ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಪಾಠ ಮುಗಿಸಿದ ಕೃಷಿ ಶಿಕ್ಷಕಿ ಸುಮಂಗಲಮ್ಮ

ರೇಷ್ಮೆ ಕೃಷಿ ಅಚ್ಚುಮೆಚ್ಚು * ಅಬಕಾರಿ ಅಧಿಕಾರಿಗಳಿಗೆ ಸಡ್ಡು ಹೊಡೆದು ನೀರಾ ಕೃಷಿಗೆ ಕೈಹಾಕಿದ್ದರು
Last Updated 24 ಜೂನ್ 2021, 4:53 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ನಮಗೆ ಏನಾದರೂ ಮಾಡಿ ನಾವು ಅದನ್ನು ಎದುರಿಸುತ್ತೇವೆ, ಆದರೆ ನನ್ನನ್ನು ನಂಬಿಕೊಂಡಿರುವ ಹತ್ತಾರು ಕಾರ್ಮಿಕರು ಇದ್ದಾರೆ. ಅವರ ಹೊಟ್ಟೆ ಮೇಲೆ ಹೊಡೆಯಲು ಮಾತ್ರ ಬಿಡುವುದಿಲ್ಲ’ ಎಂದು ಅಬಕಾರಿ ಇಲಾಖಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದು ತಾಲ್ಲೂಕಿನ ಬಿ.ಜಿ. ಕೆರೆಯ ವಸುಂಧರ ಸಸ್ಯಕ್ಷೇತ್ರದ ಮಾಲೀಕರಾದ ಎಸ್.ವಿ. ಸುಮಂಗಲಮ್ಮ.

ಕೋವಿಡ್ ಪ್ರಥಮ ಲಾಕ್‌ಡೌನ್ ವೇಳೆ ತೋಟದಲ್ಲಿ ನೀರಾ ಇಳಿಸುತ್ತಿರುವುದನ್ನು ಪ್ರಶ್ನೆ ಮಾಡಿ ನಿಲ್ಲಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ತಾಕೀತು ಮಾಡಿದಾಗ ಸುಮಂಗಲಮ್ಮ, ‘ನಮಗೂ ಕಾನೂನು ಗೊತ್ತಿದೆ. ನೀವು ಏನಾದರೂ ಮಾಡಿಕೊಳ್ಳಿ ನಾವು ಇಳಿಸುತ್ತೇವೆ. ಇದು ತೆಂಗಿನ ಕೃಷಿ ಮಾಡುವ ಬೆಳೆಗಾರರ ಹಕ್ಕು. ಇದು ಆರೋಗ್ಯಕರ ಪೇಯವಾಗಿದೆ ಎಂದು ಈ ಕೃಷಿಯನ್ನು ಮುಂದುವರಿಸಿದ್ದರು’ ಎಂದು ಬುಧವಾರ ತೋಟದ ಕಾರ್ಮಿಕರು ನೆನಪು ಮಾಡಿಕೊಂಡರು.

70 ಎಕರೆ ಪ್ರದೇಶದಲ್ಲಿ ಪತಿ ತೆಂಗಿನ ಕೃಷಿಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಎಸ್.ವಿ. ವೀರಭದ್ರಪ್ಪ ದಂಪತಿ ರೇಷ್ಮೆ ಕೃಷಿ, ತೆಂಗು, ಹುಣಸೆ, ಶ್ರೀಗಂಧ, ಅಜೋಲಾ, ಹಸು ಸಾಕಣೆ, ಎರೆಹುಳು ಸಾಕಣೆ, ಮೇಕೆ ಸಾಕಣೆ, ರೇಷ್ಮೆಗೂಡು ಉತ್ಪಾದನೆ, ಬಾಳೆ, ಹೆಬ್ಬೇವು ಸೇರಿದಂತೆ ಹಲವು ಕೃಷಿಗಳನ್ನು ಮಾಡಿದ್ದರು. ಜಿಲ್ಲೆಯ ಮಟ್ಟಿಗೆ ಈ ಸಸ್ಯಕ್ಷೇತ್ರ ಕೃಷಿ ಅಧ್ಯಯನ ಕೇಂದ್ರವಾಗಿತ್ತು. ಇಲ್ಲಿ ನಡೆದಿರುವ ಪ್ರಾತ್ಯಕ್ಷಿಕೆಗಳಿಗೆ ಲೆಕ್ಕವಿಲ್ಲ ಎನ್ನುತ್ತಾರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಡಾ.ಆರ್. ವಿರೂಪಾಕ್ಷಪ್ಪ.

ಕೃಷಿ, ತೋಟಗಾರಿಕೆಯ ರಾಜ್ಯಮಟ್ಟದ ನೂರಾರು ಪ್ರಾತ್ಯಕ್ಷಿಕೆಗಳು, ಸಂವಾದಗಳಿಗೆ ಈ ಸಸ್ಯಕ್ಷೇತ್ರ ಸಾಕ್ಷಿಯಾಗಿದೆ. ನಿತ್ಯ 100ಕ್ಕೂ ಹೆಚ್ಚು ಕಾರ್ಮಿಕರಿಗೆ ಇಲ್ಲಿ ಕೆಲಸ ನೀಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರವಾಸಿ ಸ್ಥಳವಾಗಿದೆ. ತಾಲ್ಲೂಕಿನ ಮಟ್ಟಿಗೆ ಸಸ್ಯಕ್ಷೇತ್ರ ಜನರಿಗೆ ದೊಡ್ಡ ಮಟ್ಟದ ಆಸ್ತಿ ಎಂದು
ಹೇಳಿದರು.

ಟ್ರ್ಯಾಕ್ಟರ್ ಚಾಲನಾ ಪರವಾನಗಿಯನ್ನು ರಾಜ್ಯದಲ್ಲಿ ಪಡೆದ ಪ್ರಥಮ ಮಹಿಳೆ ಎಂಬ ಖ್ಯಾತಿಗೆ ಸುಮಂಗಲಮ್ಮ ಪಾತ್ರರಾಗಿದ್ದರು. ತೋಟದಲ್ಲಿ ಸ್ವತಃ ಅವರು ಟ್ರ್ಯಾಕ್ಟರ್ ಚಲಾಯಿಸಿ ಕೃಷಿ ಮಾಡುತ್ತಿದ್ದರು. ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಅವರ ಕನಸಾಗಿತ್ತು ಎಂದು ಹಲವರು ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT