‘ಶಿವ’ ಒಂದು ಧರ್ಮ, ದೇಶದ ಸಂಕೇತವಲ್ಲ: ಪಂಡಿತಾರಾಧ್ಯ ಸ್ವಾಮೀಜಿ

7
ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ

‘ಶಿವ’ ಒಂದು ಧರ್ಮ, ದೇಶದ ಸಂಕೇತವಲ್ಲ: ಪಂಡಿತಾರಾಧ್ಯ ಸ್ವಾಮೀಜಿ

Published:
Updated:
Deccan Herald

ಹೊಸದುರ್ಗ: ‘ಶಿವ’ ಒಂದು ಧರ್ಮ, ರಾಜ್ಯ, ಸಂಘಟನೆ ಹಾಗೂ ದೇಶದ ಸಂಕೇತವಲ್ಲ. ಶಿವ ಎಂದರೆ ಸಕಲ ಜೀವಾತ್ಮರಿಗೆ ಒಳಿತು ಬಯಸುವಂತಹದ್ದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಿವಕುಮಾರ ಕಲಾಸಂಘ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಭಾನುವಾರ ಶಿವಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ನಮ್ಮ ಸಂವಿಧಾನದ ಶ್ರೇಷ್ಠ ಗುಣಗಳೆಲ್ಲವೂ 12ನೇ ಶತಮಾನದ ಬಸವಾದಿ ಶಿವಶರಣರ ವಚನಗಳಲ್ಲಿವೆ. ಸರ್ವಾಧಿಕಾರತ್ವ ಹೋಗಲಾಡಿಸುವುದೇ ಸಂವಿಧಾನದ ಮೂಲ ಆಶಯವಾಗಿತ್ತು. ಆದರೆ, ಇಂದು ಮತ್ತೆ ಸರ್ವಾಧಿಕಾರ ಎಲ್ಲೆಡೆ ಎದ್ದು ಕಾಣುತ್ತಿದೆ. ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿದ ಪಕ್ಷದವರು ಮಾತ್ರ ಆಡಳಿತ ನಡೆಸಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಇಂದು ಈ ಆಶಯ ಈಡೇರುತ್ತಿದೆಯೇ ಎನ್ನುವುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಇಂದಿನ ಪರಿಸ್ಥಿತಿ ನೋಡಿದರೆ ನಮ್ಮ ಸಂವಿಧಾನವನ್ನು ಅವಹೇಳನ ಮಾಡುತ್ತಿದ್ದೇವೆ ಎನ್ನಿಸುತ್ತಿದೆ’ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಜನರ ಸೇವಕರೇ ಹೊರತು ಅವರು ಪ್ರಭುಗಳಲ್ಲ. ಆದರೆ, ಚುನಾವಣೆಯಲ್ಲಿ ಮತ ಚಲಾಯಿಸುವ ತನಕ ಮಾತ್ರ ಪ್ರಜೆಗಳು ಪ್ರಭುಗಳು. ನಂತರದಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ಪ್ರಭುಗಳಾಗುವರು. ಅನೇಕ ರೀತಿಯ ಆಮಿಷಗಳಿಗೆ ಒಳಗಾಗಿ ಮತದಾರರು ಮತ ಮಾರಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಮತ ಮಾರುವುದೂ ಅಲ್ಲ, ಕೊಳ್ಳುವುದೂ ಅಲ್ಲ. ಈ ಕೊಳ್ಳುವ, ಮಾರುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಪ್ರಜಾಪ್ರಭುತ್ವ ಸಂಕಷ್ಟಕ್ಕೆ ಸಿಲುಕುತ್ತಿದೆ. ಪ್ರಜಾಪ್ರಭುತ್ವಕ್ಕೆ ಧರ್ಮ ಮತ್ತು ನೈತಿಕ ನೆಲೆಗಟ್ಟು ಇರಬೇಕು ಎಂದು ಬಣ್ಣಿಸಿದರು.

ಬೆಳಗ್ಗಿನ ಪ್ರಾರ್ಥನಾ ಸಭೆಯಲ್ಲಿ ‘ಸಾಂವಿಧಾನಿಕ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ, ಸಂವಿಧಾನ ನಮ್ಮ ರಾಷ್ಟ್ರೀಯ ಧರ್ಮ. ಜನರ ಸರ್ವಾಂಗೀಣ ಬೆಳವಣಿಗೆಯೇ ಅದರ ಧ್ಯೇಯ. ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ಜಾತ್ಯತೀತ ಪ್ರಜಾರಾಜ್ಯವನ್ನಾಗಿ ಪರಿಗಣಿಸಿದ್ದೇವೆ ಎನ್ನುವ ಘೋಷ ವಾಕ್ಯವಿದೆ. ಭಾರತ ಬಹು ಸಂಸ್ಕೃತಿ, ಧರ್ಮ, ಭಾಷೆ, ವೇಷಭೂಷಣ, ಕಟ್ಟುಪಾಡುಗಳ ವೈವಿಧ್ಯಮಯ ರಾಷ್ಟ್ರ. ಇಂಥ ರಾಷ್ಟ್ರವನ್ನು ಜಗತ್ತಿನ ಬೇರೆಡೆ ಕಾಣಲು ಸಾಧ್ಯವಿಲ್ಲ. ಜಾತ್ಯತೀತ ಅಂದರೆ ಒಂದು ಧರ್ಮಕ್ಕೆ ಮಾತ್ರ ಮಾನ್ಯತೆ ನೀಡುವಂಥದ್ದಲ್ಲ ಎಂದು ತಿಳಿಸಿದರು.

ಪ್ರಜೆಗಳಲ್ಲಿನ ಪ್ರಬುದ್ಧತೆಯ ಕೊರತೆಯಿಂದಾಗಿ ಪ್ರಜೆಗಳೂ ಇನ್ನೂ ಪ್ರಭುಗಳಾಗಿಲ್ಲ. ಪ್ರಜಾಸೇವಕರನ್ನು ಪ್ರಜಾಪ್ರಭುಗಳು ಎಂದು ಭಾವಿಸಿರುವುದು ದೊಡ್ಡ ತಪ್ಪು. ಇದರಿಂದಾಗಿ ನಮ್ಮ ದೇಶ ಕಷ್ಟ, ನಷ್ಟಗಳಿಗೆ ಒಳಗಾಗುತ್ತಿದೆ. ಸಾರ್ವಭೌಮತ್ವ ಅಡಗಿರುವುದು ಪ್ರತಿಯೊಬ್ಬ ಪ್ರಜೆಯಲ್ಲಿಯೇ ಹೊರತು, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ಅಲ್ಲ ಎನ್ನುವ ಅರಿವು ಪ್ರತಿಯೊಬ್ಬರಿಗೂ ಬರಬೇಕು. ಈ ಜ್ಞಾನ ಇಲ್ಲದಿರುವುದರಿಂದ ಜನರಲ್ಲಿ ವ್ಯವಸ್ಥೆ ಬಗ್ಗೆ ಭಯಬೀಳುವಂತಾಗಿದೆ. ಪ್ರತಿಯೊಬ್ಬರು ಬಯಸಿದಂತೆ ಕಾರ್ಯಕಾರಿಗೊಳಿಸುವುದೇ ಪ್ರಜಾಪ್ರಭುತ್ವ ಎಂದು ವಿವರಿಸಿದರು.

ಎಚ್.ಎಸ್. ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಶಿಕ್ಷಕರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಹಾಗೂ ಶಾಲಾ–ಕಾಲೇಜು ಸಿಬ್ಬಂದಿ ಇದ್ದರು.

ರಾಷ್ಟ್ರೀಯ ನಾಟಕೋತ್ಸವ ನೇರಪ್ರಸಾರ ನೋಡಲು ಇಲ್ಲಿ ಕ್ಲಿಕ್ಕಿಸಿ: http://shivasanchara.org

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !