ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ವಿರೋಧ

Last Updated 19 ಮೇ 2020, 11:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾರ್ಮಿಕ ಕಾಯ್ದೆಗಳನ್ನು ಸರ್ಕಾರ ಯಾವ ಕಾರಣಕ್ಕೂ ಸಡಿಲಿಕೆ ಮಾಡಬಾರದು ಎಂದು ಒತ್ತಾಯಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ಪ್ರತಿಭಟನಾಕಾರರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ವಲಸೆ ಕಾರ್ಮಿಕರುನ್ನು ರಕ್ಷಿಸುವಂತೆ ಹಾಗೂ ಮಾನವೀಯತೆ ದೃಷ್ಟಿಯಿಂದ ನಡೆಸಿಕೊಳ್ಳುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರಪೂರ್ವತಯಾರಿ ಇಲ್ಲದೇ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರಿಂದ ಕೋಟ್ಯಂತರ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು ಊರುಗಳಿಗೆ ಹಿಂದಿರುಗಲಾರಂಭಿಸಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ಊರು ತಲುಪಲು ಟಿಕೆಟ್‌ಗೂ ಹಣವಿಲ್ಲದೇ ಪರದಾಡಿದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ನೂರಾರು ವಲಸೆ ಕಾರ್ಮಿಕರು ಅಪಘಾತಗಳಿಗೆ ಬಲಿಯಾಗಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ನಗರಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಸೂಕ್ತ ಆಹಾರ, ವಸತಿ ಹಾಗೂ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕು. ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕೋರಿದರು.

ಇದಕ್ಕೂ ಮುನ್ನ ಅಖಿಲ ಭಾರತ ವಲಸೆ ಕಾರ್ಮಿಕರ ರಕ್ಷಣೆ ದಿನ ಆಚರಿಸಲಾಯಿತು. ಮುಖಂಡರಾದ ವಿಜಯ್‌ಕುಮಾರ್, ರವಿಕುಮಾರ್, ವಿನಯ್, ಕುಮುದಾ, ತ್ರಿವೇಣಿ, ಮೇಘನಾ, ಸೈಫುದ್ದೀನ್, ಅಕ್ರಮ್, ಕಿರಣ್, ಜಬೀವುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT