ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಫಲಿತಾಂಶ ಬಂದರೆ ಮಾನ್ಯತೆ ರದ್ದು

ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ
Last Updated 19 ಡಿಸೆಂಬರ್ 2018, 13:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ತೋರುವ ಅನುದಾನಿತ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಎಚ್ಚರಿಕೆ ನೀಡಿದರು.

2017-18 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದ ವಿಶ್ಲೇಷಣೆ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ಜಿಲ್ಲೆಯಲ್ಲಿ ಶೇ 81ರಷ್ಟು ಫಲಿತಾಂಶ ಬಂದಿತ್ತು. ರಾಜ್ಯ ಮಟ್ಟದಲ್ಲಿ ಜಿಲ್ಲೆ 16 ನೇ ಸ್ಥಾನ ಪಡೆದಿತ್ತು. ಜಿಲ್ಲೆಯ 51 ಶಾಲೆಗಳು ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ. ಈ ಪೈಕಿ 9 ಸರ್ಕಾರಿ ಶಾಲೆ, 11 ಅನುದಾನ ರಹಿತ ಹಾಗೂ 31 ಅನುದಾನಿತ ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಬಂದಿದೆ.

‘ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಸಾಧನೆ ತೋರಿವೆ. ಸರ್ಕಾರದ ಅನುದಾನ, ಸವಲತ್ತು ಪಡೆಯುವ ಅನುದಾನಿತ ಶಾಲೆಗಳೇ ಕಳಪೆ ಸಾಧನೆ ತೋರುತ್ತಿವೆ. ಶಾಲಾ ಆಡಳಿತ ಮಂಡಳಿ ಕೇವಲ ಅನುದಾನ ಪಡೆಯುವ ಉದ್ದೇಶದಿಂದ ಮಕ್ಕಳನ್ನು ದಾಖಲಿಸಿಕೊಳ್ಳುತ್ತಿವೆ. ಆದರೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಅನುದಾನ ರಹಿತ ಶಾಲೆಗಳು, ಅರ್ಹ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿಲ್ಲ. ಶಿಕ್ಷಕರಿಗೆ ಕಡಿಮೆ ವೇತನ ನೀಡುವುದರಿಂದ ಉತ್ತಮ ಶಿಕ್ಷಕರು ಸಿಗುತ್ತಿಲ್ಲ. ವಿಷಯಾಧಾರಿತ ಶಿಕ್ಷಕರ ಸಂಖ್ಯೆ ಇಲ್ಲದಿರುವುದರಿಂದ ಉತ್ತಮ ಫಲಿತಾಂಶ ಬರುತ್ತಿಲ್ಲ. ಮಕ್ಕಳ ಶೈಕ್ಷಣಿಕ ಜೀವನದೊಂದಿಗೆ ಚೆಲ್ಲಾಟವಾಡುವ ಶಾಲೆಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲೆಯ ಅನುದಾನಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ, ಹಾಜರಾತಿ ಪ್ರಮಾಣ ಹಾಗೂ ಗೈರು ಹಾಜರಿ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಕಲೆಹಾಕಬೇಕು. ಶಾಲೆಯಿಂದ ಹೊರಗೆ ಉಳಿದ ಮಕ್ಕಳು ಎಲ್ಲಿಗೆ ಹೋದರು ಎಂಬ ವಿವರವನ್ನು ವಾರದೊಳಗೆ ಸಲ್ಲಿಸಬೇಕು. ಲೋಪ ಎಸಗಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ವೇತನ ನೀಡುವಂತೆ ಸೂಚನೆ

ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಶಿಕ್ಷಕರಿಗೆ ಕಾಲಕಾಲಕ್ಕೆ ವೇತನ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚನೆ ನೀಡಿದರು.

‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಬೇಕು. ಮಕ್ಕಳಿಗೆ ಸಮರ್ಪಕ ಶಿಕ್ಷಣ ಒದಗಿಸುವಂತೆ ಸಲಹೆ ಕೊಡಬೇಕು. ತಪ್ಪಿತಸ್ಥ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ‘ಶಾಲೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟುಬಿಡಿ. ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ. ನಿಮ್ಮ ಶಾಲೆಯ ಮಕ್ಕಳನ್ನು ನಾವೇ ಸಮೀಪದ ಸರ್ಕಾರಿ ಶಾಲೆಗಳಿಗೆ ದಾಖಲಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತೇವೆ’ ಎಂದರು.

ಗುಳೆ ಮಾಹಿತಿಗೆ ಕೋರಿಕೆ

ಕೆಲಸ ಅರಸಿ ಹೊರ ಜಿಲ್ಲೆ, ರಾಜ್ಯಗಳಿಗೆ ಗುಳೆ ಹೋಗುತ್ತಿರುವ ಕುಟುಂಬಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತಿ ಸಿಇಒ ಪಿ.ಎನ್.ರವೀಂದ್ರ ಶಿಕ್ಷಕರಿಗೆ ಸೂಚನೆ ನೀಡಿದರು.

‘ಪೋಷಕರು ಗುಳೆ ಹೋದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯುಂಟಾಗುವ ಸಾಧ್ಯತೆ ಇದೆ. ಶಾಲಾ ಶಿಕ್ಷಕರು ಅಂತಹ ಕುಟುಂಬಗಳ ಪಟ್ಟಿ ಮಾಡಬೇಕು. ಮಕ್ಕಳನ್ನು ಗುರುತಿಸಿದರೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣ ಮುಂದುವರಿಸಲು ಅನುಕೂಲ ಮಾಡಿಕೊಡಲಾಗುವುದು’ ಎಂದು ಹೇಳಿದರು.

ಡಯಟ್ ಪ್ರಾಂಶುಪಾಲ ಕೋದಂಡರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT