ನರಸಮ್ಮನೇ ಸಂಚಾರಿ ಆಸ್ಪತ್ರೆ, ಔಷಧಾಲಯ

7
ಡಾ.ಶಿವಮೂರ್ತಿ ಮುರುಘಾ ಶರಣರ ಅಭಿಮತ

ನರಸಮ್ಮನೇ ಸಂಚಾರಿ ಆಸ್ಪತ್ರೆ, ಔಷಧಾಲಯ

Published:
Updated:
Deccan Herald

ಚಿತ್ರದುರ್ಗ: ಗಡಿನಾಡು ಪಾವಗಡದ ಗ್ರಾಮೀಣ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಗರ್ಭಿಣಿಯರ ಹೆರಿಗೆ ಮಾಡಿಸಿದ ಸುಲಗಿತ್ತಿ ನರಸಮ್ಮ ಅವರು ಸಂಚಾರಿ ಆಸ್ಪತ್ರೆ, ಔಷಧಾಲಯದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಅಂಬೇಡ್ಕರ್‌ ಆಶಯ ಭಾರತ ಫೌಂಡೇಷನ್‌ ವತಿಯಿಂದ ಕ್ರೀಡಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಸುಲಗಿತ್ತಿ ನರಸಮ್ಮ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಆಧುನಿಕ ಸೌಲಭ್ಯಗಳೇ ಇಲ್ಲದ ಪ್ರದೇಶದಲ್ಲಿ ಐದಾರು ದಶಕ ಸುಲಗಿತ್ತಿಯಾಗಿ ನರಸಮ್ಮ ಮಾಡಿದ ಸೇವೆ ಅವಿಸ್ಮರಣೀಯ. ಸದ್ದಿಲ್ಲದ ಈ ಜನಸೇವೆ ನೂರಾರು ತಾಯಿ–ಮಕ್ಕಳನ್ನು ಕಾಪಾಡಿದೆ. ಗರ್ಭಿಣಿಯರ ಮನೆಗೆ ತೆರಳಿ ನಿರಾತಂಕವಾಗಿ ಹೆರಿಗೆ ಮಾಡಿಸಿದ ಪರಿ ನಿಜಕ್ಕೂ ಶ್ಲಾಘನೀಯ’ ಎಂದರು.

‘ಮಕ್ಕಳಿರಲಿ ಮನೆತುಂಬಾ ಎಂಬ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಹೀಗಾಗಿ, ಹೆರಿಗೆಗಳು ಹೆಚ್ಚಾಗುತ್ತಿದ್ದವು. ಆದರೆ, ಈಗ ಮನೋಭಾವ ಬದಲಾಗಿದೆ. ಕುಟುಂಬ ಯೋಜನೆ ಜಾರಿಗೊಂಡ ಬಳಿಕ ಮಿತ ಸಂತಾನಕ್ಕೆ ಒತ್ತು ನೀಡಲಾಗಿದೆ. ಕಡಿಮೆ ಮಕ್ಕಳನ್ನು ಹೆರುವುದು ಕೂಡ ದೇಶಭಕ್ತಿಯ ಭಾಗವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಹೆಣ್ಣು ಮಗುವಿನ ಬಗೆಗಿನ ತಾತ್ಸಾರವನ್ನು ಇನ್ನೂ ಹೋಗಲಾಡಿಸಲು ಸಾಧ್ಯವಾಗಿಲ್ಲ. ಗಂಡು ಮಗುವಿಗೆ ಹಪಹಪಿಸುವ ದಂಪತಿ ಈಗಲೂ ಇದ್ದಾರೆ. ಮಹಿಳೆಯರು ಕೂಡ ಪುರುಷರಷ್ಟೇ ಸರಿಸಮವಾಗಿ ಸಾಧನೆ ಮಾಡುತ್ತಿದ್ದಾರೆ. ಶ್ರೇಷ್ಠ– ಕನಿಷ್ಠ ಎಂಬುದನ್ನು ಭಾವನೆಯನ್ನು ತೊಡೆದುಹಾಕಿ, ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕಿದೆ’ ಎಂದು ಕರೆ ಕೊಟ್ಟರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಕುಮಾರಸ್ವಾಮಿ, ‘ವೈದ್ಯಕೀಯ, ಅರೆ ವೈದ್ಯಕೀಯ ಶಿಕ್ಷಣ ಪಡೆದ ಬಹುತೇಕರು ಗ್ರಾಮೀಣ ಸೇವೆಗೆ ಬರುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೂ ಸವಾಲಾಗಿದೆ. ಹೆರಿಗೆಯಂತಹ ಸ್ವಾಭಾವಿಕ ಕ್ರಿಯೆಯ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡುವ ಚಿಂತನೆ ಇದೆ’ ಎಂದು ಹೇಳಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ತಿಂಗಳಿಗೆ ಸುಮಾರು 2,800 ಗರ್ಭಿಣಿಯರು ನೋಂದಣಿಯಾಗುತ್ತಿದ್ದಾರೆ. ಎರಡೂವರೆ ಸಾವಿರಕ್ಕೂ ಹೆಚ್ಚು ಹೆರಿಗೆಗಳು ಪ್ರತಿ ತಿಂಗಳು ಆಗುತ್ತಿವೆ. ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸುವ ಪ್ರವೃತ್ತಿ ಹೆಚ್ಚಾಗಿದ್ದರಿಂದ ತಾಯಿ–ನವಜಾತ ಶಿಶು ಮರಣ ಪ್ರಮಾಣ ಜಿಲ್ಲೆಯಲ್ಲಿ ತಗ್ಗಿದೆ’ ಎಂದರು.

‘ಆಧುನಿಕ ವೈದ್ಯಕೀಯ ಪದ್ಧತಿ ಪ್ರಚಲಿತಕ್ಕೆ ಬಂದಿದ್ದರೂ ಪಾರಂಪರಿಕ ವೈದ್ಯಕೀಯ ಪದ್ಧತಿ ಜನಮನ್ನಣೆಗೆ ಪಾತ್ರವಾಗಿದೆ. ಭಾರತದ ಈ ವೈದ್ಯಕೀಯ ಪದ್ಧತಿಯ ಕೌಶಲಗಳನ್ನು ಅರಿಯುವ ಪ್ರಕ್ರಿಯೆಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.

ಆದಿ ಜಾಂಬವ ಮಠದ ಷಡಾಕ್ಷರಿ ಮುನಿ ಸ್ವಾಮೀಜಿ, ಅಹಿಂದ ಬಳಗದ ರಾಜ್ಯ ಘಟಕದ ಅಧ್ಯಕ್ಷ ಮುರುಘರಾಜೇಂದ್ರ ಒಡೆಯರ್‌, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್‌, ಜಿಲ್ಲಾ ಸರ್ಜನ್‌ ಡಾ.ಜಯಪ್ರಕಾಶ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈ.ಮಹೇಶ್‌ ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !