ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ

ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಡಿಎಚ್‌ಒ ಡಾ.ರಂಗನಾಥ್‌ ಎಚ್ಚರಿಕೆ
Last Updated 18 ನವೆಂಬರ್ 2022, 5:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 17 ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಕೇಂದ್ರಗಳು ಸ್ಥಗಿತಗೊಂಡಿವೆ. ಸದ್ಯ ಜಿಲ್ಲೆಯಲ್ಲಿ ಸರ್ಕಾರಿ 4 ಹಾಗೂ ಖಾಸಗಿಯಲ್ಲಿ 53 ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌. ರಂಗನಾಥ್‌ ತಿಳಿಸಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಗರ್ಭಧಾರಣಾ ಪೂರ್ವ ಮತ್ತು ಪ್ರಸರ್ವ ಪೂರ್ವ ಲಿಂಗಪತ್ತೆ ತಂತ್ರವಿಧಾನಗಳ ನಿಷೇಧ (ಪಿಸಿ & ಪಿಎನ್‌ಡಿಟಿ) ಕಾಯ್ದೆ ಅನುಷ್ಠಾನ ಕುರಿತ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪಿಸಿ ಅಂಡ್‌ ಪಿಎನ್‌ಡಿಟಿ ಕಾಯ್ದೆಯನ್ವಯ ನಿಯಮಾನುಸಾರ ಅನುಮತಿ ಪಡೆದು ನಡೆಯುತ್ತಿರುವ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಪ್ರತಿ ಪ್ರಕರಣದ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಆಯಾ ದಿನವೇ ನಮೂನೆ–ಎಫ್‌ನಲ್ಲಿ ವರದಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈ ಕಾರ್ಯ ಮಾಡದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗು
ವುದು’ ಎಂದು ಎಚ್ಚರಿಸಿದರು.

‘ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು ಶಿಕ್ಷಾರ್ಹ ಅಪರಾಧವಾಗಿದೆ. ಪುರುಷ-ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಸ್ಕ್ಯಾನಿಂಗ್‌ ನಡೆಸುವ ಸ್ಥಳದಲ್ಲಿ ಯಾವುದೇ ಬಗೆಯ ಛಾಯಾಚಿತ್ರ, ದೇವರ ಫೋಟೊ ಹಾಕುವಂತಿಲ್ಲ. ಈ ಎಲ್ಲ ನಿಯಮಗಳನ್ನು ಪ್ರತಿ ಸ್ಕ್ಯಾನಿಂಗ್‌ ಕೇಂದ್ರಗಳಲ್ಲೂ ತಪ್ಪದೇ ಪಾಲಿಸಬೇಕು. ಲಿಂಗಪತ್ತೆ ಕಾನೂನು ಉಲ್ಲಂಘಿಸಿ
ದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ವೈದ್ಯರಿಗೂ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ ಐದು ವರ್ಷಗಳವರೆಗೆ ನಿಷೇಧ ವಿಧಿಸ
ಲಾಗುತ್ತದೆ’ ಎಂದು ತಿಳಿಸಿದರು.

‘ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಸೌಲಭ್ಯ ಹೊಂದಿರುವ ಎಲ್ಲಾ ಸೆಂಟರ್‌ಗಳು, ಜೆನಿಟಿಕ್‌ ಕ್ಲಿನಿಕ್‌ಗಳು, ಜೆನಿಟಿಕ್
ಪ್ರಯೋಗಾಲಯಗಳು ಕೆಪಿಎಂಇನಡಿ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಸ್ಕ್ಯಾನಿಂಗ್‌ ಸೆಂಟರ್‌ ನೋಂದಣಿಗೆ
₹ 25 ಸಾವಿರ ಹಾಗೂ ನರ್ಸಿಂಗ್‌ ಹೋಂ ಅಥವಾ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್‌ ಯಂತ್ರ ಅಳವಡಿಕೆಗೆ ₹ 35 ಸಾವಿರ ಶುಲ್ಕ ನಿಗದಿ
ಪಡಿಸಲಾಗಿದೆ. ಅನುಮತಿಗೆ ಅರ್ಜಿ ಸಲ್ಲಿಸುವುದನ್ನು ಸಂಪೂರ್ಣ ಆನ್‌ಲೈನ್‌ ಮಾಡಲಾಗಿದೆ’ ಎಂದರು.

ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಸೌಮ್ಯ, ಸದಸ್ಯರಾದ ಡಾ.ರೇಣು
ಪ್ರಸಾದ್‌, ಡಾ.ಸತ್ಯನಾರಾಯಣ, ಎಂ.ಉಮೇಶ್‌, ಕೆ.ಪಿ.ಮೀನಾಕ್ಷಿ, ಗಾಯಿತ್ರಿ ಶಿವರಾಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್‌ ಬಿ.ವಿ, ಮೈರಾಡ ಸಂಸ್ಥೆಯ ಸುನೀಲ್‌ ಇದ್ದರು.

ಲಿಂಗಾನುಪಾತದಲ್ಲಿ ಏರಿಳಿಕೆ

ಹೆಲ್ತ್‌ ಮ್ಯಾನೇಜ್‌ಮೆಂಟ್‌ ಇನ್‌ಫಾರ್ಮೇಷನ್‌ ಸಿಸ್ಟಂ (ಎಚ್‌ಎಂಐಎಸ್‌) ಅಂಕಿ ಅಂಶದಂತೆ ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಲಿಂಗಾನುಪಾತದಲ್ಲಿ ಏರಿಳಿಕೆ ಕಂಡುಬಂದಿದೆ. 2016-17 ರಲ್ಲಿ ಒಂದು ಸಾವಿರ ಗಂಡು ಮಗು ಜನನಕ್ಕೆ 948 ಹೆಣ್ಣು ಮಗು ಜನನ ದಾಖಲಾಗಿದೆ.

2017-18 ರಲ್ಲಿ 941, 18-19 ರಲ್ಲಿ 916, 19-20 ರಲ್ಲಿ 928, 20-21 ರಲ್ಲಿ 950, 21-22 ರಲ್ಲಿ 945 ಹಾಗೂ ಈ ವರ್ಷ ಇದುವರೆಗೆ 966 ದಾಖಲಾಗುವ ಮೂಲಕ ಲಿಂಗಾನುಪಾತ ದಲ್ಲಿ ಭರವಸೆ ಮೂಡಿಸಿದೆ. ಲಿಂಗಾನುಪಾತ ವೃದ್ಧಿಗೆ ಪಿಸಿ ಅಂಡ್‌ ಪಿಎನ್‌ಡಿಟಿ ಕಾಯ್ದೆ ಕುರಿತಂತೆ ಐಇಸಿ ಚಟುವಟಿಕೆಗಳು, ಪೋಸ್ಟರ್‌ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು, ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಡಿಎಚ್‍ಒ ಡಾ.ರಂಗನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT