ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ನಿಗಮ ಸ್ಥಾಪನೆಗೆ ಸರ್ವಧರ್ಮ, ಜಾತಿಯ ಬೆಂಬಲ

ಹೋರಾಟ ನಿಲ್ಲದು: ದೇವಾಂಗ ಸಮಾಜದ ಬೃಹತ್‌ ಸಮಾವೇಶದಲ್ಲಿ ದಯಾನಂದಪುರಿ ಸ್ವಾಮೀಜಿ
Last Updated 11 ಫೆಬ್ರುವರಿ 2021, 1:47 IST
ಅಕ್ಷರ ಗಾತ್ರ

ಹೊಸದುರ್ಗ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಕ್ಕೊತ್ತಾಯಕ್ಕಾಗಿ ಪಟ್ಟಣದಲ್ಲಿ ಬುಧವಾರ ನಡೆದ ಬೃಹತ್‌ ಹೋರಾಟದ ಮೆರವಣಿಗೆಯಲ್ಲಿ ತಾಲ್ಲೂಕಿನ ಮುಸ್ಲಿಂ, ಜೈನ, ಕ್ರಿಶ್ಚಿಯನ್‌, ವೀರಶೈವ ಲಿಂಗಾಯತ, ಕುರುಬ, ನಾಯಕ ಸೇರಿ ಎಲ್ಲಾ ಧರ್ಮ, ಜಾತಿಯ ಮುಖಂಡರು ಭಾಗವಹಿಸಿ ದೇವಾಂಗ ಸಮಾಜಕ್ಕೆ ಬೆಂಬಲ ವ್ಯಕ್ತಪಡಿಸಿದರು.

‘ದೇವಮಾನವ ಕುಲದ ಘನತೆ, ಗೌರವ ಹೆಚ್ಚಿಸಲು ಬಟ್ಟೆ ನೇಯ್ದು ಕೊಟ್ಟಿರುವ ದೇವಾಂಗ ಜನರು ಶಾಂತಿ ಪ್ರಿಯರು, ಸೌಮ್ಯವಾದಿಗಳು. ಅವರು ಉಳಿದೆಲ್ಲಾ ಧರ್ಮ, ಜಾತಿಯವರ ಜೊತೆಗೆ ಸ್ನೇಹದಿಂದ ಬದುಕುತ್ತಿದ್ದು, ಮಾದರಿಯಾಗಿದ್ದಾರೆ. ಆದರೆ, ಅತ್ಯಂತ ಹಿಂದುಳಿದಿರುವ ಇಂತಹ ಸಮುದಾಯ ಮುಖ್ಯವಾಹಿನಿಗೆ ಬರಬೇಕಾದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದಡಿ ಈ ಸಮುದಾಯಕ್ಕೆ ಶೀಘ್ರ ಶೇ 2ರಷ್ಟು ವಿಶೇಷ ಮೀಸಲಾತಿ ಕೊಡಬೇಕು. ಅಭಿವೃದ್ಧಿ ನಿಗಮ ಸ್ಥಾಪಿಸ
ಬೇಕು’ ಎಂದು ಒಕ್ಕೊರಲಿನಿಂದ ಸರ್ಕಾರಕ್ಕೆ ಮನವಿ ಮಾಡಿದರು.

ಹುಳಿಯಾರು ರಸ್ತೆಯಲ್ಲಿರುವ ಬನಶಂಕರಿ ಸಮುದಾಯ ಭವನದಿಂದ ಹೊರಟದ ಮೆರವಣಿಗೆಗೆ ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದದಯಾನಂದಪುರಿ ಸ್ವಾಮೀಜಿ,‘ಹೊಸದುರ್ಗದಲ್ಲಿ ನಾವು ಸಾಂಕೇತಿಕವಾಗಿ ಮಾಡಿದ ಹೋರಾಟಕ್ಕೆ ನಮ್ಮ ನಿರೀಕ್ಷೆಗೂ ಮೀರಿ ಜನಸ್ತೋಮ ಸೇರಿದೆ. ಹಾಗೆಯೇ ತಾಲ್ಲೂಕಿನ ಮಾಜಿ ಶಾಸಕರು, ಎಲ್ಲ ಸಮುದಾಯದ ಮುಖಂಡರು ಸುಡುಬಿಸಿಲನ್ನು ಲೆಕ್ಕಿಸದೇ ಬಂದು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಸಂತಸ ತಂದಿದೆ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ನಾವು ಯಾವುದೇ ಸೌಲಭ್ಯ ಪಡೆಯಲು ಹೋರಾಟ ಮಾಡಿರಲಿಲ್ಲ. ಈಗ ಸರ್ಕಾರ ಹೋರಾಟ ಮಾಡುವಂತೆ ಮಾಡಿದೆ. ಹಾಗಾಗಿ ನಮ್ಮ ಎರಡು ಬೇಡಿಕೆಯನ್ನು ಸರ್ಕಾರ ಈಡೇರಿಸುವ ವರೆಗೂ ಹೋರಾಟ ನಿಲ್ಲದು’ ಎಂದು ಎಚ್ಚರಿಕೆ ನೀಡಿದರು.

ನಂತರ ದಯಾನಂದಪುರಿ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ತಹಶೀಲ್ದಾರ್‌ ವೈ. ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ‘ರಾಜ್ಯ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಶೇ 2ರಷ್ಟು ವಿಶೇಷ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಇಲ್ಕಲ್‌ ವಿಜಯಕುಮಾರ್‌ ಸಮಾಜದ ಬೇಡಿಕೆಗೆ ಸಾಥ್‌ ನೀಡಿದರು.

ಗಮನ ಸೆಳೆದ ಮೆರವಣಿಗೆ: ಅಲಂಕೃತ ದೇವಲ ಮಹರ್ಷಿ ಭಾವಚಿತ್ರದ ಮೆರವಣಿಗೆ ತೆರೆದ ವಾಹನದಲ್ಲಿ ಸಾಗಿತು. ವೀರಗಾಸೆ, ಡೊಳ್ಳು ಸೇರಿ ಹಲವು ಕಲಾತಂಡಗಳು ಗಮನ ಸೆಳೆದವು. ಹಳದಿ ಬಾವುಟ, ಶಲ್ಯೆ, ಘೋಷಣೆಯ ನಾಮಫಲಕಗಳು ರಾರಾಜಿಸಿದವು. ರಾಜ್ಯದೆಲ್ಲೆಡೆಯಿಂದ ದೇವಾಂಗ ಸಮುದಾಯದ ಅಪಾರ ಜನಸ್ತೋಮ ಮುಖ್ಯರಸ್ತೆ ಉದ್ದಕ್ಕೂ ಬಿಸಿಲನ್ನು ಲೆಕ್ಕಿಸದೇ ನೆರೆದಿತ್ತು.

ಮೆರವಣಿಗೆಯಲ್ಲಿ ‘ಜೈ ದೇವಾಂಗ’, ‘ಜೈ ಜೈ ದೇವಾಂಗ’, ‘ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿ’, ‘ಮಹಾರಾಷ್ಟ್ರ ಮಾದರಿಯಲ್ಲಿ ಶೇ 2ರಷ್ಟು ವಿಶೇಷ ಮೀಸಲಾತಿ ನೀಡಲಿ’ ಎಂಬ ಘೋಷಣೆಗಳು ಮೊಳಗಿದವು.

ಬೆಳಿಗ್ಗೆ 11.30ಕ್ಕೆ ಆರಂಭವಾದ ಮೆರವಣಿಗೆ ಮುಖ್ಯರಸ್ತೆ ಮಾರ್ಗವಾಗಿ ಟಿ.ಬಿ. ವೃತ್ತ ತಲುಪುವ ಹೊತ್ತಿಗೆ ಸಂಜೆ 4 ಗಂಟೆಯಾಯಿತು.

ದೇವಾಂಗ ಅಭಿವೃದ್ಧಿ ನಿಗಮ ಹೋರಾಟ ಸಮಿತಿ ರಾಜ್ಯ ಸಂಚಾಲಕ ಡಾ.ಜಿ. ರಮೇಶ್‌, ಜಿಲ್ಲಾ ಸಂಚಾಲಕ ಟಿ. ಮಂಜುನಾಥ್‌, ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್‌. ಗೋವಿಂದರಾಜ್‌, ತಾಲ್ಲೂಕು ಸಂಘದ ಅಧ್ಯಕ್ಷ ಗೋ. ತಿಪ್ಪೇಶ್‌, ಎಸ್‌. ಸುರೇಶ್‌, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್‌, ಶಂಕರಪ್ಪ ಕುಚುಡಿ, ಸೂರ್ಯನಾರಾಯಣ್‌, ತಿಮ್ಮಶೆಟ್ಟಿ, ದಾಳಿಂಬೆ ಗಿರೀಶ್‌, ಡಿ.ರಾಮಂಚಂದ್ರ, ಎಚ್‌. ರಾಮಚಂದ್ರ, ಜ್ಯೋತಿ, ಗೀತಾ, ಯುವಬ್ರಿಗೇಡ್‌ ಅಧ್ಯಕ್ಷ ಗುರುಪ್ರಸಾದ್‌, ಪದಾಧಿಕಾರಿಗಳು, ಹಲವು ಮುಖಂಡರು ಹಾಜರಿದ್ದರು.

ವಿಧಾನಸೌಧಕ್ಕೆ ಮುತ್ತಿಗೆ: ಎಚ್ಚರಿಕೆ
‘ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ದೇವಾಂಗ ಸಮುದಾಯದವರಲ್ಲಿ ಶೇ 80ರಷ್ಟು ಜನರು ಬಿಜೆಪಿಯನ್ನು ಹಲವು ವರ್ಷಗಳಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ, ಈ ಸಮುದಾಯದವರಿಗೆ ರಾಜಕೀಯ ಸ್ಥಾನಮಾನ ಶೂನ್ಯವಾಗಿದೆ. ಎಲ್ಲಾ ರಂಗದಲ್ಲಿಯೂ ಅತ್ಯಂತ ಹಿಂದುಳಿದಿದ್ದೇವೆ. ಇಂತಹ ಸಮುದಾಯದ ಅಭಿವೃದ್ಧಿಗೆ ಸರ್ಕಾರಕ್ಕೆ ಒತ್ತಾಯಿಸಿರುವ ಬೇಡಿಕೆ ಈಡೇರಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಬೇಡಿಕೆ ಈಡೇರುವವರೆಗೂ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್‌. ಗೋವಿಂದರಾಜು ಎಚ್ಚರಿಕೆ ನೀಡಿದರು.

‘ಸಾಮಾಜಿಕ ನ್ಯಾಯ ಒದಗಿಸಿ’
‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ ಬೇರೆ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ನೀವು ಹಿಂದುಳಿದಿರುವ ನಮ್ಮ ಸಮಾಜಕ್ಕೆ ಏಕೆ ನಿಗಮ ಸ್ಥಾಪಿಸುತ್ತಿಲ್ಲ? ನಾವೇನು ತಪ್ಪು ಮಾಡಿದ್ದೇವೆ? ನಾವು ನಿಮಗೆ ಬೆಂಬಲ ನೀಡಿ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ? ನಮ್ಮನ್ನೇಕೆ ನಿರ್ಲಕ್ಷಿಸುತ್ತಿದ್ದೀರಿ? ನಾವು ಎಲ್ಲರಂತೆ ಈ ರಾಜ್ಯದ ಪ್ರಜೆಗಳಾಗಿದ್ದು, ಇತರೆ ಸಮಾಜದವರಂತೆ ಸಾಮಾಜಿಕ ನ್ಯಾಯದಡಿ ನಮಗೂ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ’ಎಂದು ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಹೋರಾಟ ಸಮಿತಿ ರಾಜ್ಯ ಸಂಚಾಲಕ ಡಾ.ಜಿ. ರಮೇಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT