ಶನಿವಾರ, ಮಾರ್ಚ್ 25, 2023
22 °C

ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಿರಿಧಾನ್ಯ: ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ಸಿರಿಧಾನ್ಯ ಬೆಳೆಯುವ ನಾಡು ಇದಾಗಿದ್ದು, 2023ಕ್ಕೆ ಅಂತರರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳ ಏರ್ಪಡಿಸಲಾಗುವುದು. ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯವನ್ನು ಶಾಲಾ ಮಕ್ಕಳಿಗೆ ಕೊಡಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 5ನೇ ದಿನವಾದ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಕೃಷಿ ಚಿಂತನೆ ಅತ್ಯಂತ ಮಹತ್ತರವಾದುದು. ದಡ್ಡರು ಕೃಷಿ ಮಾಡುತ್ತಿದ್ದಾರೆ ಎಂದು ಮಾತಾಡುತ್ತಿದ್ದಾರೆ. ಈ ಗುಂಪಿಗೆ ಸೇರಿದ ನಾನು ಕೃಷಿ ಸಚಿವನಾಗಿದ್ದೇನೆ. ನಾನು ಸಚಿವನಾದ ಮೇಲೆ ‘ರೈತರ ಜತೆಗೆ ಒಂದು ದಿನ’ ಎಂಬ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ನಡೆಸಿ ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದೇನೆ. ಇದರಿಂದ ಕೋವಿಡ್‌ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗಿದೆ’ ಎಂದರು.

ಸಾವಯವ ಕೃಷಿ ತುಂಬಾ ಅವಶ್ಯ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಬರಬೇಕು ಎಂಬುದು ಎಲ್ಲರ ಬಯಕೆ. ಇದಕ್ಕಾಗಿ ಸರ್ಕಾರ ಉತ್ಪಾದಕ ಸಂಸ್ಥೆ ಸ್ಥಾಪಿಸುವ ಮೂಲಕ ಕೃಷಿಕರಿಗೆ ಬೆಂಬಲ ನೀಡುತ್ತಿದೆ. ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಯೋಜನೆಯಡಿ ₹ 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಸಮೀಪ ₹ 100 ಕೋಟಿ ವೆಚ್ಚದಲ್ಲಿ ಕೋಲ್ಡ್‌ ಸ್ಟೋರೇಜ್‌ ಘಟಕ ನಿರ್ಮಿಸಲಾಗುವುದು ಎಂದು ಹೇಳಿದರು.

ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿದ ರಾಜ್ಯಮಟ್ಟದ ಸಾವಯವ ಕೃಷಿ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಆನಂದ, ‘ಸಾವಯವ ಕೃಷಿ ಮರೆತು ಹೋಗಿದೆ. ಮನೆಯಲ್ಲಿ ಮಕ್ಕಳಿಗೆ ತಿನ್ನಿಸುತ್ತಿರುವ ಕೈತುತ್ತು ಅಮೃತವಾಗಿದೆಯೇ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಆಹಾರವೆಲ್ಲಾ ವಿಷವಾಗುತ್ತಿದೆ. ಕೃಷಿಕನ ತಾಯಿ ಯಾರು ಆಗುತ್ತಾರೆ ಎಂಬುದು ದೇಶದ ಮುಂದೆ ಇರುವ ದೊಡ್ಡ ಪ್ರಶ್ನೆ. ನಮ್ಮ ಕೊಟ್ಟಿಗೆಯಲ್ಲಿ ಹುಟ್ಟುವ ಕರುವನ್ನು ಎಳೆದೆಳೆದು ಯಾವಾಗ ಕಟುಕರ ಕೈಯಿಗೆ ಕೊಟ್ಟರೋ ಅಂದಿನಿಂದ ಮಕ್ಕಳು ಸಹ ಪೋಷಕರಿಂದ ದೂರವಾಗುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಭೂಮಿಗೆ ಎಂದೂ ವಿಷ ಹಾಕುವುದಿಲ್ಲ, ಅಮೃತವನ್ನೇ ಉಣಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಡಾ.ಪಿ. ರಮೇಶಕುಮಾರ್‌, ‘ಕೊರೊನಾ ಸಂಕಷ್ಟದಲ್ಲಿಯೂ ಈ ಬಾರಿ ರಾಜ್ಯದಲ್ಲಿ ಶೇ 10ರಷ್ಟು ಕೃಷಿ ಉತ್ಪಾದನೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ನೀರನ್ನು ಶೇಖರಣೆ ಮಾಡಲು ಆಗುತ್ತಿಲ್ಲ. ಗಾಳಿಯ ವೇಗ ಹೆಚ್ಚಾಗಿದೆ. ರಕ್ಷಣೆಗೆ ಜೈವಿಕ ಬೇಲಿ ಹಾಕಬೇಕಾಗಿದೆ. ನೆಲದ ಶಿಷ್ಟಾಚಾರ ಹಾಗೂ ಮಣ್ಣಿನ ಗುಣಧರ್ಮದೊಂದಿಗೆ ಕೃಷಿಕರು ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ನೆಲ ವಿಷವಾದರೆ ಅದನ್ನು ಸರಿಪಡಿಸಬಹುದು. ಆದರೆ ಮನುಷ್ಯನ ಮನಸ್ಸಿನಲ್ಲಿ ಅಡಗಿರುವ ವಿಷವನ್ನು ಹೊರಹಾಕುವ ಕೆಲಸ ಆಗಬೇಕು’ ಎಂದರು. 

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಕರಿಸಿದ್ದಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಿನಿಮಾ ನಿರ್ದೇಶಕ ನಂದಕಿಶೋರ, ನೇತೃತ್ವ ವಹಿಸಿದ್ದ ಚಿಗರಹಳ್ಳಿ ಮರುಳಶಂಕರದೇವ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು.

ಡಾ.ಚಂದ್ರಶೇಖರಯ್ಯ ಅವರ ‘ಧೀರ ಸನ್ಯಾಸಿ’ (ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜೀವನಾಧಾರಿತ) ಕೃತಿ ಲೋಕಾರ್ಪಣೆಗೊಳಿಸಲಾಯಿತು.

ತೀರ್ಥಹಳ್ಳಿ ಇಂತಿಯಾಜ್ ಸುಲ್ತಾನ್ ಕನ್ನಡ ಗಜಲ್ ಗಾಯನ ನಡೆಸಿಕೊಟ್ಟರು. ಸಿದ್ಧೇಶ್ವರ ಯುವಕ ಭಜನಾ ಮಂಡಳಿಯವರು ಭಜನೆ ಮಾಡಿದರು. ಚಿಕ್ಕ ಎಡಚಿ ಮತ್ತು ನವ್ಯ ರಮೇಶ್, ಬೆಂಗಳೂರು ಆದಿಶಕ್ತಿ ನೃತ್ಯ ಶಾಲೆ, ಹೊಸದುರ್ಗದ ಕನಕ ಮಹಿಳಾ ಸಂಘದವರು ಆಕರ್ಷಕ ನೃತ್ಯರೂಪಕ ಪ್ರದರ್ಶಿಸಿದರು. ನಾಗೇಂದ್ರ ಪ್ರಸಾದ್ ನಿರ್ದೇಶನದ ‘ಛಲದೋಳ್ ದುರ್ಯೋಧನ’ ನಾಟಕವನ್ನು ಬೆಂಗಳೂರಿನ ಪಟೇಲ್ ಕೃಪಾಪೋಷಿತ ನಾಟಕ ಮಂಡಳಿಯವರು ಪ್ರದರ್ಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು