ನವದುರ್ಗೆಯರಿಗೆ ಶ್ರಾವಣದಲ್ಲಿ ವಿಶೇಷ ಪೂಜೆ

7
ಪೂಜೆಗಾಗಿ ಕೋಟೆನಾಡಿನ ವಿವಿಧ ದೇಗುಲಗಳು ಸಜ್ಜು

ನವದುರ್ಗೆಯರಿಗೆ ಶ್ರಾವಣದಲ್ಲಿ ವಿಶೇಷ ಪೂಜೆ

Published:
Updated:
Deccan Herald

ಚಿತ್ರದುರ್ಗ: ಕೋಟೆನಾಡಿನ ರಕ್ಷಕ ದೇವತೆಗಳು ಹಾಗೂ ನವದುರ್ಗೆಯರು ಎಂಬ ಖ್ಯಾತಿ ಗಳಿಸಿರುವ ಇಲ್ಲಿನ ಶಕ್ತಿದೇವತೆಗಳಿಗೆ ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನೆರವೇರಿಸಲು ದೇಗುಲಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ಕಣಿವೆ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಚೌಡೇಶ್ವರಿ ದೇವತೆ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

ಕೆಳಗೋಟೆಯ ಅನ್ನಪೂರ್ಣೇಶ್ವರಿ ದೇವಿ, ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ, ಮಾರಿಕಾಂಬ ಸೇರಿ ವಿವಿಧ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಸಲು ದೇಗುಲದ ಆಡಳಿತ ಮತ್ತು ಭಕ್ತ ಮಂಡಳಿ ಪೂರ್ವ ಸಿದ್ಧತೆ ನಡೆಸುತ್ತಿದೆ.

ಶಿವ ದೇಗುಲಗಳಲ್ಲಿ ವಿಶೇಷ ಪೂಜೆ: ಶಿವನ ಆರಾಧಕರಿಗೆ ಸೋಮವಾರ ಶ್ರೇಷ್ಠ ದಿನವಾದ್ದರಿಂದ ಶ್ರಾವಣ ಮಾಸ ಈಗಾಗಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಿವಿಧ ಶಿವ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲು ದೇಗುಲಗಳ ಆಡಳಿತ ಮಂಡಳಿ, ಸೇವಾ ಟ್ರಸ್ಟ್‌ನವರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಮೇಲುದುರ್ಗದಲ್ಲಿನ ಪುರಾತನ ಐತಿಹ್ಯ ಇರುವ ಹಿಡಂಭೇಶ್ವರ ಸ್ವಾಮಿ, ಸಂಪಿಗೆ ಸಿದ್ದೇಶ್ವರ ಸ್ವಾಮಿ, ಕಾಶಿ ವಿಶ್ವೇಶ್ವರ, ವಿಶೇಷ ಆಕರ್ಷಣೆಯುಳ್ಳ ಪಲ್ಗುಣೇಶ್ವರ ಸ್ವಾಮಿ, ಕರ್ವತೀಶ್ವರ, ಕೋಟೆ ರಸ್ತೆ ಮಾರ್ಗದ ಗಾರೆಬಾಗಿಲು ಈಶ್ವರ, ಉಜ್ಜಯಿನಿ ಮಠದ ರಸ್ತೆಯ ಉಮಾ ಮಹೇಶ್ವರ, ನಗರದ ಹೃದಯ ಭಾಗದ ನೀಲಕಂಠೇಶ್ವರ, ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ, ನಗರೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ಸೇರಿ ವಿವಿಧ ಶಿವ ದೇಗುಲಗಳಲ್ಲಿ ಪೂಜೆಗಳು ನಡೆಯಲಿದೆ.

ಶ್ರಾವಣ ಮಾಸದ ಮೊದಲ ಸೋಮವಾರವಾದ ಆ.13ರಂದು ಶಿವನ ಮೂರ್ತಿಗೆ ಜಲಾಭಿಷೇಕ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾ ಪತ್ರೆ ಅರ್ಚನೆ ಜತೆಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುವುದು ಎಂದು ಶಿವ ದೇಗುಲಗಳ ಅರ್ಚಕರು ತಿಳಿಸಿದ್ದಾರೆ.

ಗಣಪತಿ ದೇಗುಲ, ರಾಯರ ಮಠದಲ್ಲೂ ವಿಶೇಷ: ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ದೊಡ್ಡೊಟ್ಟೆ ಗಣಪತಿ, ಜೆಸಿಆರ್‌ ಬಡಾವಣೆಯ ಗಣಪತಿ ದೇಗುಲಗಳಲ್ಲೂ ಶ್ರಾವಣದ ಪ್ರತಿ ಮಂಗಳವಾರ ಮತ್ತು ಬುಧವಾರ ವಿಶೇಷ ಪೂಜೆಗಳು ನಡೆಯಲಿದೆ. ಅಲ್ಲದೆ, ಪ್ರತಿ ಗುರುವಾರ ಇಲ್ಲಿನ ಚಿಕ್ಕಪೇಟೆ ರಸ್ತೆ ಮಾರ್ಗದಲ್ಲಿ ಇರುವ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಕೂಡ ವಿವಿಧ ರೀತಿಯ ಪೂಜೆ ನಡೆಯಲಿದೆ ಎಂದು ಅರ್ಚಕರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !