ಶನಿವಾರ, ಜೂನ್ 25, 2022
25 °C

ಮುರುಘಾ ಮಠಕ್ಕೆ ಉತ್ತರಾಧಿಕಾರಿ ನೇಮಕ: ಬಸವಾದಿತ್ಯ ಸ್ವಾಮೀಜಿಗೆ ಪಟ್ಟ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ದೇವರು ಅವರನ್ನು ನೇಮಕ ಮಾಡಲಾಯಿತು.‌ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರ ಬಳಿಕ ಬಸವಾದಿತ್ಯ ಸ್ವಾಮೀಜಿ 21ನೇ ಪೀಠಾಧಿಪತಿಯಾಗಲಿದ್ದಾರೆ.

ಮಠದ ಈ ತೀರ್ಮಾನವನ್ನು ಎಲ್ಲ ಸಮಾಜದ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಘೋಷಣೆ ಮಾಡಲಾಯಿತು. ನೂತನ ಉತ್ತರಾಧಿಕಾರಿಗೆ ಮುರುಘಾ ಶರಣರು ರುದ್ರಾಕ್ಷಿ ಮಾಲೆ ತೊಡಿಸಿ, ಪುಷ್ಪ ವೃಷ್ಟಿ ಸುರಿಸಿ ಆಶೀರ್ವದಿಸಿದರು. ಜಂಗಮ ಸಮುದಾಯದ 17 ವರ್ಷದ ಯುವಕ ನೇಮಕಗೊಂಡ ತೀರ್ಮಾನ ಏಕಾಏಕಿ ಹೊರಬಿದ್ದ ಪರಿಗೆ ಅಚ್ಚರಿಯೂ ವ್ಯಕ್ತವಾಯಿತು.

ಚಿತ್ರದುರ್ಗದ ಪಾಳೆಗಾರರ ರಾಜಾಶ್ರಯದಲ್ಲಿ ಬೆಳೆದ ಮುರುಘಾ ಮಠ ಐತಿಹಾಸಿಕ ಪರಂಪರೆ ಹೊಂದಿದೆ. ಮುರಿಗಿ ಶಾಂತವೀರ ಸ್ವಾಮೀಜಿ ಅವರಿಂದ ಈವರೆಗೆ 20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ. ಶಿವಮೂರ್ತಿ ಮುರುಘಾ ಶರಣರು 1991ರಲ್ಲಿ ಉತ್ತರಾಧಿಕಾರಿಯಾಗಿ ನೇಮಕಗೊಂಡು 1994ರಲ್ಲಿ ಶೂನ್ಯಪೀಠ ಅಲಂಕರಿಸಿದ್ದರು.

‘ಇತ್ತೀಚಿನ ದಿನಗಳಲ್ಲಿ ಮಾನವನ ಬದುಕು ಅಸ್ಥಿರವಾಗಿದೆ. ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತ, ಹೃದಯಾಘಾತದಲ್ಲಿ ಪ್ರಾಣ ಕಳೆದುಕೊಂಡರೆ ಮನೆಯಲ್ಲಿ ಉಳಿದವರು ಜವಾಬ್ದಾರಿ ನಿಭಾಯಿಸುತ್ತಾರೆ. ಆದರೆ, ಮಠ–ಪೀಠಗಳಲ್ಲಿ ಶೂನ್ಯ ನಿರ್ಮಾಣವಾಗಬಾರದು. ಈ ಕಾರಣಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ' ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

‘ಭಕ್ತರ ಹಾಗೂ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಮಕಾಲೀನ ಸಂದರ್ಭದ ಆಕಸ್ಮಿಕ ಹಾಗೂ ಅಷ್ಟೇ ಅರ್ಥಪೂರ್ಣವಾದ ನಿರ್ಧಾರವಾಗಿದೆ. ಬಸವಾದಿತ್ಯ ಅವರನ್ನು ಮರಿಯಾಗಿ ಸ್ವೀಕರಿಸಲಾಗಿದೆ. ಅವರು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಉನ್ನತ ಶಿಕ್ಷಣ ನೀಡಿ ಪಟ್ಟ ಕಟ್ಟಲಾಗುವುದು. ಈ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ದ್ವಿತೀಯ ಪಿಯು ವ್ಯಾಸಂಗ
ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಮತ್ತು ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯ, ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ. ಒಂದೂವರೆ ವರ್ಷದಿಂದ ಮಠದಲ್ಲೇ ನೆಲೆಸಿದ್ದು, ಗುರುಕುಲ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ.

ಬಸವಾದಿತ್ಯ ದೇವರು ಅವರ ಪೂರ್ವಾಶ್ರಮದ ತಂದೆ ಶಿವಮೂರ್ತಯ್ಯ, ಕೆನರಾ ಬ್ಯಾಂಕಿನ ಪಿಗ್ಮಿ ಸಂಗ್ರಹಕಾರರಾಗಿದ್ದಾರೆ. ಮಠದ ಉತ್ತರಾಧಿಕಾರಿಯಾಗಿ ಪುತ್ರ ನೇಮಕವಾಗಿರುವುದು ಪೋಷಕರಲ್ಲಿ ಸಂತಸವುಂಟು ಮಾಡಿದೆ.

*

21ನೇ ಶತಮಾನದ 21ನೇ ಪೀಠಾಧಿಪತಿಯಾಗಿ ನೇಮಕ ಆಗಿರುವುದಕ್ಕೆ ತೃಪ್ತಿ ಇದೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಶ್ರದ್ಧೆ , ನಿಷ್ಠೆಯಿಂದ ಮಠದ ಏಳಿಗೆಗೆ ಶ್ರಮಿಸುವೆ.
–ಬಸವಾದಿತ್ಯ ದೇವರು, ಉತ್ತರಾಧಿಕಾರಿ, ಮುರುಘಾ ಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು