ಶುಕ್ರವಾರ, ಜನವರಿ 24, 2020
28 °C
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ

ಅಕ್ರಮ ಪಡಿತರ ಕಾರ್ಡ್‌: ತಿಂಗಳಾಂತ್ಯಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜ್ಯದಲ್ಲಿ ಕೆಲ ಶ್ರೀಮಂತರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಕ್ರಮವಾಗಿ ಪಡೆದ ಕಾರ್ಡುಗಳನ್ನು ಮರಳಿಸಲು ಜನವರಿ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಹಿಂದಿರುಗಿಸದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವುದು ನಿಶ್ಚಿತ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಡಿತರ ಚೀಟಿ ವಿತರಣೆಯಲ್ಲಿ ಕೂಡ ಅವ್ಯವಹಾರ ನಡೆದಿದೆ. ಸಿಬ್ಬಂದಿ ಲಂಚ ಪಡೆದು ಕಾರ್ಡ್‌ ವಿತರಣೆ ಮಾಡಿದರೆ ಅಮಾನತು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬರ ಹಾಗೂ ನಿರುದ್ಯೋಗದ ಕಾರಣಕ್ಕೆ ಜನರು ವಲಸೆ ಹೋಗುತ್ತಿದ್ದಾರೆ. ಹಣದ ಆಸೆಗೆ ಮಕ್ಕಳನ್ನು ಮಾರಾಟ ಮಾಡಿದ ಅಮಾನವೀಯ ಪ್ರಕರಣಗಳು ಬೆಳಕಿಗೆ ಬಂದಿವೆ. ಶಿಕ್ಷಣ, ಗೃಹ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಕಠಿಣ ಕ್ರಮಕ್ಕೆ ಆಲೋಚನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲಾಖೆಯ ಪುನಃಶ್ಚೇತನಕ್ಕೆ ಹಲವು ರೀತಿಯ ಯೋಜನೆಗಳನ್ನು ರೂಪಿಸಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಡ್ತಿ ನೀಡಲಾಗುತ್ತಿದೆ. ಖಾಲಿ ಹುದ್ದೆಗಳಿಗೆ ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿವೆ. ಧರ್ಮ, ಜಾತಿಗಳ ನಡುವೆ ವೈಷಮ್ಯ ಬಿತ್ತುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಐತಿಹಾಸಿಕ ತೀರ್ಮಾನ ಆಗಿದ್ದು, ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು