ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ನಡುಗಿಸುವ ಬೀದಿ ನಾಯಿಗಳು

ಜಿಲ್ಲೆಯಲ್ಲಿ 11,739 ಜನರ ಮೇಲೆ ನಾಯಿ ದಾಳಿ – ಚಳ್ಳಕೆರೆಯಲ್ಲಿ ಅತ್ಯಧಿಕ ಪ್ರಕರಣ
Last Updated 4 ಜುಲೈ 2022, 7:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಳ್ಳಿ ಪರದೆ ಮೇಲೆ ‘777 ಚಾರ್ಲಿ’ ಅಬ್ಬರಿಸುತ್ತಿದ್ದರೆ ಇತ್ತ ಇಡೀ ಊರನ್ನೇ ಸಾಮ್ರಾಜ್ಯ ಮಾಡಿಕೊಂಡಿರುವ ‘ಬೀದಿ ನಾಯಿ’ಗಳು ನಾಗರಿಕರಲ್ಲಿ ನಡುಕ ಸೃಷ್ಟಿಸಿವೆ.

‘ತೆರೆಯ ಮೇಲೆ ನಾಯಿ ತುಂಟಾಟ, ಕರುಣೆ, ಪ್ರೀತಿ ನೋಡಿ ಕಣ್ಣೀರಾಗಿ ಅದೇ ಗುಂಗಿನಲ್ಲಿ ಬೈಕ್‌ನಲ್ಲಿ ಮನೆಗೆ ತೆರಳುವಾಗ ಗುಂಪಾಗಿ ಓಡಿಸಿಕೊಂಡು ಬಂದ ಬೀದಿ ನಾಯಿಗಳು ಒಂದು ಕ್ಷಣಕ್ಕೆ ಸಾವಿನ ಮನೆಯ ಕದ ತಟ್ಟಿಸಿದವು’ ಎಂದು ಚಿತ್ರಮಂದಿರದಿಂದ ಮನೆಗೆ ತೆರಳುವಾಗಿನ ಘಟನೆ ತೆರೆದಿಟ್ಟರು ಚಿತ್ರಪ್ರೇಮಿ ಕಾರ್ತಿಕ್‌.

ನಗರದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಿಗದಷ್ಟು ಏರಿಕೆ ಕಾಣುತ್ತಿದೆ. ಯಾವ ಬೀದಿಯಲ್ಲಿ ನಾಯಿಗಳಿಲ್ಲ ಎಂದು ಹುಡುಕಿ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ. ಅದಕ್ಕೆ ಬಹುತೇಕರು ಒಳಮಾರ್ಗಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್‌ ಹಾಕಿ ಬದಲಿ ಮಾರ್ಗ ಕಂಡುಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕುರಿಗಳ ಮೇಲೆ, ಮಕ್ಕಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಕಳೆದ ತಿಂಗಳು ನಗರದ ಪ್ರವಾಸಿ ಮಂದಿರ ಮುಂಭಾಗ ಬೈಕ್‌ಗೆ ಅಡ್ಡಬಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋದ ಬೈಕ್‌ ಸವಾರ ಬಿದ್ದು ಬೆನ್ನು, ಕೈ–ಕಾಲು, ಭುಜ ಸೇರಿ ದೇಹದ ಹಲವು ಭಾಗಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ಇನ್ನೂ ಸಂಪೂರ್ಣ ಗುಣಮುಖನಾಗಿಲ್ಲ. ಜಿಲ್ಲೆಯ ಒಂದಲ್ಲ ಒಂದು ಕಡೆ ನಿತ್ಯವೂ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

ನಗರದ ಎಲ್ಲೆಡೆ ಕಳೆದ ಮೂರು ತಿಂಗಳಿನಿಂದಲೂ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಆಜಾದ್‌ ನಗರ, ಚೇಳುಗುಡ್ಡ, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಬುರಜುನಹಟ್ಟಿ, ಜೆಸಿಆರ್‌ ಬಡಾವಣೆ, ಬ್ಯಾಂಕ್‌ ಕಾಲೊನಿ, ಕೆಳಗೋಟೆ, ಐಯುಡಿಪಿ ಬಡಾವಣೆ, ಕಾಮನಬಾವಿ ಬಡಾವಣೆ, ಕೋಟೆ ಮುಖ್ಯ ರಸ್ತೆ ಸೇರಿ ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳು ಕಾರುಬಾರು ನಡೆಸುತ್ತಿವೆ. ಕೊಳಚೆ ಪ್ರದೇಶಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಬಹುತೇಕ ಕಡೆ ಮಕ್ಕಳೇ ನಿರಂತರವಾಗಿ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ.

ಇನ್ನೂ ಮುನ್ಸಿಪಲ್ ಕಾಲೊನಿ, ಹಳೆ ಧರ್ಮಶಾಲಾ ರಸ್ತೆ, ಬುದ್ಧನಗರ, ಸಿ.ಕೆ. ಪುರ ಬಡಾವಣೆ, ಪ್ರಸನ್ನ ಚಿತ್ರಮಂದಿರದ ರಸ್ತೆ, ಮಟನ್‌ ಮಾರುಕಟ್ಟೆ, ಖಾಸಗಿ ಬಸ್‌ ನಿಲ್ದಾಣ, ಎಪಿಎಂಸಿ ಆವರಣ ಸೇರಿ ಕೊಳೆಗೇರಿ ಪ್ರದೇಶ, ಖಾಲಿ ನಿವೇಶನ ಹಾಗೂ ಮೋರಿಗಳು ಹೆಚ್ಚಾಗಿರುವ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿವೆ. ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುತ್ತಿವೆ.

ಹಳೇ ಚಿತ್ರದುರ್ಗ ಭಾಗದ ಬೀದಿಗಳಲ್ಲಿ, ಮನೆಯ ಮುಂಭಾಗ ನಾಯಿಗಳ ಹಿಂಡು ಸದಾ ಇರುತ್ತವೆ. ಚಿಕ್ಕಮಕ್ಕಳು ಮನೆಯ ಅಂಗಳದಲ್ಲಿ ನೆಮ್ಮದಿಯಾಗಿ ಆಟವಾಡದ ಸ್ಥಿತಿ ನಿರ್ಮಾಣವಾಗಿದೆ. ಕೈಯಲ್ಲಿ ತಿಂಡಿ ತಿನಿಸುಗಳಿದ್ದರೆ ಏಕಾಏಕಿ ದಾಳಿ ನಡೆಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಬುರುಜನಹಟ್ಟಿಯಲ್ಲಿ ಮಗುವಿನ ಮೇಲೆ ನಾಯಿಗಳು ದಾಳಿ ನಡೆಸಿ, ಗಾಯಗೊಳಿಸಿ ಆತಂಕ ಸೃಷ್ಟಿಸಿವೆ.

ರಾತ್ರಿ ವೇಳೆ ಮಾತ್ರ ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಎರಗುತ್ತಿದ್ದ ನಾಯಿಗಳು ಇತ್ತೀಚಿಗೆ ಹಗಲಿನಲ್ಲೂ ದಾಳಿ ನಡೆಸುತ್ತಿವೆ. ಇದರಿಂದ ಗಾಯಗೊಂಡವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ನಾಯಿ ಕಡಿತದಿಂದಲೂ ಕೆಲ ನಾಗರಿಕರು ನೋವು ಅನುಭವಿಸಿ, ಚಿಕಿತ್ಸೆ ಪಡೆದಿದ್ದಾರೆ.

ಹತ್ತಾರು ನಾಯಿಗಳು ಮಧ್ಯರಾತ್ರಿ ಒಟ್ಟಿಗೆ ಕೂಗುವುದರಿಂದ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಬಡಾವಣೆಗಳಲ್ಲಿ ಮನೆಯ ಕಾಂಪೌಂಡ್‌ಗಳನ್ನು ಆಶ್ರಯತಾಣವಾಗಿಸಿಕೊಂಡಿವೆ. ಮಳೆ ಬಂದಾಗ ಕಾಂಪೌಂಡ್‌ ಒಳಗೆ ಬರುವ ನಾಯಿಗಳು ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡುವುದು ಸಾಮಾನ್ಯವಾಗಿದೆ.

ಹೊಸ ಬಡಾವಣೆಗಳಲ್ಲಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಬೀಡುಬಿಡುವ ನಾಯಿಗಳು ಬೆಳಿಗ್ಗೆಯಿಂದ ಸುತ್ತಾಡಿ ಸಂಜೆ ವೇಳೆಗೆ ಮನೆಗಳಿಗೆ ಬಂದು ಬಿಡುತ್ತವೆ. ರಾತ್ರಿ ಹೊತ್ತು ಕಿತ್ತಾಡುವುದು, ಗಲೀಜು ಮಾಡುವುದರಿಂದ ಪಕ್ಕದ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ನಾಯಿಗಳ ದಾಳಿಗೆ ಒಳಗಾದವರ ಸಂಖ್ಯೆ ಹೆಚ್ಚಾಗುತ್ತಿದೆ. 2018ರಲ್ಲಿ 5,492, 2019ರಲ್ಲಿ 7,723, 2020ರಲ್ಲಿ 6,778 ಜನರು ಸಮಸ್ಯೆಗೆ ಒಳಗಾಗಿದ್ದಾರೆ. ಘಟನೆಗಳು ನಿರಂತರವಾಗಿ ಮರುಕಳಿಸುತ್ತಿರುವುದರಿಂದ ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

‘ಶೀಘ್ರದಲ್ಲೇ ಕ್ರಮ’: ಭರವಸೆಯೇ ಉತ್ತರ

ನಗರದಲ್ಲಿ ಹೆಚ್ಚಾಗುತ್ತಿರುವ ಬೀದಿನಾಯಿಗಳ ಹಾವಳಿಗೆ ಬೇಸತ್ತಿರುವ ಜನರು ನಗರಸಭೆಗೆ ಸಲ್ಲಿಸುವ ಮನವಿಗಳಿಗೆ ‘ಶೀಘ್ರದಲ್ಲೇ ಕ್ರಮ’ ಎಂಬ ಸಿದ್ಧ ಭರವಸೆಯ ಉತ್ತರ ಸಿಗುತ್ತಿದೆ.ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಅವಕಾಶ ಇಲ್ಲ ಎನ್ನುತ್ತಲೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರತಿ ಬಾರಿಯೂ ಆಟೊಗಳಲ್ಲಿ ಸಂಚರಿಸಲು ಆಗುವುದಿಲ್ಲ. ರಾತ್ರಿ ಇರಲಿ ಬೆಳಗ್ಗಿನ ಸಮಯದಲ್ಲಿ ಸಹ ಒಂಟಿಯಾಗಿ ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ನಗರದಲ್ಲಿನ ಸಮಸ್ಯೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಸೂಕ್ತ ಕ್ರಮವಹಿಸಲು ನೂರೆಂಟು ಕಾರಣ ಹೇಳುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ನಿದ್ದೆಗೆಡಿಸಿದ ಬೀದಿನಾಯಿಗಳು

ಜಿ. ಶ್ವೇತಾ

ಹೊಸದುರ್ಗ: ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಆತಂಕದಲ್ಲಿ ದಿನದೂಡುತ್ತಿದ್ದಾರೆ.

ತಾಲ್ಲೂಕಿನ ಬಾಗೂರು, ಹೊಸದುರ್ಗ ಪಟ್ಟಣ‌ ಸೇರಿದಂತೆ ಹಲವೆಡೆ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುತ್ತಮುತ್ತ ಹಳ್ಳಿಗಳ ಜನರು ಅಗತ್ಯ ವಸ್ತು ಖರೀದಿ, ಆಸ್ಪತ್ರೆ ಸೇರಿ ಹಲವು ಸೇವೆಗಳಿಗೆ ಬಾಗೂರಿಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ.

ರಸ್ತೆಯಲ್ಲಿ ಬೀದಿ ನಾಯಿಗಳು ಯಾವುದೇ ಭಯವಿಲ್ಲದೇ ಅಡ್ಡಾಡುವುದು ಅಪಘಾತಕ್ಕೆ ಕಾರಣವಾಗುತ್ತಿವೆ. ಗುಂಪು ಗುಂಪಾಗಿ ಮಲಗುವುದರಿಂದ ಮಕ್ಕಳು ಮತ್ತು ವೃದ್ಧರು ಓಡಾಡಲು ಹರಸಾಹಸ ಪಡಬೇಕಾಗಿದೆ. ರಾತ್ರಿ ವೇಳೆ ಅವುಗಳ ಕೂಗಾಟಕ್ಕೆ ಎಷ್ಟೋ ದಿನ ನಿದ್ದೆಯಿಲ್ಲದಂತಾಗಿದೆ. ಕೂಡಲೇ ಅಧಿಕಾರಿಗಳು ಬೀದಿನಾಯಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

‘ಈ ಮೊದಲು ಬೀದಿನಾಯಿಗಳ ಸಂಖ್ಯೆ ಕಡಿಮೆಯಿತ್ತು. ಕಳೆದ ಎರಡು ತಿಂಗಳಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ, ಅವುಗಳನ್ನು ಹಿಡಿಸಲು ಕ್ರಮವಹಿಸಲಾಗುತ್ತದೆ’ ಎಂದು ಬಾಗೂರು ಪಿಡಿಒ ಕುಮಾರ್‌ ತಿಳಿಸಿದರು.

ಬೀದಿನಾಯಿ ಹಾವಳಿ ಹೆಚ್ಚಳ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಮಟನ್‌, ಚಿಕನ್‌ ತ್ಯಾಜ್ಯ ಮತ್ತು ಹೊಟೇಲ್, ಗೂಡಂಗಡಿಗಳಲ್ಲಿ ಉಳಿದ ಆಹಾರ ಪದಾರ್ಥವನ್ನು ಎಲ್ಲೆಂದರಲ್ಲೇ ರಸ್ತೆಗೆ ಚೆಲ್ಲುತ್ತಿರುವ ಪರಿಣಾಮ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ.

ನಗರದ ನೆಹರೂ ವೃತ್ತದ ಮುಖ್ಯರಸ್ತೆ, ಹಳೆಟೌನ್‌, ಮದಕರಿ ನಗರ, ಗಾಂಧಿ ನಗರ, ಚಿತ್ರಯ್ಯನ ಹಟ್ಟಿ, ಕಾಟಪ್ಪನಹಟ್ಟಿ, ಅಂಬೇಡ್ಕರ್ ನಗರ, ವಿಠಲ ನಗರ, ವಾಲ್ಮೀಕಿ ನಗರ, ರಹೀಂ ನಗರದ ರಸ್ತೆ ಮಧ್ಯೆಯೇ ಬೀದಿನಾಯಿಗಳು ನಿಲ್ಲುವುದು ಸಾಮಾನ್ಯವಾಗಿದೆ.

ಹಸಿ–ಒಣ ಕಸ ಸಂಗ್ರಹ ಹಾಗೂ ವಿಲೇವಾರಿ ಮತ್ತು ಸ್ವಚ್ಛತೆ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ನಾಯಿಗಳಿಗೆ ವರವಾಗಿದೆ. ಬೀದಿಬದಿ ವ್ಯಾಪಾರಿಗಳು ಪದಾರ್ಥವನ್ನು ಎಲ್ಲೆಂದರಲ್ಲೇ ಬಿಸಾಡುತ್ತಾರೆ. ಇವುಗಳನ್ನು ತಿನ್ನಲು ಬೀದಿನಾಯಿಗಳು ಗುಂಪುಗುಂಪಾಗಿ ಸೇರುತ್ತಿವೆ. ಇದರಿಂದ ಬೆಳಿಗ್ಗೆ–ಸಂಜೆ ಹೊತ್ತಿನಲ್ಲಿ ಸಣ್ಣ ಪುಟ್ಟ ದಿನಸಿ ವಸ್ತುಗಳನ್ನು ತರಲು ಅಂಗಡಿಗೆ ಹೋಗಲು ಮಹಿಳೆ–ಮಕ್ಕಳು ಭಯ ಬೀಳುತ್ತಿದ್ದಾರೆ.

ಬೀದಿ ನಾಯಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಬೇಕರಿ ಹಾಗೂ ಇತರ ಆಹಾರ ಪದಾರ್ಥಗಳ ಮಳಿಗೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ನಗರಸಭೆ ಆರೋಗ್ಯ ಹಿರಿಯ ನಿರೀಕ್ಷ ಮಹಾಲಿಂಗಪ್ಪ.

ಜಿಲ್ಲೆಯಲ್ಲಿ ಬೀದಿ ಶ್ವಾನಗಳ ಸಂಖ್ಯೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ನಾಯಿ ದಾಳಿಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ರೀತಿಯ ಔಷಧದ ಕೊರತೆ ಎದುರಾಗಿಲ್ಲ. ಚಿಕಿತ್ಸೆ ಪಡೆದವರು ಶೀಘ್ರ ಗುಣಮುಖರಾಗುತ್ತಿದ್ದಾರೆ.

ಡಾ.ರಂಗನಾಥ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಬೀದಿನಾಯಿ ನಿಯಂತ್ರಣಕ್ಕೆ ಸಿದ್ಧತೆ ನಡೆಸಲಾಗಿದೆ. 1,500 ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದು ಹಾಕಲು ಟೆಂಡರ್‌ ಕರೆಯಲಾಗಿದೆ. ಶೀಘ್ರ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತದೆ.

ಜೆ.ಟಿ. ಹನುಮಂತರಾಜು, ನಗರಸಭೆ ಪೌರಾಯುಕ್ತ, ಚಿತ್ರದುರ್ಗ

ಬೀದಿನಾಯಿ ಹಾವಳಿ ಹೆಚ್ಚಾಗಿದ್ದು, ಪತ್ರಿಕೆ ವಿತರಣೆ ಮಾಡುವುದು ಕಷ್ಟವಾಗಿದೆ. ಗುಂಪಾಗಿ ಬರುವ ನಾಯಿಗಳನ್ನು ಹೆದರಿಸೋದು ಕಷ್ಟ. ಪತ್ರಿಕೆ ಬಂಡಲ್‌ ಸಹಿತ ಬಿದ್ದ ಘಟನೆಗಳು ಸಾಕಷ್ಟಿವೆ.

ತಿಪ್ಪೇಸ್ವಾಮಿ, ಪತ್ರಿಕಾ ವಿತರಕ, ಚಿತ್ರದುರ್ಗ

ತಿಂಗಳ ಹಿಂದೆ ಕರ್ತವ್ಯ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ನನ್ನ ಪತಿಯ ಮೇಲೆ ನಾಯಿಗಳು ದಾಳಿ ನಡೆಸಿವೆ. ಈ ವೇಳೆ ಬಿದ್ದು ಗಾಯಗೊಂಡಿದ್ದು, ಇನ್ನೂ ನೋವನ್ನು ಅನುಭವಿಸುತ್ತಿದ್ದಾರೆ. ನಗರಸಭೆ ಕೂಡಲೇ ಕ್ರಮವಹಿಸಲಿ.

ಆರ್‌. ಶಶಿಕಲಾ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT