ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಗಟ್ಟೆ ರಸ್ತೆಯಲ್ಲಿ ತಲೆಎತ್ತಿದ ಗೂಡಂಗಡಿಗಳು

ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವ ಸಮಯದಲ್ಲಿ ಭಕ್ತರಿಗೆ ತೊಡಕು
Last Updated 21 ಜನವರಿ 2021, 2:42 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯುವ ಪಾದಗಟ್ಟೆ ರಸ್ತೆಯಲ್ಲಿ ಅಕ್ರಮ ಗೂಡಂಗಡಿಗಳು ತಲೆ ಎತ್ತಿವೆ.

ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಯ ವಾರ್ಷಿಕ ಮಹಾಜಾತ್ರೆಯು ಮಾರ್ಚ್ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ನಡೆಯುತ್ತದೆ. ಸುಮಾರು 78 ಅಡಿ ಎತ್ತರದ 70 ಟನ್ ತೂಕದ ಐದು ಚಕ್ರಗಳುಳ್ಳ ಬೃಹತ್ ರಥ ಈ ಜಾತ್ರೆಯ ವಿಶೇಷ ಆಕರ್ಷಣೆ. ಜಾತ್ರೆಗೆ ಜಿಲ್ಲೆ ಸೇರಿದಂತೆ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ರಾಮನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ನೆರೆಯ ಸೀಮಾಂಧ್ರ ಪ್ರದೇಶದ ಕಲ್ಯಾಣದುರ್ಗ, ರಾಯದುರ್ಗ, ಅನಂತಪುರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ರಥವನ್ನು ಎಳೆಯುತ್ತಾರೆ.

ರಥದ ಸ್ವಸ್ಥಾನವಾದ ಈಶ್ವರ ದೇವಾಲಯದಿಂದ ಪಾದಗಟ್ಟೆವರೆಗೂ ಸುಮಾರು 800 ಮೀಟರ್ ಉದ್ದವಿದ್ದು, ರಥ ಸಾಗುವ ದಾರಿಯಲ್ಲಿ ಯಾವುದೇ ಉಬ್ಬುತಗ್ಗುಗಳು ಇಲ್ಲದಂತೆ ಪ್ರತಿ ವರ್ಷ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುತ್ತದೆ. ಜತೆಗೆ ರಥ ಸಾಗುವಾಗ ಲಕ್ಷಾಂತರ ಭಕ್ತರು ರಥದ ಹಿಂದೆಮುಂದೆ ನಡೆದುಕೊಂಡು ಬರುತ್ತಾ ಭಕ್ತಿಯಲ್ಲಿ ತಲ್ಲೀನರಾಗುತ್ತಾರೆ.

ರಥೋತ್ಸವಕ್ಕೂ ಮುನ್ನ ತೇರುಬೀದಿಯಲ್ಲಿ ಇರುವ ಅಂಗಡಿಮುಂಗಟ್ಟುಗಳ ಮುಂದೆ ಇರುವ ಚಪ್ಪರಗಳನ್ನು, ಅಕ್ರಮ ನಿರ್ಮಾಣಗಳನ್ನು ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಖುದ್ದು ತೆರವು ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಆ ಮೂಲಕ ಸುಗಮ ರಥೋತ್ಸವಕ್ಕೆ ಅನುವು ಮಾಡಿಕೊಡುತ್ತಾರೆ. ಆದರೆ, ಪ್ರಸಕ್ತ ವರ್ಷ ಪಾದಗಟ್ಟೆಯ ರಸ್ತೆಯಲ್ಲಿ ಅಕ್ರಮವಾಗಿ ಹಲವು ಗೂಡಂಗಡಿಗಳು ತಲೆಎತ್ತಿವೆ. ನಿತ್ಯ ರಾತ್ರಿ ಒಂದೊಂದು ಅಂಗಡಿ ತಲೆಎತ್ತುತ್ತಲೇ ಇವೆ. ಇದರಿಂದ ಮಾರ್ಚ್ 29ಕ್ಕೆ ನಡೆಯಲಿರುವ ಜಾತ್ರೆಗೆ ತೊಂದರೆಯಾಗಲಿದೆ.

ವಸತಿ ಗೃಹಗಳ ಕಟ್ಟಡ ತೆರವು: ಪಾದಗಟ್ಟೆಯ ರಸ್ತೆ ಪಕ್ಕದಲ್ಲಿ ಆರೋಗ್ಯ ಇಲಾಖೆಗೆ ಸೇರಿದ ನಾಲ್ಕು ವಸತಿ ಗೃಹಗಳು ಬಹುದಿನಗಳಿಂದ ಪಾಳುಬಿದ್ದಿದ್ದವು. ರಥೋತ್ಸವದ ವೇಳೆ ಪಾಳುಬಿದ್ದ ಕಟ್ಟಡದ ಮೇಲೆ ನೂರಾರು ಜನ ನಿಂತು ಜಾತ್ರೆಯನ್ನು ವೀಕ್ಷಿಸುತ್ತಿದ್ದರು. ಇದು ತುಂಬಾ ಅಪಾಯಕಾರಿ ಎಂದು ಮನಗಂಡು ಶಾಸಕ ಟಿ.ರಘುಮೂರ್ತಿ ಮತ್ತು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಮಾರ್ಗದರ್ಶನದಂತೆ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಇದರಿಂದ ಅರ್ಧ ಎಕರೆಯಷ್ಟು ವಿಶಾಲವಾದ ಸ್ಥಳ ದೊರೆತು ಕಳೆದ ವರ್ಷ ಪಾದಗಟ್ಟೆ ರಸ್ತೆಯಲ್ಲಿ ಜನಸಂದಣಿಯಿಲ್ಲದೆ ಸುಸೂತ್ರವಾಗಿ ರಥೋತ್ಸವ ಜರುಗಿತ್ತು. ಆದರೆ, ಪ್ರಸ್ತುತ ಖಾಲಿ ಇದ್ದ ಅದೇ ಸ್ಥಳದಲ್ಲಿ ಹಲವು ಗೂಡಂಡಗಡಿಗಳು ತಲೆಎತ್ತಿರುವುದರಿಂದ ಮುಂದಿನ ಜಾತ್ರೆಗೆ ಅನನುಕೂಲವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT