ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬದಲು ಕೇರ್‌ ಸೆಂಟರ್‌ ಚಿಕಿತ್ಸೆ

ಹಾಸ್ಟೆಲ್‌ ಬಳಕೆಗೆ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆ
Last Updated 5 ಮೇ 2021, 14:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನೆಯಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ರೋಗಿಗಳಿಂದ ಸೋಂಕು ಹೆಚ್ಚುತ್ತಿದೆ. ಇವರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಿ. ಸೋಂಕು ಹರಡುವುದನ್ನು ತಡೆಗಟ್ಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕು ಕಾಣಿಸಿಕೊಂಡ ಬಹುತೇಕರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಿಮೆ ರೋಗ ಲಕ್ಷಣ ಹೊಂದಿದವರು ಹೊರಗೆ ಸಂಚರಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ತೀವ್ರಗತಿಯಲ್ಲಿ ಪಸರಿಸುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಿ’ ಎಂದು ಸೂಚಿಸಿದರು.

‘ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಪರಿವರ್ತನೆ ಮಾಡಲು ಅವಕಾಶವಿದೆ. ವೈದ್ಯಕೀಯ ಸೌಲಭ್ಯ ಕಲ್ಪಿಸಿ, ಶುಶ್ರೂಷಕರು ಹಾಗೂ ವೈದ್ಯರನ್ನು ನಿಯೋಜಿಸಿ. ಅಗತ್ಯ ಔಷಧೋಪಾಚಾರ ಸಕಾಲಕ್ಕೆ ಸಿಕ್ಕರೆ ಗುಣಮುಖರಾಗುವ ಪ್ರಮಾಣ ಹೆಚ್ಚಾಗುತ್ತದೆ’ ಎಂದು ಸಲಹೆ ನೀಡಿದರು.

ಮತ್ತೊಂದು ಪ್ರಯೋಗಾಲಯ:‘ಕೋವಿಡ್‌ ಪರೀಕ್ಷೆಯನ್ನು ಇನ್ನಷ್ಟು ತ್ವರಿತಗೊಳಿಸಲು ಮುಂದಾಗಿರುವ ಜಿಲ್ಲಾಡಳಿತ ಮತ್ತೊಂದು ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ. ಇದಕ್ಕೆ ಅಂದಾಜು ₹ 7 ಕೋಟಿಯನ್ನು ಮೀಸಲಿಡಲಾಗಿದ್ದು, ಸರ್ಕಾರದ ಅನುಮೋದನೆ ಮಾತ್ರ ಬಾಕಿ ಇದೆ.

‘ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ₹ 3 ಕೋಟಿ, ಅಗತ್ಯ ಸಾಮಗ್ರಿ ಖರೀದಿ ಮತ್ತು ನಿರ್ವಹಣೆಗೆ ₹ 4 ಕೋಟಿ ಮೀಸಲಿಡಲಾಗಿದೆ. ಕೋವಿಡ್ ಆಸ್ಪತ್ರೆಗಳ ನಿರ್ವಹಣೆಗೆ ₹ 5 ಕೋಟಿ, ವೈದ್ಯಕೀಯ ರಕ್ಷಣಾ ಪರಿಕರ, ವೇತನ ಹಾಗೂ ವಾಹನಕ್ಕಾಗಿ ₹ 6.8 ಕೋಟಿ ಹಾಗೂ ಇತರ ಯಂತ್ರೋಪಕರಣಕ್ಕೆ ₹ 1.2 ಕೋಟಿ ಸೇರಿ ₹ 20 ಕೋವಿಡ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಆಮ್ಲಜನಕ ಸಂಗ್ರಹ ಘಟಕ:‘ಜಿಲ್ಲೆಯಲ್ಲಿ ನಿತ್ಯ 6 ಸಾವಿರ ಲೀಟರ್‌ ಆಮ್ಲಜಕದ ಅಗತ್ಯವಿದೆ. ಆದರೆ, ಮೂರು ಸಾವಿರ ಲೀಟರ್‌ ಮಾತ್ರ ಪೂರೈಕೆ ಆಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ನಿತ್ಯ 7 ಸಾವಿರ ಲೀಟರ್‌ ಆಮ್ಲಜನಕ ಒದಗಿಸುವಂತೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರನ್ನು ಕೋರಿಕೊಳ್ಳಲಾಗುವುದು. ಆಮ್ಲಜನಕ ಸಂಗ್ರಹಣಾ ಘಟಕದ ಸ್ಥಾಪನೆಗೆ ಗುರುವಾರ ಸ್ಥಳಪರಿಶೀಲನೆ ಮಾಡಲಾಗುವುದು’ ಎಂದರು.

‘ಕೋವಿಡ್ ರೋಗಿಗಳ ಚಿಕಿತ್ಸೆಗೆ ನೀಡುವ ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ಉಂಟಾಗಿದೆ. ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಈ ಸಮಸ್ಯೆಯ ಇತ್ಯರ್ಥಕ್ಕೆ ಸರ್ಕಾರ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‌ನಾರಾಯಣ ಅವರಿಗೆ ಜವಾಬ್ದಾರಿ ನೀಡಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದರು.

24 ವೈದ್ಯರ ಕೊರತೆ:ಕೋವಿಡ್‌ ನಿರ್ವಹಣೆಗೆ ಜಿಲ್ಲೆಯಲ್ಲಿ 24 ವೈದ್ಯರ ಕೊರತೆ ಎದುರಾಗಿದೆ. ನೇಮಕಾತಿ ಪ್ರಕ್ರಿಯೆ ನಡೆಸಿದರೂ ವೈದ್ಯರು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಹೇಳಿದರು.

‘24 ವೈದ್ಯರ ನೇಮಕಾತಿಗೆ ಎಂಬಿಬಿಎಸ್‌ ಪದವೀಧರರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಇದರಲ್ಲಿ ನಾಲ್ವರು ಸೇವೆಗೆ ಮುಂದೆ ಬಂದಿದ್ದಾರೆ. ಇನ್ನೂ 20 ಹುದ್ದೆಗಳು ಖಾಲಿ ಇದ್ದು, ವೈದ್ಯಕೀಯ ಸೌಲಭ್ಯ ನಿರ್ವಹಣೆಗೆ ಸಮಸ್ಯೆ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಎಎಂಎಸ್‌ ವೈದ್ಯರ ನೇಮಕಾತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಜಿಲ್ಲೆಯಲ್ಲಿ ಆಯುಷ್‌ ವೈದ್ಯರ ನೇಮಕಾತಿಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ಇದ್ದರು.

***

ಸರ್ಕಾರಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸಿಗುತ್ತಿಲ್ಲ. ಸಾವಿರಾರು ರೂಪಾಯಿ ನೀಡಿದ ವ್ಯಕ್ತಿಗೆ ಔಷಧ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ಇದು ಕಾಳಸಂತೆ ದಂಧೆ ಅಲ್ಲವೇ?

ಎಂ.ಚಂದ್ರಪ್ಪ, ಶಾಸಕ, ಹೊಳಲ್ಕೆರೆ

***

ಕೋವಿಡ್‌ ನಿರ್ವಹಣೆಗೆ ಜಿಲ್ಲಾ ಹಂತದಲ್ಲಿ ನೋಡಲ್‌ ಅಧಿಕಾರಿ ನೇಮಕ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಈ ವ್ಯವಸ್ಥೆ ಬಿಬಿಎಂಪಿ ರೀತಿಯಲ್ಲಿ ಕಾರ್ಯನಿರ್ವಹಿಸಬಾರದು ಅಷ್ಟೇ.

ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

***

ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುವ 600 ಸಿಲಿಂಡರ್‌ಗಳು ಜಿಲ್ಲೆಗೆ ಬೇಕಿವೆ. ಸದ್ಯ 265 ಸಿಲಿಂಡರ್‌ ಮಾತ್ರ ಇವೆ. ಇನ್ನೂ 335 ಸಿಲಿಂಡರ್‌ ಒದಗಿಸಿದರೆ ಅನುಕೂಲ.

ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

***

ಕೋವಿಡ್‌ ರೋಗಿಗಳಿಗೆ ಅಗತ್ಯ ಔಷಧ ಸಿಗುತ್ತಿಲ್ಲ. ಆರೋಗ್ಯ ಇಲಾಖೆ ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ಆಮ್ಲಜನಕ ಕೊರತೆ ಎದುರಾಗಿದ್ದು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗೂಳಿಹಟ್ಟಿ ಡಿ.ಶೇಖರ್‌, ಶಾಸಕ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT