ಶನಿವಾರ, ಜೂನ್ 25, 2022
24 °C
ಕೋವಿಡ್ ಸಂಕಷ್ಟದಲ್ಲಿ ರೈತರಿಗೆ ಗಾಯದ ಮೇಲೆ ಬರೆ

ಮೊಳಕಾಲ್ಮುರು: ಮಾರುಕಟ್ಟೆಗಿಂತ ಸರ್ಕಾರದ ಬಿತ್ತನೆ ಶೇಂಗಾ ದುಬಾರಿ!

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ವಿವಿಧ ಕಾರಣಗಳಿಂದಾಗಿ ಸತತ ನಷ್ಟಕ್ಕೀಡಾಗುತ್ತಿರುವ ತಾಲ್ಲೂಕಿನ ಶೇಂಗಾ ಬೆಳೆಗಾರರು ಈ ಬಾರಿ ಸರ್ಕಾರದ ದುಬಾರಿ ಶೇಂಗಾ ಬಿತ್ತನೆ ಬೀಜ ಸಮಸ್ಯೆಯನ್ನೂ ಎದುರಿಸಬೇಕಾಗಿದೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ಅವಳಿ ತಾಲ್ಲೂಕುಗಳ ಖುಷ್ಕಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಗಾಗಿ ಹಲವು ದಶಕಗಳಿಂದ ಶೇಂಗಾ ಹೊರಹೊಮ್ಮಿದೆ. ಕಳೆದ 8-10 ವರ್ಷಗಳಿಂದ ಮಳೆ ಅಭಾವ, ಕೀಟಬಾಧೆ, ಸುರಳಿ ರೋಗ, ಎಲೆಚುಕ್ಕಿ ರೋಗ ಜತೆಗೆ ದರದ ಏರುಪೇರಿನಿಂದಾಗಿ ಶೇಂಗಾ ಬೆಳೆಗಾರ ಹೈರಾಣಾಗಿದ್ದಾರೆ. ಬಿತ್ತನೆ ಸಮಯದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಿ ಕೈಹಿಡಿಯಬೇಕಾದ ಸರ್ಕಾರ ದುಬಾರಿ ದರಕ್ಕೆ ಬಿತ್ತನೆ ಬೀಜ ನಿಗದಿ ಮಾಡಿ ಸಂಕಷ್ಟಕ್ಕೆ ದೂಡಿದೆ ಎಂದು ರೈತರಾದ ತಿಪ್ಪೇಶ್, ನಾಗರಾಜಪ್ಪ ದೂರಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನಲ್ಲಿ 30,000 ಹೆಕ್ಟೇರ್‌ನಲ್ಲಿ, ಚಳ್ಳಕೆರೆ ತಾಲ್ಲೂಕಿನಲ್ಲಿ 50,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ನಡೆಯುತ್ತಿದೆ. ಕಳೆದ ವರ್ಷ ಕೊನೆಯ ಸಮಯದಲ್ಲಿ ಮಳೆ ಕೈಕೊಟ್ಟಿದ್ದ ಕಾರಣ ಬಹುತೇಕ ರೈತರಿಗೆ ಬಿತ್ತನೆಬೀಜ ಅಣಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಈ ಬಾರಿ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಿದೆ. ಈ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಸಣ್ಣ ರೈತರು ಹೆಚ್ಚಾಗಿದ್ದು ದುಬಾರಿ ಬೀಜ ಕೊಂಡು ಕೊರೊನಾ ಸಂಕಷ್ಟದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ, ಕಾರ್ಯದರ್ಶಿ ಮರ್ಲಹಳ್ಳಿ ರವಿಕುಮಾರ್ ದೂರಿದರು.

ಕೃಷಿ ಅಧಿಕಾರಿ ವಿ.ಸಿ. ಉಮೇಶ್ ಮಾತನಾಡಿ, ‘ಪ್ರತಿ 30 ಕೆ.ಜಿ ಬಿತ್ತನೆ ಬೀಜಕ್ಕೆ ಸಾಮಾನ್ಯ ವರ್ಗದವರಿಗೆ ₹ 2,010 ಮತ್ತು ಪರಿಶಿಷ್ಟ ಜಾತಿ, ಪಂಗಡವರಿಗೆ ₹ 1,800 ನಿಗದಿ ಮಾಡಲಾಗಿದೆ. ಜೂನ್ 7ರಿಂದ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ತಾಲ್ಲೂಕಿನ ಮೊಗಲಹಳ್ಳಿಯ ಬಸವೇಶ್ವರ ಶೇಂಗಾ ಮಿಲ್‌ನ ತಿಪ್ಪೇಸ್ವಾಮಿ ಮಾತನಾಡಿ, ‘ನಾವು ಅಂತರರಾಷ್ಟ್ರೀಯ ಶೇಂಗಾ ಎಣ್ಣೆ ದರ ಆಧರಿಸಿ ಮಾರಾಟ ಮಾಡುತ್ತೇವೆ. ಸದ್ಯಕ್ಕೆ ₹ 5,500ರಿಂದ ₹ 6,000 ವರೆಗೆ ದರವಿದೆ ಎಂದರು.

ಖಾಸಗಿಯಲ್ಲಿ ಬೀಜವನ್ನು ಪರೀಕ್ಷಿಸಿಕೊಂಡು ತರಬಹುದು. ಆದರೆ ಸರ್ಕಾರ ನೀಡುವ ಬೀಜದ ವಿಷಯದಲ್ಲಿ ಇದಕ್ಕೆ ಮುಕ್ತ ಅವಕಾಶವಿಲ್ಲ. ಜತೆಗೆ ದುಬಾರಿ ಬೆಲೆ ತೆತ್ತು ಖರೀದಿ ಮಾಡುವ ಅವಶ್ಯಕತೆ ಏನಿದೆ. ರೈತರ ಸಂಕಷ್ಟ ನಿವಾರಣೆಯಲ್ಲಿ ಸರ್ಕಾರದ ಪಾತ್ರವೇನು? ಸೀಮಾಂಧ್ರಕ್ಕೆ ಹೋಲಿಕೆ ಮಾಡಿದಲ್ಲಿ ನಮ್ಮ ರಾಜ್ಯದಲ್ಲಿ ಶೇಂಗಾ ಬೆಳೆಗಾರರನ್ನು ಯಾವಾಗಲೂ ನಿರ್ಲಕ್ಷ್ಯ ಮಾಡಿಕೊಂಡು ಬರಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಬಿ. ಯೋಗೇಶ್ ಬಾಬು
ದೂರಿದರು.

ಕೂಡಲೇ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳು ಇದನ್ನು ಸರ್ಕಾರದ ಗಮನಕ್ಕೆ ತಂದು ದರ ಕಡಿಮೆ ಮಾಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ರೈತರು ಎಚ್ಚರಿಸಿದ್ದಾರೆ.

*
ಯಾವ ಮಾನದಂಡದಲ್ಲಿ ಕೃಷಿ ಇಲಾಖೆ ದರ ನಿಗದಿ ಮಾಡಿದೆ ಎಂದು ತಿಳಿಯುತ್ತಿಲ್ಲ. ಇದು ಅವೈಜ್ಞಾನಿಕವಾಗಿದ್ದು ಕೂಡಲೇ ಇಳಿಕೆ ಮಾಡಬೇಕು. ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
- ಬಿ. ಯೋಗೇಶ್ ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು