ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗುವಿನ ವಾತಾವರಣ, ಶರಣರ ಪರ ಘೋಷಣೆ

ಜಿಲ್ಲಾ ಆಸ್ಪತ್ರೆ ಬಳಿ ಜಮಾಯಿಸಿದ ಭಕ್ತ ಸಮೂಹ
Last Updated 3 ಸೆಪ್ಟೆಂಬರ್ 2022, 4:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಬಂಧಿತರಾಗಿ‌‌ವ ಶಿವಮೂರ್ತಿ ಮುರುಘಾ ಶರಣರು ಚಿಕಿತ್ಸೆಗೆ ದಾಖಲಾಗಿರುವ ಜಿಲ್ಲಾ ಆಸ್ಪತ್ರೆ ಎದುರು ಭಕ್ತ ಸಮೂಹ ಜಮಾಯಿಸಿತ್ತು. ಶರಣರ ಪರವಾಗಿ ಘೋಷಣೆ ಮೊಳಗಿಸಲಾಯಿತು.

ಶುಕ್ರವಾರ ನಸುಕಿನಲ್ಲಿ ಜಿಲ್ಲಾ ಕಾರಾಗೃಹ ಸೇರಿದ್ದ ಶರಣರ ಆರೋಗ್ಯದಲ್ಲಿ ಬೆಳಿಗ್ಗೆ ಏರುಪೇರು ಉಂಟಾಗಿತ್ತು. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಅಪಾರ ಪ್ರಮಾಣದ ಭಕ್ತರು ಆಸ್ಪತ್ರೆಯ ಎದುರು ಜಮಾಯಿಸಿದರು.

ಆರೋಗ್ಯ ಪರೀಕ್ಷೆ ನಡೆಸುತ್ತಿದ್ದ ಹೊರರೋಗಿ ವಿಭಾಗದ ಬಳಿ ಭಕ್ತರು ಜಮಾಯಿಸಿದರು. ಆಸ್ಪತ್ರೆಯ ಕಾಂಪೌಂಡ್, ಕಟ್ಟಡದ ಮೇಲೆ ನಿಂತು ಕುತೂಹಲ ಭರಿತರಾಗಿ ನೋಡುತ್ತಿದ್ದರು. ಶರಣರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಏಕಾಏಕಿ ಜಮಾಯಿಸಿದರು. ಪೊಲೀಸರು ಗುಂಪು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸ್ಥಳದಲ್ಲಿಯೇ ಇದ್ದರು.

ಮುರುಘಾ ಶರಣರಿಗೆ ಜೈಕಾರ:

ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಶುಕ್ರವಾರ ಸಂಜೆ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ವೇಳೆ ಜಮಾಯಿಸಿದ ಶರಣರ ಅನುಯಾಯಿಗಳು ಘೋಷಣೆ ಮೊಳಗಿಸಿದರು.

ಶರಣರ ಸೇನೆ ಅಧ್ಯಕ್ಷ ಮರುಳಾರಾಧ್ಯ, ಕಾಂಗ್ರೆಸ್‌ ಮುಖಂಡರಾದ ಬಿ.ಟಿ.ಜಗದೀಶ್‌, ಅಂಜನಪ್ಪ ನೇತೃತ್ವದಲ್ಲಿ ಜಮಾಯಿಸಿದರು. ಮುರುಘಾ ಶರಣರ ಪರವಾಗಿ ಘೋಷಣೆ ಕೂಗಿದರು. ಈ ವೇಳೆ ಸಾರ್ವಜನಿಕರು ನ್ಯಾಯಾಲಯದ ಆವರಣ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಎಲ್ಲೆಡೆ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ಓಬವ್ವ ವೃತ್ತದಲ್ಲಿ ಜಮಾಯಿಸಿದ ಭಕ್ತರು:

ಶರಣರನ್ನು ಪೊಲೀಸ್ ವಶಕ್ಕೆ ಪಡೆದ ತನಿಖಾಧಿಕಾರಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದರು. ಕೆಲ ಹೊತ್ತು ವಾರ್ಡ್‌ಗೆ ದಾಖಲಾಗಿದ್ದ ಅವರನ್ನು ಹೆಚ್ಚಿನ ವಿಚಾರಣೆಗೆ ಡಿವೈಎಸ್‌ಪಿ ಕಚೇರಿಗೆ ಕರೆತರಲಾಯಿತು. ಇದನ್ನು ಅರಿತ ಸಾರ್ವಜನಿಕರುಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸತೊಡಗಿದರು.

ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರವೇಶ ನಿರ್ಬಂಧಿಸಲಾಗಿತ್ತು.

ಪೆಟ್ರೋಲ್‌ ಸುರಿದುಕೊಂಡ ಸ್ವಾಮೀಜಿ

ಶಿವಮೂರ್ತಿ ಮುರುಘಾ ಶರಣರ ಶಿಷ್ಯ ತಿಪ್ಪೇರುದ್ರ ಸ್ವಾಮೀಜಿ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸುವುದಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹೈಡ್ರಾಮಾ ಮಾಡಿದರು.

ಶರಣರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ಈ ವೇಳೆ ಸ್ವಾಮೀಜಿ ಪೆಟ್ರೋಲ್‌ ಸುರಿದುಕೊಂಡರು.

ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಇದನ್ನು ತಡೆದರು. ಪೊಲೀಸ್‌ ವಾಹನದಲ್ಲಿ ಕೂರಿಸಿಕೊಂಡು ನಗರ ಠಾಣೆಗೆ ಕರೆದೊಯ್ದರು.

‘ಶಿವಮೂರ್ತಿ ಮುರುಘಾ ಶರಣರಿಗೆ ಅನ್ಯಾಯವಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ’ ಎಂದು ಕಣ್ಣೀರಾದರು.

ಕಣ್ಣೀರು ಸುರಿಸಿದ ಸ್ವಾಮೀಜಿ

ಚಿತ್ರದುರ್ಗ: ಪೋಕ್ಸೊ ಕಾಯ್ದೆಯಡಿ ಬಂಧಿತರಾಗಿ ಜೈಲು ಸೇರಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಸ್ಥಿತಿಯನ್ನು ನೆನೆದು ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಕಣ್ಣೀರು‌ ಸುರಿಸಿದರು.

ಮುರುಘಾ ಮಠದ ಬಳಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅವರು ಕಣ್ಣೀರಾದರು.

'ಇದೊಂದು ವ್ಯವಸ್ಥಿತ ಷಡ್ಯಂತ್ರ. ಪ್ರಕರಣದಲ್ಲಿ ಅವರು ಖಂಡಿತ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುರುಘಾ ಶರಣರ ಬಂಧನದ ಹಿನ್ನಲೆಯಲ್ಲಿ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ. ಮಠದ ಮುಖ್ಯದ್ವಾರ ಬಂದ್ ಮಾಡಲಾಗಿದೆ. ಶರಣರನ್ನು ನೆನೆದು ಅನೇಕರು ಭಾವುಕರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT