ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಚೇತರಿಕೆ ಕಾಣದ ಬೀದಿಬದಿ ವ್ಯಾಪಾರ

Last Updated 30 ನವೆಂಬರ್ 2020, 1:43 IST
ಅಕ್ಷರ ಗಾತ್ರ
ADVERTISEMENT
""
""

ಚಿತ್ರದುರ್ಗ: ‘ಮನೆಯ ಹೊರಗೆ ಆಹಾರ ಸೇವಿಸಲು ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಸೋಂಕಿನ ಭೀತಿ ಇನ್ನೂ ಜನರನ್ನು ಕಾಡುತ್ತಿದೆ. ವಹಿವಾಟು ಅರ್ಧದಷ್ಟು ಕುಸಿದಿದ್ದು, ಅಂಗಡಿ ಬಾಡಿಗೆ ಪಾವತಿಸುವುದೂ ಕಷ್ಟವಾಗಿದೆ...’

ತುರುವನೂರು ರಸ್ತೆ ಬದಿಯಲ್ಲಿ ಫಾಸ್ಟ್‌ಫುಡ್‌ ತಯಾರಿಸುವ ಗುರುಮೂರ್ತಿ ಅವರ ನೋವಿನ ನುಡಿಗಳಿವು.

ಕೋವಿಡ್‌ ಬಳಿಕ ಬೀದಿ ಬದಿ ವಹಿವಾಟು ನಿರೀಕ್ಷೆಯಷ್ಟು ಚೇತರಿಕೆ ಕಂಡಿಲ್ಲ. ಜನಸಂಚಾರ ಸಹಜ ಸ್ಥಿತಿಗೆ ಮರಳಿದೆಯಾದರೂ ವಹಿವಾಟು ನಡೆಯುತ್ತಿಲ್ಲ. ಜಿಲ್ಲೆಯ ಬಹುತೇಕ ಬೀದಿ ಬದಿ ವ್ಯಾಪಾರಿಗಳ ನೋವು ಇದಕ್ಕಿಂತ ಭಿನ್ನವಾಗಿಲ್ಲ.

ಗುರುಮೂರ್ತಿ ಅವರು ಮೂಲತಃ ಹಿರೇಗುಂಟನೂರು ಹೋಬಳಿಯ ಹುಣಸೇಘಟ್ಟದವರು. ಫಾಸ್ಟ್‌ಫುಡ್‌ ತಯಾರಿಸುವ ನೈಪುಣ್ಯ ಕಲಿತ ಬಳಿಕ ಬೀದಿಬದಿಯಲ್ಲಿ ಅಂಗಡಿ ತೆರೆದಿದ್ದರು. ಎರಡು ವರ್ಷಗಳಿಂದ ತುರವನೂರು ಗೇಟ್‌ ಸಮೀಪ ಫಾಸ್ಟ್‌ಫುಡ್‌ ತಯಾರಿಸುತ್ತಿದ್ದರು. ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ ಮೊದಲು ನಡೆಯುತ್ತಿದ್ದ ವಹಿವಾಟಿನ ಅರ್ಧದಷ್ಟು ವ್ಯವಹಾರ ಈಗ ನಡೆಯುತ್ತಿಲ್ಲ.

‘ಫಾಸ್ಟ್‌ಫುಡ್‌ಗೆ ಮನೆಯಲ್ಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ. ಸಂಜೆಯ ಬಳಿಕ ವ್ಯಾಪಾರ ಆರಂಭವಾದರೂ ಸಿದ್ಧತೆ ಬೆಳಿಗ್ಗೆಯಿಂದ ನಡೆಯುತ್ತದೆ. ಈ ಮೊದಲು ನಾಲ್ವರನ್ನು ಸಹಾಯಕ್ಕೆ ಇಟ್ಟುಕೊಂಡಿದ್ದೆವು. ವಹಿವಾಟು ಕುಸಿದಿದ್ದರಿಂದ ಒಬ್ಬರನ್ನು ಮಾತ್ರ ಕೆಲಸಕ್ಕೆ ಇಟ್ಟುಕೊಂಡಿದ್ದೇವೆ. ವೆಚ್ಚ ಕಳೆದು ಲಾಭ ಪಡೆಯುವುದು ಕಷ್ಟವಾಗಿದೆ’ ಎನ್ನುತ್ತಾರೆ ಬಿ.ಡಿ.ರಸ್ತೆಯ ಫಾಸ್ಟ್‌ಫುಡ್‌ ತಯಾರಕ ಮಹೇಶ್‌.

ಗೋಬಿ ಹಾಗೂ ಪಾನಿಪುರಿ ಮಾರಾಟ ಮಾಡುವ ಮಹೇಶ್‌, ಹಲವು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ವಿಭಿನ್ನ ರುಚಿಗೆ ಮಾರುಹೋದ ಅನೇಕರು ಇವರ ಸ್ಟಾಲ್‌ ಅರಸಿ ಬರುತ್ತಿದ್ದರು. ಇಷ್ಟಪಟ್ಟು ಪಾನಿಪುರಿ ಸೇವಿಸುವ ಗ್ರಾಹಕರು ಈಗ ಅಂಗಡಿಯತ್ತ ಸುಳಿಯುತ್ತಿಲ್ಲ. ಇಂದಲ್ಲ ನಾಳೆ ವ್ಯಾಪಾರ ಮೊದಲಿನ ಸ್ಥಿತಿಗೆ ಮರಳಬಹುದು ಎಂಬ ಆಶಾಭಾವನೆಯಿಂದ ಕಾಯುತ್ತಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಹಲವು ಉದ್ಯಮಗಳು ನೆಲಕಚ್ಚಿವೆ. ಇದರಲ್ಲಿ ಆಹಾರ ಮಾರಾಟ ಮಾಡುವ ವ್ಯಾಪಾರ ಮಾತ್ರ ಪಾತಾಳ ಕಂಡಿದೆ. ಸೋಂಕಿನ ಭೀತಿಯಲ್ಲಿರುವ ಜನರು ಮನೆಯಿಂದ ಹೊರಗೆ ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗೇ ಆಹಾರ ಸೇವಿಸುವ ಅನಿವಾರ್ಯ, ಆಸೆ ಚಿಗುರಿದರೆ ಹೋಟೆಲ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೋಟೆಲ್‌ ಉದ್ಯಮದಂತೆ ಫುಟ್‌ಪಾತ್‌ನಲ್ಲಿ ನಡೆಯುವ ಫಾಸ್ಟ್‌ಫುಡ್‌ ಮಾರಾಟ ಚೇತರಿಕೆ ಕಾಣುತ್ತಿಲ್ಲ.

ಚಳ್ಳಕೆರೆ ಗೇಟ್‌, ಕಲಾ ಮತ್ತು ವಿಜ್ಞಾನ ಕಾಲೇಜು, ಜಿಲ್ಲಾ ಕ್ರೀಡಾಂಗಣ ರಸ್ತೆ, ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ, ದಾವಣಗೆರೆ ರಸ್ತೆ, ಹೊಳಲ್ಕೆರೆ ಮಾರ್ಗದಲ್ಲಿ ಹಲವು ಫಾಸ್ಟ್‌ಫುಡ್‌ಗಳಿದ್ದವು. ಗಾಂಧಿ ವೃತ್ತದ ಸಮೀಪ ಸಣ್ಣ ಮಳಿಗೆಯನ್ನು ತೆರೆದು ಸಾವಿರಾರು ರೂಪಾಯಿ ವಹಿವಾಟು ನಡೆಸುತ್ತಿದ್ದರು. ಇಂತಹ ಹಲವು ಮಳಿಗೆಯಲ್ಲಿ ನಿರೀಕ್ಷೆಯಂತೆ ವಹಿವಾಟು ವೃದ್ಧಿಸಿಲ್ಲ.

ನಗರಸಭೆ ಸಿಬ್ಬಂದಿ ನಿತ್ಯ ಜಕಾತಿ ಸಂಗ್ರಹ ಮಾಡುತ್ತಿದ್ದಾರೆ. ಆಗಾಗ ಪೊಲೀಸರು ಅಂಗಡಿ ಬಳಿ ಬಂದು ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ. ವಿನಾ ಕಾರಣ ಕಿರಿಕಿರಿ ಮಾಡುತ್ತಾರೆ ಎಂಬ ಆರೋಪಗಳೂ ಇವೆ. ಎಲ್ಲ ಸಂಕಷ್ಟಗಳನ್ನು ವ್ಯಾಪಾರಿಗಳು ನುಂಗಿಕೊಂಡೇ ಬೀದಿಬದಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಚಿತ್ರದುರ್ಗದ ಬೀದಿ ಬದಿಯ ಫಾಸ್ಟ್‌ಫುಡ್‌ ಅಂಗಡಿ ಎದುರು ವಿರಳವಾಗಿರುವ ಗ್ರಾಹಕರು

ಮನೆಯಲ್ಲೇ ಫಾಸ್ಟ್‌ಫುಡ್‌

ಪಾನಿಪುರಿ, ಗೋಬಿಮಂಚೂರಿ ಸೇರಿ ಇತರ ಫಾಸ್ಟ್‌ಫುಡ್‌ಗಳನ್ನು ಮನೆಯಲ್ಲೇ ತಯಾರಿಸುವ ಕೌಶಲವನ್ನು ಬಹುತೇಕರು ರೂಢಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕಲಿತ ಈ ಕೌಶಲದಿಂದಲೂ ಬೀದಿ ಬದಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

‘ಫಾಸ್ಟ್‌ಫುಡ್‌ಗೆ ಅಗತ್ಯವಿರುವ ವಸ್ತುಗಳನ್ನು ಅನೇಕರು ಖರೀದಿಸಿ ಮನೆಗೆ ಕೊಂಡೊಯ್ಯುತ್ತಾರೆ. ಅಗತ್ಯ ಸಂದರ್ಭದಲ್ಲಿ ತಯಾರಿಸಿಕೊಂಡು ಮನೆಯಲ್ಲೇ ಸೇವಿಸುತ್ತಿದ್ದಾರೆ. ಇದು ಆರೋಗ್ಯಕ್ಕೂ ಒಳಿತು ಎಂಬ ಭಾವನೆ ಮೂಡಿದೆ. ಹೀಗಾಗಿ, ಮೊದಲಿನಂತೆ ಬೀದಿಬದಿ ಅಂಗಡಿಗಳ ಬಳಿ ಗ್ರಾಹಕರು ಸುಳಿಯುತ್ತಿಲ್ಲ’ ಎಂಬುದು ಮತ್ತೊಬ್ಬ ವ್ಯಾಪಾರಿ ವೆಂಕಟೇಶ್‌ ಅವರ ವಿವರಣೆ.

ದುಬಾರಿಯಾದ ಪದಾರ್ಥ

ಫಾಸ್ಟ್‌ಫುಡ್‌ಗೆ ಬಳಕೆ ಮಾಡುವ ಹಲವು ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದು ಕೂಡ ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ.

‘ಎಣ್ಣೆ, ಬೇಳೆ ಕಾಳು, ಮಸಾಲೆ ಪದಾರ್ಥ ಸೇರಿ ಹಲವು ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಈರುಳ್ಳಿ ಸೇರಿ ಇತರ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಫಾಸ್ಟ್‌ಫುಡ್‌ ಬೆಲೆಯನ್ನು ಹೆಚ್ಚಿಸುವ ಸ್ಥಿತಿ ಈಗಿಲ್ಲ. ಇರುವ ಗ್ರಾಹಕರನ್ನು ಕಳೆದುಕೊಂಡರೆ ಎಂಬ ಆತಂಕವಿದೆ. ಹೀಗಾಗಿ, ಲಾಭದ ನಿರೀಕ್ಷೆಗಿಂತ ವ್ಯಾಪಾರ ಉಳಿಸಿಕೊಳ್ಳಲು ಒತ್ತು ನೀಡುತ್ತಿದ್ದೇವೆ’ ಎನ್ನುತ್ತಾರೆ ಮಹೇಶ್‌.

***

ಒಂದೂವರೆ ದಶಕದಿಂದ ಟೀ– ಕಾಫಿ ಮಾರಾಟ ಮಾಡುತ್ತಿದ್ದೇವೆ. ಅಂಗಡಿಗೆ ಬರಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಅಂದಾಜು ಶೇ 40ರಷ್ಟು ವಹಿವಾಟು ಕಡಿಮೆಯಾಗಿದೆ.

–ಕಾರ್ತಿಕ್‌ ರೆಡ್ಡಿ, ಟೀ ವ್ಯಾಪಾರಿ, ಆರ್‌ಟಿಒ ಕಚೇರಿ ಎದುರು


***

ಸುಮಾರು ಐದು ತಿಂಗಳು ಅಂಗಡಿ ಮುಚ್ಚಿದ್ದೆ. ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ. ಗ್ರಾಹಕರು ಬರುವ ನಿರೀಕ್ಷೆ ಇದೆ. ತಯಾರಿಸಿಟ್ಟುಕೊಂಡ ಆಹಾರ ಪದಾರ್ಥವೂ ಉಳಿದು ನಷ್ಟ ಉಂಟಾಗುತ್ತಿದೆ.

–ಗುರುಮೂರ್ತಿ, ಫಾಸ್ಟ್‌ಫುಡ್‌ ವ್ಯಾಪಾರಿ, ತುರುವನೂರು ರಸ್ತೆ

****

ಸೊಪ್ಪು, ತರಕಾರಿ ಮಾರಾಟಕ್ಕೆ ಒಲವು

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಇಲ್ಲಿನ ಮುಖ್ಯರಸ್ತೆ ಬದಿಯಲ್ಲಿ ಗೋಬಿ, ಪಾನಿಪೂರಿ, ಎಗ್‍ರೈಸ್, ಘೀರೈಸ್, ಫ್ರೈಡ್‍ರೈಸ್, ಫಿಶ್‍ಫ್ರೈ, ಚಿಕನ್‍ ಬಿರಿಯಾನಿ ಸೇರಿ ಹಲವು ಆಹಾರ ತಿನಿಸು ಮಾರಾಟದಿಂದಲೇ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳು ಕೊರೊನಾ ಭೀತಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

ನಗರದ ಚಿತ್ರದುರ್ಗ, ಪಾವಗಡ, ಬಳ್ಳಾರಿ ಮತ್ತು ಬೆಂಗಳೂರು ಮಾರ್ಗದ ಬೀದಿ ಬದಿಯಲ್ಲಿ ರುಚಿಕರ ಪದಾರ್ಥಗಳ ಮಾರಾಟ ಮಾಡುತ್ತಿದ್ದವರಲ್ಲಿ ಅನೇಕರು ಆಂಧ್ರಪ್ರದೇಶದವರು. ಲಾಕ್‍ಡೌನ್ ಸಂದರ್ಭದಲ್ಲಿ ವಹಿವಾಟು ಸ್ಥಗಿತಗೊಳಿಸಿ ಊರಿಗೆ ತೆರಳಿದ್ದಾರೆ. ಮನೆ ಮತ್ತು ಅಂಗಡಿ ಬಾಡಿಗೆ ಕಟ್ಟಲಾಗದೆ ವೃತ್ತಿಯಿಂದ ವಿಮುಖರಾದವರೂ ಇದ್ದಾರೆ. ಇವರಲ್ಲಿ ಅನೇಕರು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಲಾಕ್‌ಡೌನ್‌ ನಿಯಮ ಸಡಿಲಗೊಂಡ ಬಳಿಕ ಕೆಲವರು ಮರಳಿ ಬಂದು ಅಂಗಡಿ ಬಾಗಿಲು ತೆರೆದಿದ್ದಾರೆ. ವಾರವಿಡೀ ನಡೆಯುತ್ತಿದ್ದ ವಹಿವಾಟು ಕೆಲವು ದಿನಗಳಿಗಷ್ಟೆ ಸೀಮಿತಗೊಂಡಿದೆ. ವ್ಯಾಪಾರದಲ್ಲಿ ಚೇತರಿಕೆಯ ಲಕ್ಷಣಗಳು ಗೋಚರಿಸುತ್ತಿಲ್ಲ. ಹೂಡಿದ ಬಂಡವಾಳ ಮರಳದೇ ಕೈ ಸುಟ್ಟುಕೊಂಡಿರುವವರೇ ಹೆಚ್ಚು. ನಷ್ಟ ಅನುಭವಿಸಿದ ಇನ್ನೂ ಕೆಲವರು ಜೀವನ ನಿರ್ವಹಣೆಗೆ ಸೊಪ್ಪು ಮತ್ತು ತರಕಾರಿ ಮಾರಾಟದ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

ಎಲ್ಲೆಡೆ ಸೋಂಕು ಹರಡುತ್ತಿರುವ ಪರಿಣಾಮ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ. ಶೇಂಗಾ ಸುಗ್ಗಿ ಆರಂಭವಾಗಿದ್ದರಿಂದ ಗ್ರಾಮೀಣ ಭಾಗದ ಜನರು ಬರುತ್ತಿಲ್ಲ. ಸೋಂಕಿನ ಭಯದಿಂದ ನಗರದ ಜನರು ಮನೆಯಿಂದ ಹೊರಗೆ ಆಹಾರ ಪದಾರ್ಥ ಸೇವನೆ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಬೀದಿ ಬದಿ ವ್ಯಾಪಾರ ನೆಲ ಕಚ್ಚತೊಡಗಿದೆ. ಬಾಡಿಗೆ ಪಡೆದಿದ್ದ ಗೂಡಂಗಡಿ, ತಳ್ಳುವ ಗಾಡಿ ಮತ್ತು ಪೆಟ್ಟಿಗೆ ಅಂಗಡಿಯ ಬಾಡಿಗೆ ಕಟ್ಟಲಾಗದೇ ವ್ಯಾಪಾರಸ್ಥರು ರಸ್ತೆ ಬದಿಗೆ ತಳ್ಳಿದ್ದಾರೆ.

‘ಗೋಬಿ, ಪಾನಿಪೂರಿ ಮಾರಾಟದಿಂದ ಪ್ರತಿ ದಿನ ಅಂದಾಜು ಎರಡು ಸಾವಿರ ರೂಪಾಯಿ ದುಡಿಮೆ ಆಗುತ್ತಿತ್ತು. ಖರ್ಚು ಕಳೆದು ಸಾವಿರದಷ್ಟು ಹಣ ಉಳಿತಾಯ ಆಗುತ್ತಿತ್ತು. ಈಗ ದಿನವೆಲ್ಲಾ ಕಳೆದರೂ ₹ 400 ವ್ಯಾಪಾರ ನಡೆಯುವುದು ಕಷ್ಟ. ಅಲ್ಲದೇ, ಹಲವು ವಸ್ತುಗಳ ಬೆಲೆ ಹೆಚ್ಚಿದೆ. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಬೀದಿಬದಿ ವ್ಯಾಪಾರಿ ಜಾಕೀರ್.

***

ಹಳಿಗೆ ಮರಳುತ್ತಿದೆ ಬದುಕು

-ಸುವರ್ಣಾ ಬಸವರಾಜ್‌

ಹಿರಿಯೂರು: ‘ಪದವಿ ವ್ಯಾಸಂಗ ಮಾಡುತ್ತಿರುವ ಮಗನಿಗೆ ನೆರವು, ಮನೆಯ ಬಾಡಿಗೆ, ನಿತ್ಯದ ಖರ್ಚು. ಹೇಗಪ್ಪ ಈ ಕಷ್ಟಗಳನ್ನು ಎದುರಿಸುವುದು ಎಂಬುದನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ...’

ನಗರದ ಅರ್ಬನ್ ಬ್ಯಾಂಕ್ ರಸ್ತೆಯಲ್ಲಿ ಸಂಜೆ 5ರಿಂದ ರಾತ್ರಿ 9ರವರೆಗೆ ಮಿರ್ಚಿ, ಬೋಂಡಾ, ಪಕೋಡ ತಯಾರಿಸಿ ಮಾರಾಟ ಮಾಡುವ ಮಂಜುಳಾ ಅವರ ಮಾತುಗಳಿವು. ಮೂರು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಹಿರಿಯೂರಿನ ಅರ್ಬನ್ ಬ್ಯಾಂಕ್ ರಸ್ತೆಯಲ್ಲಿ ಮಿರ್ಚಿ, ಬೋಂಡಾ ತಯಾರಿಸುತ್ತಿರುವ ಮಂಜುಳ

‘ಚಿಕ್ಕ ಮನೆಯೊಂದರಲ್ಲಿ ಬಾಡಿಗೆ ಇದ್ದೇವೆ. ₹ 10 ಸಾವಿರ ಮುಂಗಡ ಹಾಗೂ ₹ 2,500 ಮಾಸಿಕ ಬಾಡಿಗೆ. ಪತಿ–ಮಗನ ಚಿಕ್ಕ ಸಂಸಾರ ನಮ್ಮದು. ಈ ವ್ಯವಹಾರ ಆರಂಭಿಸುವ ಮೊದಲು ಹುಳಿಯಾರು ರಸ್ತೆಯ ಕಾಲೇಜೊಂದರಲ್ಲಿ ಡಿ ಗ್ರೂಪ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೆ. ಮೂರು ವರ್ಷದ ಹಿಂದೆ ಕಾಲೇಜು ಮುಚ್ಚಿ ಹೋಯಿತು. ಮಿರ್ಚಿ, ಬೋಂಡಾ, ಪಕೋಡ ಕೈಹಿಡಿಯಿತು’ ಎಂದು ಬದುಕಿನ ಸಂಕಷ್ಟಗಳನ್ನು ತೆರೆದಿಟ್ಟರು ಮಂಜುಳಾ.

‘ಬದುಕು ಹಳಿಗೆ ಮರಳಿತು ಎನ್ನುವಾಗಲೇ ಲಾಕ್‌ಡೌನ್‌ ಬರಸಿಡಿಲಿನಂತೆ ಎರಗಿತು. ನೆಮ್ಮದಿಯಿಂದ ಸಾಗುತ್ತಿದ್ದ ಬದುಕನ್ನು ಕಿತ್ತುಕೊಂಡಿತು. ಮನೆಯ ಮಾಲೀಕರು ಲಾಕ್‌ಡೌನ್ ತೆರವಿನ ನಂತರ ಬಾಡಿಗೆ ಕೊಡಿ ಎಂದಿದ್ದರಿಂದ ಸ್ವಲ್ಪ ನೆಮ್ಮದಿ ಸಿಕ್ಕಿತು. ಮನೆಯಲ್ಲಿ ಸುಮ್ಮನೆ ಕೂರಲು ಸಾಧ್ಯವಾಗದೇ ಹೂವು ಕಟ್ಟುತ್ತಿದ್ದೆ. ಕೈಗೆ ಬರುತ್ತಿದ್ದ ಅಲ್ಪಸ್ವಲ್ಪ ಹಣ ಪಡಿತರಕ್ಕೂ ಸಾಲುತ್ತಿರಲಿಲ್ಲ’ ಎಂದು ಕ್ಷಣಹೊತ್ತು ಮೌನವಾದರು.

‘ಲಾಕ್‌ಡೌನ್‌ ತೆರವಿನ ಬಳಿಕ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿದೆ. ಪತಿ ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದಾರೆ. ರಸ್ತೆ ಬದಿ ಆಹಾರ ತಿನಿಸು ಮಾರಾಟದಿಂದ ದಿನಕ್ಕೆ ₹ 100–150 ಉಳಿಯುತ್ತಿದೆ. ಆದರೂ, ಹಿಂದಿನಷ್ಟು ವಹಿವಾಟು ನಡೆಯುತ್ತಿಲ್ಲ’ ಎಂದರು.

‘ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕು. ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ರೈತರಿಗೆ ನೀಡುವಂತೆ ಶೂನ್ಯ ಬಡ್ಡಿಯಲ್ಲಿ ₹20 ಸಾವಿರದವರೆಗೆ ಸಾಲ ನೀಡಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT