ಮಂಗಳವಾರ, ನವೆಂಬರ್ 19, 2019
26 °C
ನಾಗನೂರು, ಕೂಡಲ ಗ್ರಾಮದಲ್ಲಿ ನೆರೆ ಪರಿಹಾರ ಕಾರ್ಯಕ್ರಮ

ಸೂರು ಕಳೆದುಕೊಂಡವರಿಗೆ ಸಿರಿಗೆರೆ ಶ್ರೀ ನೆರವು

Published:
Updated:
Prajavani

ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಹೊಳೆ–ದಂಡೆಗಳಲ್ಲಿ ಆತಂಕ ಹಾಗೂ ಭಯದ ನೆರಳಿನಲ್ಲಿ ಜೀವನ ಸಾಗಿಸುತ್ತಿರುವ ಜನಸಾಮಾನ್ಯರಿಗೆ ಸರ್ಕಾರದೊಂದಿಗೆ ತರಳಬಾಳು ಮಠವೂ ಸಹಕರಿಸುತ್ತಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಹಾವೇರಿ ಜಿಲ್ಲೆಯ ನಾಗನೂರು ಮತ್ತು ಕೂಡಲ ಗ್ರಾಮಗಳಲ್ಲಿ ತರಳಬಾಳು ಬೃಹನ್ಮಠದಿಂದ ನಡೆದ ಮೂರನೇ ಸುತ್ತಿನ ‘ನೆರೆ ಪರಿಹಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾನಗಲ್‌ ತಾಲ್ಲೂಕು ಕೂಡಲ ಮತ್ತು ಹಾವೇರಿ ತಾಲ್ಲೂಕಿನ ನಾಗನೂರು ಗ್ರಾಮಗಳ ಜನರ ಬದುಕು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಇಂತಹ ಜನ–ಜೀವನ ಸಹಜ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಕೆಲ ವರ್ಷಗಳು ಬೇಕಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ಅವರ ನೋವು–ನಲಿವುಗಳಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪರಿಹಾರಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

‘ಜನರು ಆತ್ಮಸ್ಥೈರ್ಯದಿಂದ ಸಂಕಷ್ಟಗಳನ್ನು ಎದುರಿಸಬೇಕು. ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಠದಿಂದ ನೆರವು ನೀಡಲಾಗುವುದು. 1000 ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೂ ಉಚಿತ ಶಿಕ್ಷಣವನ್ನು ನೀಡಲು ತೀರ್ಮಾನಿಸಿದ್ದೇವೆ. ಈಗಾಗಲೇ ಗೋಕಾಕಿನಿಂದ 130ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಿರಿಗೆರೆಯಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸಿದ್ದು, ಮುಂದಿನ ವಾರದಲ್ಲಿ ಶಾಲಾ–ಕಾಲೇಜುಗಳಿಗೆ ದಾಖಲಾಗುತ್ತಿದ್ದಾರೆ’ ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ತರಳಬಾಳು ಮಠ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುತ್ತಿರುವುದು ಮಾತೃಹೃದಯಿ ಕಾರ್ಯ. ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಂಡಿದೆ. ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ 265 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದೆ. ಅಲ್ಲಿನ ರೈತರು ಅದರ ಸದುಪಯೋಗವನ್ನು ಪಡೆಯುತ್ತಿದ್ದಾರೆ’ ಎಂದರು.

ಕೂಡಲ ಗುರುನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ‘ತರಳಬಾಳು ಮಠ ಹಾಗೂ ಕೂಡಲ ಮಠಗಳ ಅವಿನಾಭಾವ ಸಂಬಂಧ ಹಿಂದಿನಿಂದಲೂ ನಡೆದು ಬಂದಿದೆ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮಯದ ಪಿತಾಮಹಾ’ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡ ವಿರೂಪಾಕ್ಷಪ್ಪ ಕಡ್ಲಿ, ರೈತ ಮುಖಂಡರು, ಗ್ರಾಮ ಪಂಚಾಯಿತಿಯ ಪದಾಧಿಕಾರಿಗಳು, 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್ ಗೌಡ್ರು, ಶಶಿಪಾಟೀಲ್, ಜಗದೀಶ್, ಸಿರಿಗೆರೆಯ ಗ್ರಾಮಸ್ಥರು ಇದ್ದರು.

ಪ್ರತಿಕ್ರಿಯಿಸಿ (+)