ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಜಕಾತಿ ವಸೂಲಿಯಲ್ಲಿಯ ಆಸಕ್ತಿ ಸೌಲಭ್ಯ ಕಲ್ಪಿಸುವಲ್ಲಿ ಇಲ್ಲ

ಸಂತೆಗೆ ಜಾಗ ಹಿಡಿಯುವುದೇ ದೊಡ್ಡ ಸಾಹಸ
Last Updated 7 ಏಪ್ರಿಲ್ 2022, 3:58 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಎರಡು ಕಿರಿದಾದ ರಸ್ತೆಗಳು, ನಿಲ್ದಾಣದ ಕೆಳಭಾಗದಲ್ಲಿಯ ಬನ್ನಿಮಂಟಪದ ಆವರಣದಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ವ್ಯಾಪಾರಿಗಳು ಜಾಗ ಹಿಡಿಯಲು ಪರದಾಟ, ವಾಗ್ವಾದ, ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿರುವುದುಂಟು.

‘1998ರಲ್ಲಿ ನಗರದ ಪ್ರಧಾನ ರಸ್ತೆಗೆ ಹೊಂದಿಕೊಂಡಂತೆ ವಾರದ ಸಂತೆ ನಡೆಯುತ್ತಿದ್ದ ಜಾಗವನ್ನು ಪುರಸಭೆಯಿಂದ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಲಾಗಿತ್ತು. ನಂತರ ರಸ್ತೆ ಸಾರಿಗೆ ನಿಗಮದವರು ₹ 39 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಿದ್ದರು. ಆಮೇಲೆ ಸಂತೆಯ ಜಾಗ ಕಿರಿದಾಗಿದ್ದರಿಂದ ಗ್ರಾಹಕರು, ವ್ಯಾಪಾರಿಗಳು ಪರದಾಡುವಂತಾಯಿತು. ಸಂತೆಯ ದಟ್ಟಣೆ ತಡೆಯಲು ಪ್ರತಿ ಬುಧವಾರ ವೇದಾವತಿ ಬಡಾವಣೆಯಲ್ಲಿ ಮತ್ತೊಂದು ಸಂತೆ ಆರಂಭಿಸಲಾಯಿತು. ವೇದಾವತಿ ಬಡಾವಣೆಯ ನೂರು ಅಡಿ ರಸ್ತೆಯಲ್ಲಿ ಸಂತೆ ನಡೆಯುತ್ತಿದ್ದರೂ ಅದು ತುಂಬಾ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಕಾರಣ ಶನಿವಾರದ ಸಂತೆಯಲ್ಲಿ ಸದಾ ಒತ್ತಡ ಹೆಚ್ಚಿರುತ್ತದೆ’.

ಶನಿವಾರದ ಸಂತೆ ಬಹುತೇಕ ಕಿರಿದಾದ ರಸ್ತೆಯಲ್ಲಿ ನಡೆಯುತ್ತಿರುವ ಕಾರಣ ಒಂದು ಸೈಕಲ್ಲನ್ನೂ ತಳ್ಳಿಕೊಂಡು ಹೋಗಲಾಗದು. ವ್ಯಾಪಾರಿಗಳು ತರಕಾರಿ ಹೊತ್ತುಕೊಂಡೇ ತಾವು ಆಯ್ಕೆ ಮಾಡಿಕೊಂಡಿರುವ ಜಾಗಕ್ಕೆ ಹೋಗಬೇಕು. ಅದೇ ರೀತಿ ಗ್ರಾಹಕರು ಕೂಡ ಖರೀದಿಸಿದ ತರಕಾರಿ ಹೊತ್ತು ಫರ್ಲಾಂಗ್ ದೂರ ಸಾಗಬೇಕು. ಸಂತೆಯ ದಿನ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ವ್ಯತ್ಯಯವಾಗುವುದುಂಟು.

‘ಬಸ್ ನಿಲ್ದಾಣಕ್ಕೆ ಜಾಗ ಬಿಟ್ಟುಕೊಡುವಾಗ ಸಂತೆಗೆಂದು ಪರ್ಯಾಯ ಜಾಗವನ್ನು ಗುರುತಿಸದೇ ನಿರ್ಲಕ್ಷ್ಯ ತೋರಿದ್ದು ಇಂದಿನ ಅವ್ಯವಸ್ಥೆಗೆ ಕಾರಣ. ನಗರದ ಹೃದಯ ಭಾಗದಲ್ಲಿರುವ ಕೃಷಿ ಭೂಮಿಗಳನ್ನು ವಸತಿ ಉದ್ದೇಶಕ್ಕೆ ಕೊಡಬಾರದು ಎಂದು ಪುರಸಭೆ ಸಾಮಾನ್ಯ ಸಭೆಗಳಲ್ಲಿ ಒಮ್ಮತದ ನಿರ್ಣಯಗಳನ್ನು ಕೈಗೊಂಡಿದ್ದರೂ, ಆ ಮಾತುಗಳು ನಿರ್ಣಯಕ್ಕೆ ಮಾತ್ರ ಸೀಮಿತವಾಗಿದ್ದವು. ನಿಲ್ದಾಣಕ್ಕೆ ಬಿಟ್ಟುಕೊಟ್ಟ ಜಾಗದ ಬಾಬ್ತು ಸರ್ಕಾರ ಕೊಟ್ಟ ಹಣ ಏನಾಯಿತು? ಸಂತೆಗೆ ಜಾಗ ಖರೀದಿಗೆಂದು ಪ್ರತಿ ವರ್ಷ ತೆಗೆದಿರಿಸುತ್ತಿದ್ದ ಹಣ (2002–03 ನೇ ಸಾಲಿನಿಂದ) ಏನಾಯಿತು? ಎಂಬ ಸಾರ್ವಜನಿಕರ ಪ್ರಶ್ನೆಗೆ, ‘ಅಂದು ನಾವು ಇರಲಿಲ್ಲ, ಆ ವಿಚಾರ ಗೊತ್ತಿಲ್ಲ, ವಿಚಾರಿಸಿ ಹೇಳುತ್ತೇವೆ’ ಎಂಬ ಸಿದ್ಧ ಉತ್ತರ ಬರುತ್ತದೆ.

ಆದಷ್ಟು ಬೇಗ ಮೂಲಸೌಕರ್ಯ
ಕೋವಿಡ್ ಕಾರಣಕ್ಕೆ ಎರಡು ವರ್ಷ ಸಂತೆ ನಡೆದಿರಲಿಲ್ಲ. ಮಾರ್ಚ್ 19ರಿಂದ ಸಂತೆ ಮರು ಆರಂಭಗೊಂಡಿದೆ. ಆದಷ್ಟು ಬೇಗ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡುತ್ತೇವೆ. ಹುಳಿಯಾರು ರಸ್ತೆಯ ಒಂದು ಕಡೆ ವಾರದಲ್ಲಿನ ಮತ್ತೊಂದು ದಿನ ಸಂತೆ ನಡೆಸುವ ಉದ್ದೇಶವಿದೆ. ಸಂತೆಗೆಂದು ವಿಶಾಲ ಜಾಗದ ಹುಡುಕಾಟ ನಡೆದಿದೆ.
– ಜೆ.ಆರ್. ಅಜಯ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ಹಿರಿಯೂರು

*
30 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿರುವೆ. ಇಲ್ಲಿಗಿಂತ ಹಳ್ಳಿಗಳಲ್ಲೇ ಸಂತೆಗೆ ವಿಶಾಲವಾದ ಜಾಗಗಳಿವೆ. ಸುಂಕ ವಸೂಲಿ ಮಾಡುವಲ್ಲಿ ಇರುವ ಆಸಕ್ತಿ ಸೌಲಭ್ಯ ಕಲ್ಪಿಸುವಲ್ಲಿ ಕಾಣುತ್ತಿಲ್ಲ.
–ರಾಮಸ್ವಾಮಿ, ವಾಣಿವಿಲಾಸಪುರ

*
ಮನೆಯಿಂದ ಬರುವಾಗಲೇ ಕುಡಿಯುವ ನೀರು ತರುತ್ತೇನೆ. ಶೌಚಾಲಯದ ವ್ಯವಸ್ಥೆ ಇಲ್ಲ. ಬಯಲು ಮೂತ್ರ ಮುಜುಗರ ಉಂಟು ಮಾಡುತ್ತದೆ. ಸುಂಕ ಪಡೆದವರು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕಲ್ಲವೇ?
ರಾಣಿ, ಮೇರಿ ರಸ್ತೆ, ಹಿರಿಯೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT