ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡು ಚಿತ್ರದುರ್ಗಕ್ಕೂ ಗಾನ ಸಾಮ್ರಾಟ್ ಎಸ್‌ಪಿಬಿ ನಂಟು

ಹಿಮೊಫಿಲಿಯಾ ರೋಗಿಗಳ ಸಹಾಯಾರ್ಥ ಉಚಿತವಾಗಿ ಹಾಡುತ್ತಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ
Last Updated 25 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಹಿಮೊಫಿಲಿಯಾ ರೋಗಿಗಳ ಸಹಾಯಾರ್ಥ ಕಂಠ ಇರುವವರೆಗೂ ಹಾಡುತ್ತೇನೆ’ ಎಂದು ಮೃದು ದನಿಯಲ್ಲೇ ಹೇಳಿ, ನುಡಿದಂತೆ ನಡೆದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧವಿದೆ.

ನಟ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಸಿನಿಮಾಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಮಾಧುರ್ಯ ಕಂಠದಿಂದ ಹೇಳಿದ ‘ಹಾವಿನ ದ್ವೇಷ’ ಹಾಡು ಈಗಲೂ ಅಚ್ಚಳಿಯದೇ ಜನಮಾನಸದಲ್ಲಿ ಉಳಿದಿದೆ. ಈ ಮೂಲಕ ಜನಪ್ರಿಯತೆ ಅಷ್ಟೇ ಅಲ್ಲದೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಮಠಗಳ ಕೇಂದ್ರ ಬಿಂದುವಾಗಿರುವ ಕೋಟೆನಾಡಿನ ಮುರುಘಾಮಠಕ್ಕೆ 2015ರಲ್ಲಿ ಬಾಲಸುಬ್ರಹ್ಮಣ್ಯಂ ಭೇಟಿ ನೀಡಿದ್ದರು. ‘ನಿಮ್ಮ ಸುಮಧುರ ಕಂಠಕ್ಕೆ ಮನಸೋತವರಿಲ್ಲ. ಅಂಥವರಲ್ಲಿ ನಾವೂ ಒಬ್ಬರು. ದೇಶದಲ್ಲೇ ಮಹಾನ್‌ ಗಾಯಕರಾದ ನೀವು ಗಾನ ಸಾಮ್ರಾಟ್’ ಎಂದು ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿ, ಶುಭ ಹಾರೈಸಿದ್ದರು.

ಮಠದ ಸಭಾಂಗಣದಲ್ಲಿ ಹಿಮೊಫಿಲಿಯಾ ರೋಗಿಗಳೊಂದಿಗೆ ಎಸ್‌ಪಿಬಿ ಸಂವಾದ ನಡೆಸಿದ್ದರು. ‘ಮೊದಲು ಹಾಡಿದ್ದು ತೆಲುಗಿನಲ್ಲಿ. ಕನ್ನಡ ಭಾಷೆಯೇ ತಿಳಿಯದ ಸಮಯದಲ್ಲಿ ಕನ್ನಡದಲ್ಲಿ ಹಾಡು ಹೇಳಿದೆ. ಸಂಗೀತ ಪ್ರೇಮಿಗಳು ಕೊಂಡಾಡಲು ಆರಂಭಿಸಿದರು. ಈ ನೆಲ ನನ್ನನ್ನು ಬೆಳೆಸಿದೆ. ತಾಯಿ ಭುವನೇಶ್ವರಿ ಮನಪೂರ್ವಕವಾಗಿ ಆಶೀರ್ವದಿಸಿದ್ದಾಳೆ’ ಎಂದು ಮನತುಂಬಿ ನುಡಿದಿದ್ದರು ಎಸ್‌ಪಿಬಿ.

‘ನನ್ನನ್ನು ಒಬ್ಬ ಸಿನಿಮಾ ಗಾಯಕನನ್ನಾಗಿ ನೋಡಬೇಡಿ. ವಿಶೇಷ ಗೌರವಾತಿಥ್ಯ ನೀಡಬೇಡಿ. ನಿಮ್ಮಂತೆಯೇ ಸಾಮಾನ್ಯ ಮನುಷ್ಯ. ಇಂಥ ಸೇವಾ ಕಾರ್ಯಗಳಿಗಾಗಿ ಸ್ವಯಂ ಸೇವಕನಾಗಿ ದುಡಿಯುತ್ತೇನೆ. ವಿದ್ಯಾದಾನ, ಅನ್ನದಾನ, ರಕ್ತದಾನ ಇವೆಲ್ಲ ಶ್ರೇಷ್ಠದಾನಗಳು. ಅಂಥ ಎಲ್ಲ ಸತ್ಕಾರ್ಯವನ್ನೂ ಮುರುಘಾಮಠ ಮಾಡುತ್ತಿದೆ. ಇಂಥ ಮಠದ ಶರಣರ ಜೊತೆ ಕುಳಿತು ಮಾತನಾಡುತ್ತಿರುವುದೇ ನನ್ನ ಸೌಭಾಗ್ಯ’ ಎಂದು ಹೇಳಿದ್ದನ್ನು ಶ್ರೀಮಠ ಸ್ಮರಿಸಿಕೊಂಡಿದೆ.

ರಾಜ್ಯ ಹಿಮೊಫಿಲಿಯಾ ಸೊಸೈಟಿಯ ಮಹಾಪೋಷಕರಾದ ಬಾಲಸುಬ್ರಹ್ಮಣ್ಯಂ, ರೋಗಿಗಳಿಗಾಗಿ ರಾಜ್ಯದ ಐದು ಕಡೆ ಗಾಯನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. 2015ರ ಏಪ್ರಿಲ್ 18ರಂದು ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹತ್ತಾರು ಹಾಡುಗಳನ್ನು ನಿರರ್ಗಳವಾಗಿ ಹೇಳಿ ಜನರ ಹೃದಯ ಗೆದ್ದಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ನಾಗರಹಾವು ಚಿತ್ರದ ಹಾಡನ್ನೂ ಹೇಳಿ ರಂಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT