ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ್‌ ಬಂದ್‌’ ಬೆಂಬಲಿಸಲು ಸಂಯುಕ್ತ ಹೋರಾಟ–ಕರ್ನಾಟಕ ಮನವಿ

ರೈತರ, ಕಾರ್ಮಿಕರ ಹೋರಾಟಕ್ಕೆ ಹಲವು ಸಂಘಟನೆಗಳ ಬೆಂಬಲ
Last Updated 26 ಸೆಪ್ಟೆಂಬರ್ 2021, 17:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಮೂರು ಕೃಷಿ ಕಾಯ್ದೆ, ಕಾರ್ಮಿಕ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ಹಿಂಪಡೆಯುವಂತೆ, ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ, ಬೆಲೆ ಏರಿಕೆ ನಿಯಂತ್ರಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ–ಕರ್ನಾಟಕ ಸೆ.27ರಂದು ಕರೆನೀಡಿರುವ ‘ಭಾರತ್‌ ಬಂದ್‌’ಗೆ ಜಿಲ್ಲೆಯ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಇದರಿಂದ ಸೋಮವಾರ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.

ಬಂದ್‌ ಬೆಂಬಲಿಸುವ ಸಂಘಟನೆಗಳು ಸಭೆ ನಡೆಸಿದ್ದು, ಒಮ್ಮತದ ತೀರ್ಮಾನ ಕೈಗೊಂಡವು. ರೈತ–ಕಾರ್ಮಿಕರ ಪರವಾದ ಹೋರಾಟವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದವು.

ಸಂಯುಕ್ತ ಹೋರಾಟ–ಕರ್ನಾಟಕದ (ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ಈ ಹೋರಾಟಕ್ಕೆ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕಟ್ಟಡ ಕಾರ್ಮಿಕ ಸಂಘಟನೆ, ಸಿಐಟಿಯು, ದಲಿತ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಬಂದ್‌ಗೆ ಕೈಜೋಡಿಸಲು ರಾಜ್ಯ ಬಂದ್‌ಗೆ ತೀರ್ಮಾನಿಸಿವೆ.

‘ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 6ಕ್ಕೆ ಬಂದ್‌ಗೆ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡಲಾಗುವುದು. ಈಗಾಗಲೇ ಆಟೊ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಸಂಘವನ್ನು ಸಂಪರ್ಕಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೋಟೆಲ್‌ ಮಾಲೀಕರು ಹಾಗೂ ಮಾರುಕಟ್ಟೆಯ ವ್ಯಾಪಾರಿಗಳ ಬಳಿಯೂ ಚರ್ಚಿಸಿದ್ದೇವೆ. ಅದರಲ್ಲಿ ಕೆಲವರು ಬೆಂಬಲ ನೀಡುತ್ತಿದ್ದಾರೆ’ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ. ಶಂಕರಪ್ಪ ತಿಳಿಸಿದ್ದಾರೆ.

ಬಂದ್‌ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದೆ. ಒತ್ತಾಯಪೂರ್ವಕವಾಗಿ ಬಂದ್‌ ನಡೆಸದಂತೆ ಹೋರಾಟಗಾರರಿಗೆ ಸೂಚನೆ ನೀಡಿದೆ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಮುಖ ವೃತ್ತ, ಮಾರುಕಟ್ಟೆ ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲು ತೀರ್ಮಾನಿಸಿದೆ.

ಸರ್ಕಾರಿ ಕಚೇರಿಗಳು ಎಂದಿನಂತೆ ಬಾಗಿಲು ತೆರೆಯಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಸಂಚರಿಸಲಿವೆ. ರಾಷ್ಟ್ರೀಯ ಕಿಸಾನ್‌ ಸಂಘ ಸೇರಿ ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT