ಚಿತ್ರದುರ್ಗ: ‘ಮುಖ್ಯಮಂತ್ರಿ ವಿರುದ್ಧದ ಆರೋಪಗಳ ವಿಚಾರಣೆಗೆ ರಾಜ್ಯಪಾಲರು ನೀಡಿದ್ದ ಅನಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರಿಯಬಾರದು. ಅವರು ಕೌಟುಂಬಿಕ ಸ್ವಾರ್ಥಕ್ಕಾಗಿ ಬಲಿಯಾಗಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
‘ಮುಡಾ ಹಗರಣದ ಬಗ್ಗೆ ಹೈಕೋರ್ಟ್ ತೀರ್ಪು ನಿರೀಕ್ಷಿತ. ಆರೋಪಗಳನ್ನು ಅವರು ಭಂಡತನದಿಂದ ಸಮರ್ಥನೆ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ತಪ್ಪು ಅಂಗೈ ಹುಣ್ಣಿನಂತೆ ಸ್ಪಷ್ಟವಾಗಿ ಕಾಣುತ್ತದೆ. ಬೇರೆಯವರ ಕಡೆ ಬೆರಳು ತೋರಿಸುತ್ತಲೇ ಸಿದ್ದರಾಮಯ್ಯ ಅವರು ಕಳಂಕ ಹಚ್ಚಿಕೊಂಡರು. ಕಾನೂನು ಹೋರಾಟಗಾರರಿಗೆ ಜಯ ದೊರಕಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ರಾಮಕೃಷ್ಣ ಹೆಗಡೆ ಅವರ ವಿರುದ್ಧ ಆರೋಪಗಳು ಕೇಳಿಬಂದಾಗ ಅವರು ಗೌರವದಿಂದ ರಾಜೀನಾಮೆ ನೀಡಿದ್ದರು. ಟೆಲಿಫೋನ್ ಕದ್ದಾಲಿಕೆ ಪ್ರಕರಣ ಬೆಳಕಿಗೆ ಬರುತ್ತಲೇ ಅವರು ಸ್ಥಾನದಲ್ಲಿ ಉಳಿಯಲಿಲ್ಲ. ಹೆಗಡೆಯವರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯ ಅವರೂ ರಾಜೀನಾಮೆ ನೀಡಬೇಕು. ರೈಲು ಅಪಘಾತವಾದಾಗ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯ ಅವರು ಇಂತಹ ಘಟನೆಗಳನ್ನು ನೆನಪು ಮಾಡಿಕೊಳ್ಳಲಿ’ ಎಂದರು.
‘ಸಿದ್ದರಾಮಯ್ಯ ಮುಡಾ ಹಗರಣ ಮಾತ್ರವೇ ಅಲ್ಲ, ವಾಲ್ಮೀಕಿ ನಿಗಮದ ಹಗರಣದಲ್ಲೂ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿದ್ದಾರೆ. ದಲಿತರ ಕಲ್ಯಾಣಕ್ಕೆ ಇಟ್ಟ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ಅವರ ಸಂಪುಟದ ಸಚಿವರು ನೇರವಾಗಿ ಹೊಣೆಗಾರರಾಗಿದ್ದಾರೆ. ಕುಟುಂಬಕ್ಕಾಗಿ ತಪ್ಪು ಮಾಡಿರುವ ಸಿದ್ದರಾಮಯ್ಯ ಸ್ಥಾನ ತೊರೆಯಬೇಕು. ಯಾವ ಸಚಿವರೂ ಸಿದ್ದರಾಮಯ್ಯ ಪರ ನಿಲ್ಲಬಾರದು’ ಎಂದರು.
‘ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋದರೂ ಕಳಂಕ, ಶಿಕ್ಷೆ ತಪ್ಪಿದ್ದಲ್ಲ. ಮುಖ್ಯಮಂತ್ರಿ ಮುಖದ ಮೇಲೆ ಕಳಂಕವಿದೆ. ಅವರು ಆರೋಪಗಳಿಂದ ಮುಕ್ತರಾಗಲು ಸಾಧ್ಯವೇ ಇಲ್ಲ. ಈಗ ಅವರಿಗೆ ಉಳಿದಿರುವುದು ರಾಜೀನಾಮೆ ದಾರಿ ಮಾತ್ರ’ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ‘ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಕೂರಲು ನೈತಿಕ ಶಕ್ತಿ ಕಳೆದುಕೊಂಡಿದ್ದಾರೆ. ಬಿಜೆಪಿಯ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದರು. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವರ್ತನೆಯನ್ನು ಮುಖ್ಯಮಂತ್ರಿ ತೋರಿದ್ದರು. ಈಗ ಮುಖ್ಯಮಂತ್ರಿ ಕಳಂಕ ಹೊತ್ತಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದರು.
‘ನಾವು ಹೈಕೋರ್ಟ್ ಆದೇಶವನ್ನು ಸ್ವಾಗತ ಮಾಡುತ್ತೇವೆ. ಕಾನೂನು ಹೋರಾಟಕ್ಕೆ ಜಯ ದೊರಕಿದೆ. ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ನಾವು ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ’ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ ‘ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ. ಅವರು ಆರೋಪಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅರ್ಕಾವತಿ ಪ್ರಕರಣದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದಾಗ ಹಳೆಯ ಪ್ರಕರಣಗಳನ್ನು ಹುಡುಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಅವರು ಬಿಎಸ್‌ವೈ, ಎಚ್‌ಡಿಕೆ ವಿರುದ್ಧ ಹಳೆಯ ಪ್ರಕರಣಗಳನ್ನು ತೆಗೆದಿಲ್ಲವೇ? ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂರಬಾರದು, ರಾಜೀನಾಮೆ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.