ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು– ಇನ್ನೊಂದು ಪ್ರಾದೇಶಿಕ ಪಕ್ಷ

ಕರ್ನಾಟಕಕ್ಕೆ ಮೂರು ಪಕ್ಷಗಳು ಅನಿವಾರ್ಯವೇ? ಸಾಧುವೇ?
Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

‘ನಮ್ಮದು ಜಾತ್ಯತೀತ ರಾಷ್ಟ್ರ’ ಎಂಬ ರಾಷ್ಟ್ರೀಯ ಘೋಷಣೆ ಹಳ್ಳಿಯಿಂದ ದಿಲ್ಲಿಯವರೆಗೆ ಮೊಳಗುತ್ತಿದೆ. ಆದರೆ ಪ್ರತಿಯೊಂದು ಚುನಾವಣೆಯಲ್ಲಿ ಜಾತಿ, ಉಪಜಾತಿಗಳೇ ವಿಜೃಂಭಿಸುತ್ತಿವೆ. ಜತೆಗೆ ಇವೆಲ್ಲ ರಾಜಕಾರಣದಲ್ಲಿ ತೀರ ಸಹಜ ಎಂದು ಭಾವಿಸುವಷ್ಟರ ಮಟ್ಟಿಗೆ ಈ ವ್ಯವಸ್ಥೆಗೆ ನಾವೆಲ್ಲ ಒಗ್ಗಿಹೋಗಿದ್ದೇವೆ. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಧುರೀಣರು ಯಾವ ರೀತಿ ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡಿದರು, ಅಸಹನೆ ಪ್ರದರ್ಶಿಸಿದರು ಎಂಬುದನ್ನೆಲ್ಲ ಕಣ್ಣಾರೆ ನೋಡಿ, ಕಿವಿಯಾರೆ ಕೇಳಿಯಾಗಿದೆ. ಫಲಿತಾಂಶ ಬಂದ ಮೇಲೆ ಇವರೇ ಪರಸ್ಪರ ಕೈಕುಲುಕಿದ್ದು, ಅಪ್ಪಿಕೊಂಡದ್ದು, ಗರ್ವದ ನಗೆ ಬೀರಿದ್ದೂ ಆಗಿದೆ.

ಚುನಾವಣೆಯಲ್ಲಿ, ಆಡಳಿತ ಚುಕ್ಕಾಣಿ ಹಿಡಿಯಲು ಪ್ರಜೆಗಳು ಯಾರಿಗೆ ಬಹುಮತ ಕೊಟ್ಟರು ಎಂಬುದರ ವಿಶ್ಲೇಷಣೆಗಿಂತ ಸದ್ಯ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ತಮ್ಮೊಳಗಿನ ಭೇದಭಾವ ಏನೇ ಇದ್ದರೂ ಮರೆತು ನಾಡಿನ ಹಿತವನ್ನು ಗಮನದಲ್ಲಿಟ್ಟುಕೊಂಡು ‍ಪ್ರಾಮಾಣಿಕ ಆಡಳಿತ ನೀಡಲು ಮುಂದೆ ಯತ್ನಿಸಲಿವೆ ಎಂದು ಆಶಿಸೋಣ.

ನಮ್ಮ ದೇಶದಲ್ಲಿ ಎರಡು ಪಕ್ಷಗಳ ಅಸ್ತಿತ್ವ ಅಸಾಧ್ಯವೇ ಸರಿ. ಏಕೆಂದರೆ ನಾವು ಅಳವಡಿಸಿಕೊಂಡಿರುವ ಸಂವಿಧಾನದ ನಿಯಮಗಳಲ್ಲಿ ಹಲವು ಪಕ್ಷಗಳು ರಾಜಕಾರಣ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ.

ಕರ್ನಾಟಕಕ್ಕೆ ಮೂರು ಪಕ್ಷಗಳು ಅನಿವಾರ್ಯವೇ? ಸಾಧುವೇ?

ಬರೀ ಮೂರು ಪಕ್ಷಗಳಿರುವುದರಿಂದ ಒಂದಿಬ್ಬರ ಹಿತ ಸಾಧಿಸಬಹುದಾದರೂ ಪ್ರಜಾಪ್ರಭುತ್ವದಲ್ಲಿ ಇಂತಹ ಬೆಳವಣಿಗೆ ಅಪೇಕ್ಷಣೀಯವಲ್ಲ. ಇದರಿಂದ ಕೆಲ ಸಲ ರಾಜಕೀಯ ಪಕ್ಷಗಳ ನಿರ್ಣಯವು ಪ್ರಜೆಗಳ ಹಿತಕ್ಕೆ ವಿರೋಧವಾಗಿಯೂ ಬರುವ ಸಾಧ್ಯತೆ ಇದೆ.

ಆದ್ದರಿಂದ ಸದ್ಯ ಕರ್ನಾಟಕದಲ್ಲಿ ಒಂದು ಪ್ರಯೋಗ ನಡೆಸಬೇಕಾದ ಅಗತ್ಯ ಎಂದಿಗಿಂತ ಇಂದಿನ ಅವಶ್ಯಕತೆಯಾಗಿದೆ ಅನಿಸುತ್ತಿದೆ. ಕರ್ನಾಟಕದ ಮಟ್ಟಿಗೆ ಈಗಿರುವ ಒಂದೇ ಪ್ರಾದೇಶಿಕ ಪಕ್ಷದೊಂದಿಗೆ ಇನ್ನೊಂದು ಹೊಸ ಪ್ರಾದೇಶಿಕ ಪಕ್ಷ ಬೆಳೆಯಬೇಕಾದ ಅನಿವಾರ್ಯ ಕಾಣುತ್ತಿದೆ.

ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ಇನ್ನೊಂದು ಹೊಸ ಪ್ರಾದೇಶಿಕ ಪಕ್ಷವೂ ತನ್ನ ಅಸ್ತಿತ್ವ ಕಂಡುಕೊಂಡರೆ, ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಹೋದರೂ ಸರ್ಕಾರ ಸ್ಥಾಪನೆಯ ವಿಷಯದಲ್ಲಿ ಕಡಿಮೆ ಸ್ಥಾನ ಪಡೆದ ಹಳೆಯ ಪ್ರಾದೇಶಿಕ ಪಕ್ಷವೇ ನಿರ್ಣಾಯಕ ಪಾತ್ರ ವಹಿಸುವುದನ್ನು, ರಾಷ್ಟ್ರೀಯ ಪಕ್ಷಗಳನ್ನು ಆಟ ಅಡಿಸುವುದನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು ಎನಿಸುತ್ತದೆ. ಉದಾ: ಈ ಬಗೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ನಾಲ್ಕು ಪಕ್ಷಗಳು ಅಸ್ತಿತ್ವದಲ್ಲಿದ್ದು ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಿಕ ಪಕ್ಷದ ಬೆಂಬಲದಿಂದ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿರುವುದನ್ನು ನೋಡಬಹುದು. ಅಲ್ಲಿ ಇನ್ನೊಂದು ಪ್ರಾದೇಶಿಕ ಪಕ್ಷವೂ ಅಸ್ತಿತ್ವದಲ್ಲಿರುವುದರಿಂದ ಒಂದು ವೇಳೆ ಸರ್ಕಾರವನ್ನು ಬೆಂಬಲಿಸಿದ ಪ್ರಾದೇಶಿಕ ಪಕ್ಷ ತನ್ನ ಬೆಂಬಲವನ್ನು ಹಿಂತೆಗೆದುಕೊಂಡರೂ ಮತ್ತೊಂದು ಪ್ರಾದೇಶಿಕ ಪಕ್ಷ ಸರ್ಕಾರ ಬೀಳದಂತೆ ಬೆಂಬಲಿಸಲು ತುದಿಗಾಲಲ್ಲಿ ನಿಂತಿರುವುದರಿಂದ, ಸಹಜವಾಗಿ ಇಲ್ಲಿ ಅಧಿಕಾರದ ಆಸೆಯೇ ಅಂತಿಮವಾಗಿದ್ದರೂ ಸರ್ಕಾರ ಮುನ್ನಡೆಯಲು ಸಾಧ್ಯವಾಗಿದೆ. ಹಾಗಾಗಿ ಎರಡು ಪ್ರಾದೇಶಿಕ ಪಕ್ಷಗಳಿದ್ದರೆ ಅವು ಸರ್ಕಾರವನ್ನು ಕಟ್ಟಲು ಅಥವಾ ಕೆಡವಲು ಸಂಯಮ ವಹಿಸದೇ ವಿಧಿ ಇಲ್ಲ.

ಆದ್ದರಿಂದ ಕರ್ನಾಟಕದಲ್ಲಿ ಸಹ ಇನ್ನೊಂದು ಜನಾಶೀರ್ವಾದ ಪಡೆದ ಪ್ರಾದೇಶಿಕ ಪಕ್ಷ ಉದಯಿಸಿದರೆ ಚೆನ್ನ. ಇಂತಹ ಪಕ್ಷ ದೊಡ್ಡ ಸಮುದಾಯಗಳಾದ ದಲಿತ, ರೈತ, ಕುರುಬ, ಒಕ್ಕಲಿಗ ಅಥವಾ ಲಿಂಗಾಯತ ವೀರಶೈವಗಳಿಂದ ಸಂಘಟಿತವಾಗಿ ರೂಪುಗೊಳ್ಳಬೇಕಾದ ತುರ್ತು ಈಗ ಎದುರಾಗಿದೆ. ಇವರಲ್ಲಿ ಹಲವು ಪಂಗಡಗಳವರು ರಾಷ್ಟ್ರೀಯ ಪಕ್ಷಗಳ ನೆರಳಲ್ಲಿ ಇದ್ದಾರೆಯೇ ಹೊರತು ತಮ್ಮ ತಮ್ಮ ಸಮುದಾಯದವರೆಲ್ಲರನ್ನೂ ಒಗ್ಗೂಡಿಸಿದರೆ ತಾವೇ ಒಂದು ಶಕ್ತಿಯಾಗಿ ರಾಜಕೀಯ ಕ್ಷಿತಿಜದಲ್ಲಿ ಬೆಳಗಬಹುದು ಎಂಬ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದಂತೆ ಕಂಡು ಬರುತ್ತಿಲ್ಲ. ಹೀಗೆ ಯಾವುದಾದರೊಂದು ಸಮುದಾಯ ಪ್ರಾದೇಶಿಕ ಪಕ್ಷವಾಗಿ ನೆಲೆನಿಂತಾಗ ಆಗ ಎರಡು ಪ್ರಾದೇಶಿಕ ಪಕ್ಷಗಳಿರುವುದರಿಂದ ಸರ್ಕಾರ ರಚಿಸಲು ಕಡಿಮೆ ಬಿದ್ದ ಅಲ್ಪ ಬಹುಮತಕ್ಕಾಗಿ ಯಾವುದಾದರೊಂದು ಪಕ್ಷಕ್ಕೆ ಶರಣಾಗತಿ ಪ್ರಕಟಿಸುವ, ಅಂಗಲಾಚುವ, ಹೇಳಿದ್ದಕ್ಕೆಲ್ಲ ಒಪ್ಪಿಕೊಳ್ಳುವ ಅವಸ್ಥೆ ಹೆಚ್ಚು ಸೀಟುಗಳನ್ನು ಹೊಂದಿರುವ ಪಕ್ಷಕ್ಕೆ ಬರಲಾರದು.

ಪ್ರಾದೇಶಿಕ ಪಕ್ಷವೇ ಆಗಲಿ, ಒಂದು ಪಕ್ಷವನ್ನು ಕಟ್ಟುವುದು ಸುಲಭವಂತೂ ಅಲ್ಲ. ಇದಕ್ಕೆ ಪ್ರಾಮಾಣಿಕರಾದ, ಪ್ರಜಾಹಿತ ಚಿಂತಕರಾದ, ಪ್ರಜ್ಞಾವಂತರಾದ, ಜನಪ್ರಿಯರೂ ಆದಂತಹ ನಾಯಕಮಣಿಗಳ ಅವಶ್ಯಕತೆ ಇದೆ. ಪ್ರಜೆಗಳ ಪುರೋಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವಂತಹ ರಾಜಕೀಯ ಧುರೀಣರಿಗೂ ನಮ್ಮಲ್ಲಿ  ಕೊರತೆ ಇಲ್ಲ. ಈಗಲೂ ಕರ್ನಾಟಕದಲ್ಲಿ ದಲಿತ, ರೈತ, ಕುರುಬ ಮುಂತಾದ ಸಮುದಾಯಗಳಲ್ಲಿ ಅನೇಕ ಯುವ ನೇತಾರರಿದ್ದಾರೆ. ಇವರಲ್ಲಿ ಕೆಲವರಾದರೂ ಸ್ವಲ್ಪ ಶ್ರಮ ವಹಿಸಿ ತಮ್ಮ ತಮ್ಮ ಸಮುದಾಯಗಳನ್ನು ಸಂಘಟಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ಯಾವುದೇ ಬಗೆಯ ಪ್ರಲೋಭಕ್ಕೆ ಒಳಗಾಗದಂತೆ, ತಾವು ನಂಬಿದ ನಂಬಿಕೆಗಳಿಗೆ ನಿಷ್ಟರಾಗಿರುವಂತೆ ಒಲಿಸಬೇಕು. ಹೊಸಮುಖಗಳು ಬಂದರೆ ಪ್ರಜೆಗಳು ಸ್ವಾಗತಿಸುವುದರಲ್ಲಿ ಸಂಶಯವಿಲ್ಲ. ಆದರೆ ಇದಕ್ಕೆಲ್ಲ ಮೊದಲು ಈ ಸಮುದಾಯಗಳ ಮುಖಂಡರಲ್ಲಿ ಬದ್ಧತೆ ಬೇಕು.

ಪಕ್ಷ ಕಟ್ಟುವ ಕೆಲಸ ಒಂದೆರಡು ವರ್ಷಗಳಲ್ಲಿ ಮುಗಿಯುವಂತಹದಲ್ಲ. ಇದಕ್ಕೆ ಹಲವು ವರ್ಷಗಳ ಸಾರ್ಥಕ ಸಂಘಟನೆ, ಶ್ರಮ, ನಂಬಿಕೆ, ವಿಶ್ವಾಸ ಬೇಕು. ಇದು ಜನ ಮೆಚ್ಚುಗೆ ಪಡೆದಾಗ ಮಾತ್ರ ತನ್ನ ಅಸ್ತಿತ್ವವನ್ನು ಧೃಡಪಡಿಸಿಕೊಳ್ಳಬಹುದು.

ಈಗಿರುವ ಆಶ್ವಾಸನೆಗಳು ಹಳೆಯದಾಗಿವೆ. ಜನರಲ್ಲಿ ಸ್ಫೂರ್ತಿ ತುಂಬುವಂತಹ, ಹೆಮ್ಮೆ ಮತ್ತು ಗೌರವ ಮೂಡಿಸುವಂತಹ ಹೇಳಿಕೆಗಳು ಈಗ ಬೇಕಾಗಿವೆ. ಉದಾ, ‘ದುಡಿದು ತಿನ್ನಿರಿ!’ ಹೀಗೆ ಹೇಳಿದ ಮಾತ್ರಕ್ಕೆ ಮುಗಿಯಲಿಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ದುಡಿಮೆಗೆ ಸರಿಯಾದ ಪ್ರತಿಫಲ ನೀಡಬೇಕು. ನಾವು ಬೇಡುವವರಲ್ಲ, ಕೊಡುವವರು ಎನ್ನುವಂತಹ, ಸ್ವಾಭಿಮಾನವನ್ನು ಬೆಳೆಸುವ ಕೆಲಸ ಅವ್ಯಾಹತವಾಗಿ ನಡೆಯಬೇಕು. ನಮ್ಮ ಯುವಕರು ಈ ಕೆಲಸ ಮಾಡಬಲ್ಲರು. ನಾವು ಭರವಸೆ ಇಡಬಹುದಾದಂತಹ ಯುವಕರು ನಮ್ಮಲ್ಲಿದ್ದಾರೆ.

‘ಜನ ಭ್ರಷ್ಟರಾಗಿದ್ದಾರೆ, ಸೋಮಾರಿಗಳಾಗಿದ್ದಾರೆ, ಚಟಗಳ ದಾಸರಾಗಿದ್ದಾರೆ, ಮತಗಳನ್ನು ಮಾರಿಕೊಳ್ಳುತ್ತಾರೆ ಎಂದು ಆರೋಪಿಸುವವರೆಲ್ಲ, ಇದನ್ನೆಲ್ಲ ಜನರಿಗೆ ಕಲಿಸಿದವರ‍್ಯಾರು ಎಂಬ ಸಂಗತಿಯನ್ನು ಮನಗಾಣಬೇಕಾಗಿದೆ. ಪ್ರಾದೇಶಿಕ ಪಕ್ಷವನ್ನು ಕಟ್ಟುವ ಛಲ ಹೊಂದಿದ ಯುವಕರು ಮಾಡಬೇಕಾದ ಕೆಲಸ ಬಹಳವಿದೆ. ಇವರೊಂದು ವೇಳೆ ಯಶಸ್ವಿಯಾದರೆ ಕರ್ನಾಟಕದ ಜನತೆ ರಾಜಕೀಯವಾಗಿ ಒಲವು ತೋರುವುದರಲ್ಲಿ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT