ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಪಕ್ಕದಲ್ಲಿ ಮಲಗಿದ್ದೇ ಶ್ರೀರಾಮುಲು ಸಾಧನೆ

ಮೊಳಕಾಲ್ಮುರಿನಲ್ಲಿ ನಡೆದ ಪ್ರಜಾಧ್ವನಿ ಬಹಿರಂಗ ಸಭೆಯಲ್ಲಿ ಡಿಕೆಶಿ ಟೀಕೆ
Last Updated 7 ಫೆಬ್ರುವರಿ 2023, 4:35 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಉಪ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡು ಗೆದ್ದ ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರಕ್ಕೆ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಬೇಕು. ಜತೆಗೆ ಈ ಬಾರಿ ಸೋಲಿಸಲು ಜನರು ಪಣ ತೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ಇಲ್ಲಿ ನಡೆದ ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಗೆದ್ದು ಮಂತ್ರಿಯಾಗಿ ಜನರ ಕೆಲಸ ಮಾಡಿಸಿಕೊಡಲು ವಿಧಾನಸೌಧದಲ್ಲಿ ಮಲಗಬೇಕಾದ ಶ್ರೀರಾಮುಲು ಬದಲಾಗಿ ಬಳ್ಳಾರಿಯ ಕಾಲುವೆ ಪಕ್ಕದಲ್ಲಿ ಮಲಗಿಕೊಂಡರು. ಶ್ರೀರಾಮುಲು ನನಗೆ ಆತ್ಮೀಯ ಸ್ನೇಹಿತನಾಗಿದ್ದು, ಇದೇ ಮುಲಾಜಿನಲ್ಲಿ ಪ್ರಶ್ನೆ ಮಾಡುತ್ತೇನೆ ಸಿನಿಮಾ, ನಿರ್ದೇಶಕ, ಹೀರೋ ತರಹ ಈ ಕ್ಷೇತ್ರಕ್ಕೆ ಬಂದು ಹೋದೆಯಲ್ಲಾ ನಿನ್ನ ಸಾಧನೆ ಏನು ಎಂಬುದನ್ನು ಜನರಿಗೆ ತಿಳಿಸಪ್ಪಾ. ಇಲ್ಲಿನ ಜನರು ಸಮಸ್ಯೆಗಳನ್ನು ಪತ್ರದ ಮೂಲಕ ತಿಳಿಸುವ ಸ್ಥಿತಿ ಉಂಟಾಗಿದೆ’ ಎಂದು ದೂರಿದರು.

‘ಕಾಂಗ್ರೆಸ್ ನೀಡುತ್ತಿರುವ ಗೃಹಲಕ್ಷ್ಮೀ, ಉಚಿತ ವಿದ್ಯುತ್ ಯೋಜನೆಗಳು ಗ್ಯಾರಂಟಿ ಯೋಜನೆಗಳಾಗಿವೆ. ಗ್ಯಾರಂಟಿ ಪತ್ರಕ್ಕೆ ನಾನು ಸಿದ್ದರಾಮಯ್ಯ ಸಹಿ ಹಾಕಿದ್ದು, ಈ ಪತ್ರವನ್ನು ಪ್ರತಿ ಮನೆಗೆ 15 ದಿನಗಳ ಒಳಗಾಗಿ ಮುಟ್ಟಿಸುವ ಕೆಲಸವನ್ನು ಸ್ಥಳೀಯ ನಾಯಕರು ಮಾಡಬೇಕು. ಇದೇ ಜಿಲ್ಲೆಯ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಭದ್ರಾ ಮೇಲ್ದಂಡೆ ಯೋಜನೆಯ ಕ್ರಿಯಾಯೋಜನೆ ₹29 ಸಾವಿರ ಕೋಟಿಗೆ ಹೆಚ್ಚಳ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಇದು ಬಿಜೆಪಿ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ’ ಎಂದರು.

‘ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ ದಿನನಿತ್ಯ ದೇಶದಲ್ಲಿ ಬಡವರು ಪಿಕ್ ಪಾಕೆಟ್ ಒಳಗಾಗುವಂತೆ ಮಾಡಿರುವುದು ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಪ್ರನಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಗಾಳಿಗೆ ತೂರಿದೆ’ ಎಂದು ದೂರಿದರು.

ಪ್ರಚಾರ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಾತನಾಡಿ, ‘ಜನರ ನೋವು, ಮನವಿಗಳನ್ನು ಆಲಿಸಲು ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆ ಹಮ್ಮಿಕೊಂಡಿದ್ದು, 28 ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಿದೆ. ಎಲ್ಲಾ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಬಿಜೆಪಿ ಭ್ರಷ್ಟಾಚಾರಕ್ಕೆ ರೋಸಿ ಹೋಗಿರುವ ಜನರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ತುದಿಗಾನಲ್ಲಿ ನಿಂತಿದ್ದಾರೆ’ ಎಂದರು.

ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ಮುಖಂಡ ಡಾ.ಬಿ. ಯೋಗೇಶ್ ಬಾಬು ಮಾತನಾಡಿದರು. ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಎಚ್.ಎಂ. ರೇವಣ್ಣ, ಡಿ. ಸುಧಾಕರ್, ಶಾಸಕ ಟಿ. ರಘುಮೂರ್ತಿ, ಜಯಮ್ಮ ಬಾಲರಾಜ್, ನಲಪಾಡ್ ಹ್ಯಾರೀಸ್, ಉಲ್ಲಾಸ್ ಕಾರೇಹಳ್ಳಿ, ನಿಖಿಲ್ ರಾಜ್, ಜಿ.ಎಸ್. ಮಂಜುನಾಥ್, ತಾಜ್ ಪೀರ್, ಭಕ್ತರಾಮೇಗೌಡ, ಜಯಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT