಜಿ, ರಾವಂದೂರು

ಬಸವತತ್ವ ಧ್ವಜಾರೋಹಣ

ಉತ್ಸವದ ಅಂಗವಾಗಿ ಮರುಘಾಮಠದ ಅನುಭವ ಮಂಟಪದ ಆವರಣದಲ್ಲಿ ಬಸವತತ್ವ ಧ್ವಜಾರೋಹಣವನ್ನು ಕನಕಪುರದ ಮರಳೆಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ನೆರವೇರಿಸಿದರು.

‘ಮಠ ದಿಟ್ಟ ಪರಂಪರೆ ಹೊಂದಿದೆ. ರಾಜ್ಯದ ಉದ್ದಗಲಕ್ಕೂ ಹತ್ತಾರು ಶಾಖಾ ಮಠಗಳಿಗೆ ಆಶ್ರಯ ನೀಡಿದೆ. ಶೂನ್ಯಪೀಠ ಪರಂಪರೆಗೆ ವಿಶಿಷ್ಟ ಶಕ್ತಿ ಇದೆ. ಪರಂಪರೆ ಎಂದೂ ನಿಲ್ಲುವುದಿಲ್ಲ. ಉತ್ಸವ ಯಶಸ್ವಿಯಾಗಲಿದೆ’ ಎಂದು ಮುಮ್ಮಡಿ ಶಿವರುದ್ರ ಸ್ವಾಮೀಜಿ ಹರಸಿದರು.

- ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT